ಬ್ರಹ್ಮಾವರ :ಪತ್ನಿಗೆ ಮೊಬೈಲ್ ಗೀಳು ; ಇಡೀ ದಿನ ಅದನ್ನೇ ನೋಡ್ತಾಳೆಂದು ಸಂಶಯಪಟ್ಟು ಜಗಳ, ಕತ್ತಿಯಿಂದ ಕಡಿದು ಕೊಂದೇ ಬಿಟ್ಟ ಧೂರ್ತ ಪತಿರಾಯ ! ಬ್ರಹ್ಮಾವರದಲ್ಲಿ ವಿಲಕ್ಷಣ ಘಟನೆ.

ಮೃತರನ್ನು ಹೊಸಮಠ ನಿವಾಸಿ ರೇಖಾ(27) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ, ಆಕೆಯ ಪತಿ ಕೊಳಂಬೆ ಗ್ರಾಮದ ನಿವಾಸಿ ಗಣೇಶ ಪೂಜಾರಿ(42) ಎಂಬಾತನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗಣೇಶ್ ಪೂಜಾರಿ ವಿಪರೀತ ಮದ್ಯವ್ಯಸನದ ಚಟ ಹೊಂದಿದ್ದ. ಪತ್ನಿ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ವಿಪರೀತ ಕುಡಿದು ಗುರುವಾರ ರಾತ್ರಿ ಮನೆಯಲ್ಲಿ ಜಗಳಕ್ಕಿಳಿದಿದ್ದು ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ.
ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಹಾಗೂ ರೇಖಾಗೆ 8 ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ರೇಖಾ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸಕ್ಕಿದ್ದಳು. ಈ ಮಧ್ಯೆ ಗಣೇಶ್, ಆಕೆಯ ಮೊಬೈಲ್ ಗೀಳಿನ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿ 11.30ರ ವೇಳೆಗೆ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡಿದ್ದು ಕತ್ತಿಯಿಂದ ಕಡಿದಿದ್ದಾನೆ. ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಮನೆಯಿಂದ ಓಡಿ ಹೋಗಿದ್ದ ಆರೋಪಿ ಗಣೇಶ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.