ಮಂಗಳೂರು :ಜೈಲಿನ ಜಾಮರ್ ಸಮಸ್ಯೆಗೆ ದಿಢೀರ್ ಇತಿಶ್ರೀ ; ಕೈದಿಗಳ ಹೊಡೆದಾಟಕ್ಕೆ 5ಜಿ ಮೆಷಿನ್ ಢಮಾರ್ ! ದೀರ್ಘ ನಿಟ್ಟುಸಿರು ಬಿಟ್ಟ ಪರಿಸರದ ನಿವಾಸಿಗಳು, ಮತ್ತೆ ಸರಿ ಮಾಡದಿರಲೆಂದು ಕೈಮುಗಿದ ಜಾಮರ್ ಸಂತ್ರಸ್ತರು !

ಮಂಗಳೂರು, ಜೂನ್ 17 : 2-3 ತಿಂಗಳಿನಿಂದ ಮಂಗಳೂರಿನ ಜಿಲ್ಲಾ ಕಾರಾಗೃಹದ ಸುತ್ತಮುತ್ತ ವ್ಯಾಪಾರಸ್ಥರು, ಕಚೇರಿ, ಕಾಲೇಜು ಇನ್ನಿತರ ಕಡೆಗಳಲ್ಲಿ ಜೈಲಿನ ಜಾಮರ್ ನಿಂದಾಗಿ ತೀವ್ರ ನೆಟ್ವರ್ಕ್ ಸಮಸ್ಯೆ ಎದುರಾಗಿತ್ತು. ಆದರೆ ಇತ್ತೀಚೆಗೆ ಮೇ ತಿಂಗಳ ಕೊನೆಯ ಬಳಿಕ ನೆಟ್ವರ್ಕ್ ತೊಂದರೆ ದಿಢೀರ್ ಎನ್ನುವಂತೆ ಇಲ್ಲವಾಗಿತ್ತು. ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರೂ, ಕಾಂಗ್ರೆಸ್ ನಾಯಕರೆಲ್ಲ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದರೂ ನಿವಾರಣೆಯಾಗದ ಸಮಸ್ಯೆ ಸದ್ದಿಲ್ಲದೆ ಇಲ್ಲವಾಗಿತ್ತು.
ವಾರದ ಹಿಂದೆ ಗೃಹ ಸಚಿವ ಪರಮೇಶ್ವರ್ ಮಂಗಳೂರಿಗೆ ಬಂದಾಗ, ಜೈಲಿನ ಜಾಮರ್ ಯಂತ್ರಕ್ಕೆ ಹಾನಿಯಾಗಿರುವ ವಿಚಾರ ಚರ್ಚೆಯಾಗಿದೆ. ಕೋಟಿಗಟ್ಟಲೆ ಸುರಿದು ಮಾಡಿದ್ದ ಜಾಮರ್ ಯಂತ್ರ ಹಾಳಾಗಿದ್ದನ್ನು ಜೈಲಿನ ಅಧಿಕಾರಿಗಳು ಗೃಹ ಸಚಿವರ ಗಮನಕ್ಕೆ ತಂದಿದ್ದಾರೆ. ಮೇ ತಿಂಗಳ 20ರಂದು ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು ಈ ವೇಳೆ ಜಾಮರ್ ಯಂತ್ರವನ್ನೇ ಕೈದಿಗಳು ಒಡೆದು ಹಾಕಿದ್ದಾರಂತೆ ಎನ್ನುವ ಸುದ್ದಿ ನಿಧಾನಕ್ಕೆ ಮಾಧ್ಯಮದ ಕಿವಿಗೆ ತಲುಪಿದೆ. ಈ ಬಗ್ಗೆ ಜೈಲು ಪರಿಸರದ ನಿವಾಸಿಗಳನ್ನು ಕೇಳಿದಾಗ, ಸಮಸ್ಯೆ ಏನೋ ಕಮ್ಮಿಯಾಗಿದೆ, ನೀವು ಯಂತ್ರದ ಬಗ್ಗೆ ಬರೆದು ದಯವಿಟ್ಟು ಜಾಮರ್ ಮತ್ತೆ ಹಾಕುವಂತೆ ಮಾಡಬೇಡಿ, ನೆಟ್ವರ್ಕ್ ಸಮಸ್ಯೆಯಿಂದ ನಾವು ಆ ಮಟ್ಟಿಗೆ ತೊಂದರೆ ಎದುರಿಸಿದ್ದೇವೆ ಎಂದು ಹೇಳಿ ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಬೆಂಗಳೂರು, ಬೆಳಗಾವಿ, ಬಳ್ಳಾರಿ, ಕಲಬುರಗಿ, ಧಾರವಾಡ, ಮೈಸೂರು ಹಾಗೂ ಮಂಗಳೂರಿನ ಜೈಲುಗಳಲ್ಲಿ ಮೊಬೈಲ್ ನೆಟ್ವರ್ಕ್ ತಡೆಯಬಲ್ಲ ಜಾಮರ್ ಯಂತ್ರವನ್ನು 5 ಜಿಗೆ ಮೇಲ್ದರ್ಜೆಗೇರಿಸಲಾಗಿತ್ತು. ಇದಕ್ಕಾಗಿ ರಾಜ್ಯ ಸರಕಾರ 43.76 ಕೋಟಿ ರೂ. ವ್ಯಯಿಸಿದ್ದು ಆಮೂಲಕ ಜೈಲುಗಳಲ್ಲಿ ಕೈದಿಗಳ ಮೊಬೈಲ್ ಬಳಕೆಯನ್ನು ತಪ್ಪಿಸಲು ಪ್ರಯತ್ನಿಸಲಾಗಿತ್ತು. ಕೈದಿಗಳು ಜೈಲಿನ ಒಳಗಿದ್ದರೂ ಹೊರಗಡೆ ಫೋನ್ ಮಾಡಿ ಹಫ್ತಾ ವಸೂಲಿ ಮಾಡಿಸುವುದು, ಬೆದರಿಕೆ ಹಾಕುವುದನ್ನು ತಪ್ಪಿಸಲು ಜಾಮರ್ ಅಪ್ ಗ್ರೇಡ್ ಮಾಡಲಾಗಿತ್ತು.
