ಬೆಂಗಳೂರು :ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿದು ಕ್ರಿಪ್ಟೋದಲ್ಲಿ ಹೂಡಿಕೆ ಮಾಡುತ್ತಿದ್ದ ಮಾಜಿ ಕಾನ್​ಸ್ಟೇಬಲ್ ನಿಂಗಪ್ಪ​.

ಬೆಂಗಳೂರು :ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿದು ಕ್ರಿಪ್ಟೋದಲ್ಲಿ ಹೂಡಿಕೆ ಮಾಡುತ್ತಿದ್ದ ಮಾಜಿ ಕಾನ್​ಸ್ಟೇಬಲ್ ನಿಂಗಪ್ಪ​.

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳಿಂದ ದಾಳಿಯ ಭೀತಿ ಹುಟ್ಟಿಸಿ ಸರ್ಕಾರಿ ಅಧಿಕಾರಿಗಳಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದುದಾಗಿ ಮಾಜಿ ಪೊಲೀಸ್ ಹೆಡ್ ​ಕಾನ್‌ಸ್ಟೇಬಲ್​ ನಿಂಗಪ್ಪ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.

ಚಿತ್ರದುರ್ಗದ ನಿಂಗಪ್ಪ ಅಲಿಯಾಸ್ ಸಾವಂತ್ ವಿರುದ್ಧ ಲೋಕಾಯುಕ್ತ ಹಿರಿಯ ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿಕೊಂಡು ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗ, ತಾನು ಕಳೆದ ಆರು ತಿಂಗಳಿಂದ ಹಣ ಪಡೆದಿದ್ದು, ಇದೇ ಹಣವನ್ನು ಸಂಬಂಧಿಕರ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದ ನಿಂಗಪ್ಪ: ಸರ್ಕಾರಿ ಅಧಿಕಾರಿಗಳಿಗೆ ದಾಳಿ ಮಾಡುವ ಭಯ ಹುಟ್ಟಿಸಿ ಅವರಿಂದ ಆರು ತಿಂಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ. ಈ ಹಣವನ್ನು ಸಂಬಂಧಿಕರ ಹೆಸರಿನಲ್ಲಿ 13 ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವ ವಿಚಾರ ನಿಂಗಪ್ಪನ ಮೊಬೈಲ್​ನಲ್ಲಿ ಪತ್ತೆಯಾಗಿದೆ. ಹಣದ ಮೂಲ ಪತ್ತೆ ಹಚ್ಚಲು ಕ್ರಿಪ್ಟೋ ವ್ಯಾಲೆಟ್​ಗಳನ್ನು ಫ್ರೀಜ್​ ಮಾಡಿಸಲಾಗಿದೆ. ಯಾವ್ಯಾವ ಅಧಿಕಾರಿಗಳಿಂದ ಎಷ್ಟೆಷ್ಟು ಹಣ ಪಡೆದಿದ್ದರು ಎಂಬುದರ ಕುರಿತು ಹೆಚ್ಚಿನ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಯೊಂದಿಗೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ವಾಟ್ಸ್‌ಆ್ಯಪ್ ಸಂದೇಶಗಳು, ಕರೆ ವಿವರಗಳು ಹಾಗೂ ವಾಟ್ಸ್‌ಆ್ಯಪ್​ ಕರೆಗಳ ಬಗ್ಗೆ ಮಾಹಿತಿ ಶೋಧಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನ್ಯ ವ್ಯಕ್ತಿಗಳು ಲೋಕಾಯುಕ್ತ ಸಂಸ್ಥೆ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ರಾಯಚೂರು, ಯಾದಗಿರಿ, ಚಿಕ್ಕಬಳ್ಳಾಪುರ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದೆಲ್ಲೆಡೆ 2022ರಿಂದ ಈವರೆಗೂ 35 ಪ್ರಕರಣಗಳು ದಾಖಲಾಗಿವೆ.

ಲಂಚ ಸ್ವೀಕಾರದ ಜೊತೆಗೆ ಲಂಚ ನೀಡುವುದು ಅಪರಾಧ. ಸಾರ್ವಜನಿಕ ಹಾಗೂ ಸರ್ಕಾರಿ ನೌಕರರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಾಗೂ ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ವ್ಯಾಜ್ಯಗಳ ಇತ್ಯರ್ಥಕ್ಕಾಗಿ ದೂರುದಾರರನ್ನು ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿ ಸಂಪರ್ಕಿಸಿ ಲಂಚಕ್ಕೆ ಒತ್ತಾಯಿಸುವುದು ಕಂಡುಬಂದರೆ ಕೂಡಲೇ ಅವರ ಹೆಸರು ಹಾಗೂ ಮೊಬೈಲ್ ನಂಬರ್‌ ಸಮೇತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಲೋಕಾಯುಕ್ತ ಬಿ.ಎಸ್.ಪಾಟೀಲ್​ ತಿಳಿಸಿದ್ಧಾರೆ.


IPS​​ ಅಧಿಕಾರಿಯ ಮನೆ ಶೋಧಿಸಿದ ಲೋಕಾಯುಕ್ತ ಅಧಿಕಾರಿಗಳು: ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಪ್ರಕರಣ ಸಂಬಂಧ ಲೋಕಾಯುಕ್ತ ಎಸ್ಪಿಯಾಗಿದ್ದ ಶ್ರೀನಾಥ್ ಮಹದೇವನ್ ಜೋಷಿ ಅವರು ವಾಸವಿರುವ ಕೋರಮಂಗಲದ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ತಿಪ್ಪೇಸ್ವಾಮಿ ನೇತೃತ್ವದ ತಂಡವು ತಪಾಸಣೆ ನಡೆಸಿ ಮನೆಯಲ್ಲಿದ್ದ ಆಸ್ತಿಪತ್ರ ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೂ.19ರಂದು ವಿಚಾರಣೆಗೆ ಹಾಜರಾಗುವಂತೆ ಜೋಷಿ ಅವರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article