ಮಂಗಳೂರು: ಕಲಿಕೆಯಲ್ಲಿ ಒತ್ತಡ, ತಲೆನೋವು! ಡೆತ್ ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ; ಕಿಟಕಿಯಲ್ಲೇ ನೇಣು ಬಿಗಿದ ರೀತಿ ಪತ್ತೆ..!
ಉಳ್ಳಾಲ : ಓದಿನಲ್ಲಿ ವಿಪರೀತ ಒತ್ತಡಕ್ಕೊಳಗಾಗಿ, ತಲೆನೋವಿನಿಂದ ಬಳಲುತ್ತಿದ್ದ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತಲಪಾಡಿ ದೇವಿಪುರದ ಶಾರದಾ ವಿದ್ಯಾಲಯದ ಆವರಣದ ಸಿಬ್ಬಂದಿ ವಸತಿ ಗೃಹದಲ್ಲಿ ನಡೆದಿದೆ.
ಮಂಗಳೂರು ಬೆಂದೂರ್ ವೆಲ್ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ದ್ವಿತೀಯ ಸಾಲಿನ ಬಿಎ ವ್ಯಾಸಂಗ ನಡೆಸುತ್ತಿದ್ದ ವಿದ್ಯಾರ್ಥಿನಿ ಶ್ರೇಯಾ (19) ಆತ್ಮಹತ್ಯೆಗೈದ ವಿದ್ಯಾರ್ಥಿನಿ.
ತಲಪಾಡಿ ನಾರ್ಲ ನಿವಾಸಿಯಾದ ಶ್ರೇಯಾ ತಾಯಿ ಪುಷ್ಪಲತಾ ಅವರು ದೇವಿಪುರದ ಶಾರದಾ ವಿದ್ಯಾಲಯದಲ್ಲಿ ಅಟೆಂಡರ್ ಕೆಲಸದಲ್ಲಿದ್ದು ಸಂಸ್ಥೆಯ ವಸತಿ ಗೃಹದಲ್ಲೇ ಗಂಡ ಮತ್ತು ಮಕ್ಕಳ ಜೊತೆಯಲ್ಲಿ ನೆಲೆಸಿದ್ದರು.
ಶ್ರೇಯಾ ಎಂದಿನಂತೆ ಸೋಮವಾರ ಬೆಳಗ್ಗೆಯೂ ಕಾಲೇಜಿಗೆ ತೆರಳಿದ್ದಳು. ಸಂಜೆ ಶ್ರೇಯಾ ತಂಗಿ ಶಾಲೆ ಮುಗಿಸಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ನೋಡಿದಾಗ ಮನೆಯ ಬೆಡ್ ರೂಂನ ಕಿಟಕಿಗೆ ಶ್ರೇಯ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.
ಸಾವಿಗೂ ಮುನ್ನ ಶ್ರೇಯಾ ಬರೆದಿರುವ ಡೆತ್ ನೋಟ್ ಪೊಲೀಸರಿಗೆ ದೊರೆತಿದ್ದು, ಓದಿನಲ್ಲಿ ಕಳೆದ ಎರಡು ತಿಂಗಳಿನಿಂದ ವಿಪರೀತ ಒತ್ತಡ ಎದುರಿಸುತ್ತಿದ್ದು, ಸಹಿಸದ ತಲೆ ನೋವಿನಿಂದ ಬಳುತ್ತಿದ್ದೇನೆಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಶ್ರೇಯಾ ಇತ್ತೀಚೆಗೆ ಬರೆದಿದ್ದ ಪರೀಕ್ಷೆಯಲ್ಲೂ ಒಂದು ವಿಷಯದಲ್ಲಿ ಫೇಲ್ ಆಗಿದ್ದಳಂತೆ. ಉಳ್ಳಾಲ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.