ಉಳ್ಳಾಲ :ಒಂದೇ ಮರ ತೆರವಿಗೆ ಸೂಚಿಸಿದ್ದ ಸೋಮೇಶ್ವರ ಪುರಸಭೆ ; ಐದು ಮರಗಳನ್ನ ಕಡಿದು ಹೊತ್ತೊಯ್ದ ಅರಣ್ಯ ಇಲಾಖೆ, ಗೂಡಂಗಡಿ ಮಾಲೀಕನ ಲಾಬಿಗೆ ಅಳಿವಿನಂಚಿನ ಮರಗಳಿಗೆ ರಕ್ಷಕರಿಂದಲೇ ಕೊಡಲಿ !
ಉಳ್ಳಾಲ, ಜೂ.19: ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಅಪಾಯಕಾರಿಯಾಗುವ ಮರಗಳು ಮತ್ತು ಸೋಮೇಶ್ವರ ಬೀಚಲ್ಲಿ ಮುರಿದು ನಿಂತಿದ್ದ ಒಂದು ಗಾಳಿ ಮರವನ್ನ ತೆರವುಗೊಳಿಸುವಂತೆ ಪುರಸಭೆ ಆಡಳಿತವು ಅರಣ್ಯ ಇಲಾಖೆಗೆ ಮನವಿ ಮಾಡಿತ್ತು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಅಪಾಯಕಾರಿ ಆಳದ ಮರಗಳನ್ನ ಹಾಗೆಯೇ ಬಿಟ್ಟು ಸಮುದ್ರ ತೀರದಲ್ಲಿ ಅಳಿವಿನಂಚಿನಲ್ಲಿರುವ ಐದು ಬೃಹತ್ ಗಾತ್ರದ ಗಾಳಿ ಮರಗಳನ್ನ ಕಡಿದು ವಾಹನಗಳಲ್ಲಿ ಸಾಗಾಟ ನಡೆಸಿದ್ದು, ಗಾಳಿ ಮರಗಳನ್ನ ಕಡಿಸಲು ಬೀಚ್ ನಲ್ಲಿ ಕಳೆದ ಕೆಲ ತಿಂಗಳುಗಳಿಂದ ಅನಧಿಕೃತವಾಗಿ ಗೂಡಂಗಡಿಯನ್ನ ತೆರೆದಿರುವ ಕಾಂಗ್ರೆಸಿನ ಪುಢಾರಿಯೋರ್ವ ಅರಣ್ಯ ಇಲಾಖಾಧಿಕಾರಿಗಳ ಮೇಲೆ ಪ್ರಭಾವ ಬೀರಿರುವುದಾಗಿ ತಿಳಿದು ಬಂದಿದ್ದು ಅರಣ್ಯ ಇಲಾಖಾಧಿಕಾರಿಗಳ ನಡೆಯ ವಿರುದ್ಧ ಸ್ಥಳೀಯ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮೇಶ್ವರ, ಉಳ್ಳಾಲದ ಕಡಲ ತೀರದಲ್ಲಿ ಸುಮಾರು ಇಪ್ಪತ್ತು ವರುಷಗಳ ಹಿಂದೆ ಹೇರಳವಾದ ಗಾಳಿ ಮರಗಳ ಸಂಪತ್ತೇ ಇತ್ತು. ಪ್ರವಾಸಿಗರಿಗೆ ಮರಗಳು ನೆರಳು ನೀಡುವುದರ ಜೊತೆಗೆ ಕಡಲಿನ ದೈತ್ಯ ಅಲೆಗಳನ್ನು ತಡೆಯುವ ಶಕ್ತಿ ಹೊಂದಿದ್ದವು. ಕ್ರಮೇಣ ಮರಕಳ್ಳರ ಹಾವಳಿಯಿಂದ ಈ ಪ್ರದೇಶಗಳಲ್ಲಿ ಗಾಳಿ ಮರಗಳು ನಶಿಸಿ ಹೋಗಿದ್ದು ಅಲ್ಲೋ ಇಲ್ಲೋ ಎಂಬಂತೆ ಅಲ್ಪ ಸ್ವಲ್ಪ ಮರಗಳು ಉಳಿದುಕೊಂಡಿವೆ. ತೀರ ಪ್ರದೇಶದ ಗಾಳಿ ಮರಗಳು ಮತ್ತು ಕಾಂಡ್ಲಾ ವನದ ವಿನಾಶದಿಂದಲೇ ಈ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿರೋದಾಗಿ ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದರು.

