ಕರ್ನಾಟಕ: 8 ಲಕ್ಷಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಸ್ಥಗಿತ ; ಉದ್ಯೋಗ ಕಳೆದುಕೊಂಡ 1 ಲಕ್ಷಕ್ಕೂ ಅಧಿಕ ಮಂದಿ..!!

ಬೆಂಗಳೂರು: ಹೈಕೋರ್ಟ್ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲಿ ಸೋಮವಾರದಿಂದ ಅಧಿಕೃತವಾಗಿ 8 ಲಕ್ಷಕ್ಕೂ ಅಧಿಕ ಬೈಕ್‌ಟ್ಯಾಕ್ಸಿಗಳು ಸ್ಥಗಿತಗೊಂಡಿವೆ. ಹೀಗಾಗಿ ಇನ್ನು ಮುಂದೆ ಬೈಕ್ ಟ್ಯಾಕ್ಸಿಗಳು ಕಾಣಿಸಿಕೊಂಡರೆ ಸಾರಿಗೆ ಇಲಾಖೆ ಅಧಿಕಾರಿಗಳು ಬಲೆ ಬೀಸಲಿದ್ದಾರೆ. ಆದರೆ, ಈ ಸಂಬಂಧ ಹೈಕೋರ್ಟ್‌ನಲ್ಲಿ ಜೂ.24ಕ್ಕೆ ವಿಚಾರಣೆ ನಿಗದಿಯಾಗಿದ್ದು, ಅಂತಿಮ ಆದೇಶ ಹೊರ ಬೀಳುವ ಸಾಧ್ಯತೆ ಇದೆ.
ಇನ್ನು, ಬೈಕ್ ಟ್ಯಾಕ್ಸಿ ನಿಷೇಧದಿಂದ 1 ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗಿದ್ದು, ಇದನ್ನು ಮರು ಪರಿಶೀಲಿಸಲು ಆಗ್ರಹಗಳೂ ಕೇಳಿಬಂದಿವೆ.
ಇನ್ನು ಹೈಕೋರ್ಟ್‌ನ ಇತ್ತೀಚಿನ ಆದೇಶದ ಅನು ಸಾರವಾಗಿ 2025ರ ಜೂನ್ 16ರಿಂದ ಕರ್ನಾಟಕದಲ್ಲಿ ನಮ್ಮ ಬೈಕ್‌ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಹೈಕೋರ್ಟ್ ನಿರ್ದೇಶನ ಪಾಲಿಸುತ್ತೇವೆ ಎಂಬುದಾಗಿ ಬೈಕ್ ಟ್ಯಾಕ್ಸಿ ಸೇವೆಗಳ ಸ್ಥಗಿತ ಕುರಿತು ಆ್ಯಪ್ ಮೂಲಕ ತನ್ನ ಗ್ರಾಹಕರಿಗೆ ರ್ಯಾಪಿಡೋ ಕಂಪೆನಿ ಮಾಹಿತಿ ನೀಡಿದೆ.
ನಿಷೇಧದಿಂದ ನಷ್ಟವೇನು ?
ರಾಜ್ಯದಲ್ಲಿ ಲಕ್ಷಾಂತರ ಮಂದಿ ಬೈಕ್‌ಟ್ಯಾಕ್ಸಿ ಸೇವೆಯನ್ನೇ ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳು, ದಿನಗೂಲಿ ನೌಕರರು ಸಹಿತ ಬಹುತೇಕ ನಿರುದ್ಯೋಗಿ ಗಳಿಗೆ ಇದು ಆಸರೆಯಾಗಿತ್ತು. ಈಗ ಈ ಬೆಳವಣಿಗೆಯಿಂದ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಹಲವು ಮಂದಿಗೆ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಇನ್ನು ಆಟೋ, ಬಾಡಿಗೆ ಕಾರುಗಳಿಗೆ ದುಪ್ಪಟ್ಟು ಹಣ ತೆತ್ತು ಪ್ರಯಾಣಿಸುತ್ತಿದ್ದವರಿಗೆ ಆಟೋಟ್ಯಾಕ್ಸಿ ವರದಾನವಾಗಿತ್ತು. ಈಗ ಮತ್ತೆ ಆಟೋ, ಟ್ಯಾಕ್ಸಿ ಮೊರೆ ಹೋಗಬೇಕಾಗಿದೆ.