ಮಂಗಳೂರು : ಜೈಲಿನಲ್ಲಿ ಮತ್ತೆ ಹೊಡೆದಾಟ ; ಪುತ್ತೂರು ಮೂಲದ ವಿಚಾರಣಾಧೀನ ಕೈದಿಗೆ ತೀವ್ರ ಹಲ್ಲೆ, ಉಳ್ಳಾಲದ ರೌಡಿ ಕೈದಿಗಳ ಕೃತ್ಯ..!!
Thursday, June 26, 2025
ಮಂಗಳೂರು : ನಗರದ ಕೊಡಿಯಾಲ್ ಬೈಲಿನ ಸಬ್ ಜೈಲಿನಲ್ಲಿ ಎರಡು ಕೋಮಿನ ಕೈದಿಗಳು ಮತ್ತೆ ಹೊಡೆದಾಡಿಕೊಂಡಿದ್ದು ಗಾಯಗೊಂಡ ಒಬ್ಬಾತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲದ ನಟೋರಿಯಸ್ ರೌಡಿ ಮುಖ್ತಾರ್ ಹಾಗೂ ಸಹಚರರು ಸೇರಿ ಸಹ ಕೈದಿ ಕೇಶವ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿದ್ದಾರೆ ಎನ್ನಲಾಗುತ್ತಿದ್ದು ಈ ವೇಳೆ ಒಬ್ಬನ ಮೇಲೆ ತೀವ್ರ ಹಲ್ಲೆಯಾಗಿದೆ. ಹಲ್ಲೆಯಿಂದ ಗಾಯಗೊಂಡ ಕೈದಿ ಪುತ್ತೂರು ಮೂಲದ ಕೇಶವನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಚಾರಣಾಧೀನ ಕೈದಿ ಕೇಶವ 2023ರ ನ.6ರಂದು ಪುತ್ತೂರಿನ ಕಲ್ಲೇಗ ಎಂಬಲ್ಲಿ ನಡೆದಿದ್ದ ಹುಲಿ ವೇಷ ತಂಡದ ನಾಯಕ ಅಕ್ಷಯ್ ಕಲ್ಲೇಗ ಎಂಬಾತನ ಕೊಲೆ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಉಳ್ಳಾಲ ಧರ್ಮನಗರ ನಿವಾಸಿಯಾಗಿರುವ ಮಹಮ್ಮದ್ ಮುಕ್ತಾರ್, 15 ಪ್ರಕರಣಗಳಲ್ಲಿ ಆರೋಪಿಯಾಗಿದ್ದು, 2022ರ ಜುಲೈನಲ್ಲಿ ಈತನ ಕಾಲಿಗೆ ಗುಂಡಿಕ್ಕಿ ಬಂಧಿಸಲಾಗಿತ್ತು.
ಜೈಲಿಗೆ ಬರ್ಕೆ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ತಿಂಗಳಿನಿಂದ ಜೈಲಿನ ಒಳಗಡೆ ಹಲವು ಬಾರಿ ಕೈದಿಗಳ ನಡುವೆ ಹೊಡೆದಾಟ ನಡೆದಿದೆ.