ಸೋಮೇಶ್ವರ ಬೀಚ್ ನಲ್ಲಿರುವ ಅನಧಿಕೃತ ಗೂಡಂಗಡಿ ಮಾಲೀಕನು ತನ್ನ ಅಂಗಡಿಗೆ ಅಪಾಯಕಾರಿ ಆಗಬಹುದಾದ ಗಾಳಿ ಮರಗಳನ್ನೆಲ್ಲವನ್ನು ಕಡಿಸಿಯೇ ಬಿಡಬೇಕೆಂದು ಪಕ್ಷದ ನಾಯಕರ ಹಿಂದೆ ದುಂಬಾಲು ಬಿದ್ದಿದ್ದನಂತೆ. ಸೋಮೇಶ್ವರ ಪುರಸಭೆ ಆಡಳಿತವು ಪುರಸಭಾ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಕೆಲ ಆಲದ ಮರಗಳ ರೆಂಬೆಗಳು ಮತ್ತು ಸಮುದ್ರ ತೀರದ ಗೂಡಂಗಡಿ ಬಳಿ ಮುರಿದು ನಿಂತಿರುವ ಒಂದು ಗಾಳಿ ಮರವನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಈ ಹಿಂದೆ ಮನವಿ ಮಾಡಿತ್ತು. ಅರಣ್ಯಾಧಿಕಾರಿಗಳು ಮಾತ್ರ ಜನ ನಿಬಿಡ ಪ್ರದೇಶದಲ್ಲಿ ಅಪಾಯಕಾರಿಯಾಗಿರುವ ಆಳದ ಮರಗಳನ್ನ ಹಾಗೆಯೇ ಬಿಟ್ಟು ಸಮುದ್ರ ತೀರದ ಐದು ಬೆಳೆದು ನಿಂತ ಗಾಳಿ ಮರಗಳನ್ನ ಬುಧವಾರ ಕಡಿದು ರಾತ್ರೋರಾತ್ರಿ ವಾಹನದಲ್ಲಿ ಸಾಗಿಸಿದ್ದಾರೆ.
ಗುರುವಾರವೂ ಕಡಿದ ಮರಗಳನ್ನ ಸಾಗಾಟ ನಡೆಸಲು ಬಂದಾಗ ಸ್ಥಳೀಯರು ತಡೆದಿದ್ದಾರೆ. ಸಮುದ್ರ ತೀರದ ಬಳಿ ಈ ಹಿಂದೆಯೂ ಚರುಮುರಿ ಸ್ಟಾಲ್ ಗೂಡಂಗಡಿಯೊಂದು ಅನೇಕ ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದು, ಅವರಿಗೆ ಗಾಳಿ ಮರಗಳು ಎಂದಿಗೂ ಕಂಟಕವಾಗಿರಲಿಲ್ಲ. ಕೆಲವೇ ತಿಂಗಳ ಹಿಂದೆ ಇಲ್ಲಿ ಗೂಡಂಗಡಿ ನಿರ್ಮಿಸಿದ್ದ ಕಾಂಗ್ರೆಸ್ ಪುಡಾರಿಯೇ ತನ್ನ ಪ್ರಭಾವ ಬಳಸಿ ಗಾಳಿ ಮರಗಳ ಮಾರಣಹೋಮ ನಡೆಸಿರೋದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಅಪಾಯದಂಚಿನ ಗೂಡಂಗಡಿಗಳ ತೆರವು ಮಾಡಿಸಿಲ್ಲ
ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯ ಪ್ರದೇಶದಲ್ಲಿ ಈ ಬಾರಿ ಇತಿಹಾಸದಲ್ಲೇ ಕಂಡರಿಯದ ಕಡಲ್ಕೊರೆತ ಉಂಟಾಗಿದೆ. ಸಮುದ್ರದ ರಕ್ಕಸ ಅಲೆಗಳು ತೀರದ ಮಣ್ಣನ್ನೇ ಕೊರೆದಿದ್ದು, ಅನಧಿಕೃತ ಗೂಡಂಗಡಿಗಳನ್ನ ಆಹುತಿ ಪಡೆಯಲು ಮುಂದಾಗಿದೆ. ಇಷ್ಟಾದರೂ ಸ್ಥಳೀಯ ಪುರಸಭೆ ಆಡಳಿತವು ಅಪಾಯದಂಚಿನಲ್ಲಿರುವ ಅನಧಿಕೃತ ಗೂಡಂಗಡಿಗಳನ್ನ ತೆರವುಗೊಳಿಸಿಲ್ಲ. ಗೂಡಂಗಡಿ ಮಾಲೀಕನ ಲಾಬಿಗೆ ಕಡಲ್ಕೊರೆತಕ್ಕೆ ಎದೆಯೊಡ್ಡಿ ನಿಂತಿದ್ದ ಬಲಿತ ಗಾಳಿ ಮರಗಳನ್ನೇ ಸಂಹರಿಸುವ ಮತಿಗೇಡಿ ಕೆಲಸವನ್ನ ಅರಣ್ಯ ಇಲಾಖೆ ಮಾಡಿರುವುದು ಸ್ಥಳೀಯ ಪರಿಸರ ಪ್ರೇಮಿಗಳನ್ನ ಕೆರಳಿಸಿದೆ.
ಮಳೆಗಾಲದಲ್ಲಿ ಅಪಾಯ ತಂದೊಡ್ಡುವ ಮರಗಳನ್ನ ಕಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೆವು. ಜನನಿಬೀಡ ಪ್ರದೇಶದ ಅಪಾಯಕಾರಿ ಮರಗಳನ್ನ ಹಾಗೆಯೇ ಬಿಟ್ಟಿದ್ದಾರೆ. ಸಮುದ್ರ ತೀರದ ಗೂಡಂಗಡಿಗಳ ಪ್ರದೇಶದಲ್ಲಿ ತುಂಡಾಗಿ ಬಾಗಿದ್ದ ಒಂದು ಗಾಳಿ ಮರವನ್ನ ತೆರವುಗೊಳಿಸಲು ಸೂಚಿಸಿದ್ದೆವು. ಆದರೆ ಅರಣ್ಯ ಇಲಾಖಾಧಿಕಾರಿಗಳು ಐದು ಗಾಳಿ ಮರಗಳನ್ನ ಕಡಿದು ಅದನ್ನ ವಾಹನದಲ್ಲಿ ಸಾಗಿಸಿದ್ದಾರೆಂದು ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ತಿಳಿಸಿದ್ದಾರೆ.
ಅಪಾಯಕಾರಿ ಮರಗಳು ಯಾವುದೆಂದು ಪರಿಶೀಲಿಸಿ ಕ್ರಮ ಕೈಗೊಳ್ಳುವ ಜವಾಬ್ದಾರಿ ಅರಣ್ಯ ಇಲಾಖೆಯದ್ದಾಗಿದೆ. ನಿರುಪಯೋಗಿ ಮರಗಳ ಬಗ್ಗೆ ಆಲಸ್ಯ ತೋರುವ ಅರಣ್ಯ ಇಲಾಖೆಯು ಮರಗಳನ್ನ ಕಡಿಯಲು ಪುರಸಭೆ ಆಡಳಿತಕ್ಕೆ ಅನುಮತಿಸುತ್ತದೆ. ಬೆಲೆ ಬಾಳುವ ಮರಗಳನ್ನ ಅರಣ್ಯ ಇಲಾಖಾಧಿಕಾರಿಗಳೇ ಕಡಿದು ಸಾಗಿಸಲು ಉತ್ಸುಕರಾಗುವ ಹಿಂದಿನ ರಹಸ್ಯ ತಿಳಿಯಬೇಕಿದೆ. ಸಮುದ್ರ ತೀರದ ಐದು ಅಮೂಲ್ಯ ಗಾಳಿ ಮರಗಳನ್ನ ಕಡಿದಿರುವುದು ಅಕ್ಷಮ್ಯವೆಂದು ಸೋಮೇಶ್ವರ ಪುರಸಭೆ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಹೇಳಿದ್ದಾರೆ.