ಮಂಗಳೂರು :ಕದ್ರಿ ಕೈಬಟ್ಟಲ್ ; ಭಾರೀ ಮಳೆಗೆ ಮನೆಯ ಮೇಲೆ ಕುಸಿದು ಬಿದ್ದ ತಡೆಗೋಡೆ, ಬಡ ಕುಟುಂಬದ ಮನೆಗೆ ಅಪಾಯ.

ಮಂಗಳೂರು, ಜೂನ್ 15 : ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಮಂಗಳೂರಿನಲ್ಲಿ ಹಲವೆಡೆ ಧರೆ ಕುಸಿತ ಉಂಟಾಗಿದೆ. ನಗರದ ಕದ್ರಿ ಕೈಬಟ್ಟಲ್ ಎಂಬಲ್ಲಿ ಗುಡ್ಡದ ಬದಿಯಿರುವ ಮನೆಯೊಂದಕ್ಕೆ ಕಾಂಕ್ರೀಟ್ ತಡೆಗೋಡೆ ಮತ್ತು ಮಣ್ಣು ಕುಸಿದು ಬಿದ್ದಿದ್ದು, ಇಡೀ ಮನೆಯೇ ಕುಸಿದು ಹೋಗುವ ಅಪಾಯಕ್ಕೀಡಾಗಿದೆ.
ಕದ್ರಿ ಪಾರ್ಕ್ ಕೆಳಭಾಗದ ಬೃಹತ್ ಅಪಾರ್ಟ್ಮೆಂಟ್ ಬಳಿಯೇ ಗುಡ್ಡದ ಬದಿಯಲ್ಲಿ ಉಷಾ ಅಶೋಕ್ ಎಂಬವರ ಮನೆಯಿದ್ದು, ಶನಿವಾರವೇ ಗುಡ್ಡ ಮತ್ತು ಮೇಲ್ಭಾಗದಲ್ಲಿ ಹಾಕಿದ್ದ ತಡೆಗೋಡೆ ಕುಸಿದು ಬಿದ್ದಿದೆ. ಮನೆಯ ಕೆಳಭಾಗದಲ್ಲಿ ಗುಂಡಿಯಿದ್ದು, ಮೇಲ್ಭಾಗದ ಮಣ್ಣು ಮತ್ತು ಮರ ಕುಸಿದು ಮನೆಯ ಒಂದು ಪಾರ್ಶ್ವಕ್ಕೆ ಬಿದ್ದಿದೆ. ಅಡುಗೆ ಕೋಣೆಯ ಒಳಗಡೆ ಮಣ್ಣು ತುಂಬಿಕೊಂಡಿದೆ. ಮಳೆನೀರು ಕೂಡ ಬೀಳುತ್ತಿದೆ. ಮನೆಯ ಎದುರಿನಲ್ಲಿ ಬಿರುಕು ಬಿಟ್ಟಿದ್ದು ಸಂಪೂರ್ಣ ಕುಸಿದು ಹೋಗುವ ಅಪಾಯದಲ್ಲಿದೆ.



ಈ ಬಗ್ಗೆ ಮಹಾನಗರ ಪಾಲಿಕೆ ದೂರು ನೀಡಲಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಬಂದು ಹೋಗಿದ್ದಾರೆಂಬ ಮಾಹಿತಿಯನ್ನು ಉಷಾ ತಿಳಿಸಿದ್ದಾರೆ. ಆದರೆ ಮನೆಯಲ್ಲಿ ಉಳಿಯುವ ಸ್ಥಿತಿ ಇಲ್ಲ. ಹೀಗಾಗಿ ಪಕ್ಕದ ಬೇರೊಂದು ಮನೆಯಲ್ಲಿ ರಾತ್ರಿ ವೇಳೆ ಆಶ್ರಯ ಪಡೆಯುತ್ತಿದ್ದಾರೆ. ಉಷಾ ಅವರ ಪತಿ ಅಶೋಕ್ ಅನಾರೋಗ್ಯದಲ್ಲಿದ್ದು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದಾರೆ. ಇಬ್ಬರು ಮಕ್ಕಳಿದ್ದರೂ, ಬಡ ಕುಟುಂಬಕ್ಕೆ ಆಸರೆ ಇಲ್ಲದಾಗಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ತುರ್ತಾಗಿ ವ್ಯವಸ್ಥೆ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.