ಮಧ್ಯಪ್ರದೇಶ: ಯುವಕನಿಗೆ ಕಚ್ಚಿದ 5 ನಿಮಿಷದಲ್ಲೇ ಸತ್ತು ಹೋದ ವಿಷಪೂರಿತ ಹಾವು.
ಖುಡ್ಸೋಡಿ ಗ್ರಾಮದ ಸಚಿನ್ ನಾಗಪುರೆ (25) ಎಂಬ ಯುವಕ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತ ಮನೆಯ ಕೃಷಿ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಗುರುವಾರ ಬೆಳಗ್ಗೆ ಸಚಿನ್ ಕೆಲಸಕ್ಕಾಗಿ ಜಮೀನಿಗೆ ಹೋಗಿದ್ದ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆತ ಆಕಸ್ಮಿಕವಾಗಿ ಹಾವಿನ ಮೇಲೆ ಕಾಲಿಟ್ಟಿದ್ದಾನೆ. ಪರಿಣಾಮ ಹಾವು ಸಚಿನ್‌ಗೆ ಕಚ್ಚಿಬಿಟ್ಟಿದೆ. ಅಚ್ಚರಿಯ ವಿಷಯ ಏನೆಂದರೆ, ಸಚಿನ್‌ಗೆ ಕಚ್ಚಿದ ಹಾವು ಕೆಲವೇ ನಿಮಿಷಗಳಲ್ಲಿ ಒದ್ದಾಡುತ್ತಾ ಸ್ಥಳದಲ್ಲೇ ಸಾವನ್ನಪ್ಪಿದೆ. ಆದರೆ ಸಚಿನ್‌ಗೆ ಇದರಿಂದ ಯಾವುದೇ ರೀತಿ ಹಾನಿಯುಂಟಾಗಿಲ್ಲ.
ಸಚಿನ್, ತಕ್ಷಣವೇ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಕುಟುಂಬಸ್ಥರು ಪರಿಶೀಲಿಸಿದ್ದಾರೆ. ನಂತರ ಸಚಿನ್ ಜೊತೆಗೆ ಅವರು ಸತ್ತ ಹಾವನ್ನು ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಸಚಿನ್ ಆರೋಗ್ಯ ಪರೀಕ್ಷಿಸಿದ ವೈದ್ಯರು ಆಘಾತಕಾರಿ ವಿಷಯ ಹೇಳಿದ್ದಾರೆ. ಆತನಿಗೆ ಕಚ್ಚಿದ್ದು ಸಾಮಾನ್ಯ ಹಾವಲ್ಲ, ಅತ್ಯಂತ ವಿಷಕಾರಿ ಡೊಂಗರ್ಬೆಲಿಯಾ ಜಾತಿಗೆ ಸೇರಿದ ಹಾವು ಎಂದು ತಿಳಿಸಿದ್ದಾರೆ. ಕಚ್ಚಿದ ತಕ್ಷಣ ವಿಷ ಸಚಿನ್‌ಗೆ ಏರುವ ಬದಲು ಹಾವಿಗೆ ಏರಿದೆ. ಹೀಗಾಗಿ ಅದು ಸಾವನ್ನಪ್ಪಿದೆ ಎಂದಿದ್ದಾರೆ.