ಆದರೆ ಮಂಗಳೂರಿನ ಜೈಲು ನಗರದ ಹೃದಯಭಾಗ ಕೊಡಿಯಾಲ್ ಬೈಲಿನಲ್ಲೇ ಇರುವುದರಿಂದ ಜಾಮರ್ ಯಂತ್ರ ಅಳವಡಿಸಿದ ಬೆನ್ನಲ್ಲೇ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಿದ್ದರು. ಜೈಲಿನ ಎದುರಲ್ಲೇ ದೊಡ್ಡ ವಸತಿ ಸಂಕೀರ್ಣ, ಪಕ್ಕದಲ್ಲೇ ಕೆನರಾ ಕಾಲೇಜು, ಹಿಂಬದಿಯಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್, ಆಸುಪಾಸಿನಲ್ಲಿ ವ್ಯಾಪಾರ ಸಂಸ್ಥೆಗಳು- ಕಚೇರಿಗಳಿದ್ದು ಎಲ್ಲರೂ ಮೊಬೈಲ್ ಸಮಸ್ಯೆ ಎದುರಿಸಿದ್ದರು. ಇದೇ ಪರಿಸರದ
ನಿವಾಸಿ ಮಂಗಳೂರಿನ ಖ್ಯಾತ ಹೃದಯ ತಜ್ಞ ಪದ್ಮನಾಭ ಕಾಮತ್ ತನಗಾದ ಸಮಸ್ಯೆ ಬಗ್ಗೆಯೂ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದರೂ ಆಡಳಿತ ಮಾತ್ರ ಈ ಬಗ್ಗೆ ಕಿವಿಗೊಟ್ಟಿರಲಿಲ್ಲ.

ಹೊಡೆದಾಟದಲ್ಲಿ ಜಾಮರ್ ಢಮಾರ್ !
ಮೇ 20ರಂದು ಜೈಲಿನಲ್ಲಿ ಅಡುಗೆ ಮಾಡುತ್ತಿದ್ದ ಕೈದಿಯೊಬ್ಬನಿಗೆ ಸಹ ಕೈದಿ ಮುನೀರ್ ಎಂಬಾತ ಹಲ್ಲೆ ನಡೆಸಿದ್ದ. ಅಬ್ದುಲ್ ರಹಿಮಾನ್ ಕೊಲೆಯ ಪ್ರತೀಕಾರಕ್ಕಾಗಿ ಹಿಂದುವಿಗೆ ಹಲ್ಲೆ ನಡೆಸಿದ್ದಾನೆಂದು ಆಕ್ರೋಶಗೊಂಡ ಜೈಲಿನ ಬಿ ಬ್ಲಾಕ್‌ನಲ್ಲಿದ್ದ ಕೈದಿಗಳು ಪ್ರತಿ ಹಲ್ಲೆ ನಡೆಸಲು ಮುಂದಾಗಿದ್ದರು. ಈ ವೇಳೆ, ಎರಡು ಕೋಮಿನ ಕೈದಿಗಳ ಮಧ್ಯೆ ಜೈಲಿನ ಒಳಗಡೆಯೇ ಮಾರಾಮಾರಿ ನಡೆದಿತ್ತು. ಇದೇ ಸಂದರ್ಭದಲ್ಲಿ ಜೈಲಿನ ಹೊಸ ಜಾಮರ್ ಯಂತ್ರ ಮತ್ತು ಸಿಸಿ ಕ್ಯಾಮೆರಾಗಳಿಗೆ ಹೊಡೆದ ಬಿದ್ದು ತೀವ್ರ ಹಾನಿಯಾಗಿತ್ತು. ಕೈದಿಗಳನ್ನು ಬಳಿಕ ಜೈಲು ಸಿಬಂದಿ ಅಡ್ಡಹಾಕಿ, ಸೈಲ್ ಒಳಗಡೆ ತಳ್ಳಲು ಯಶಸ್ವಿಯಾಗಿದ್ದರು. ಆದರೆ 5 ಕೋಟಿಯಷ್ಟು ಬಿಲ್ ಮಾಡಿದ್ದ ಮಂಗಳೂರಿನ ಜಾಮರ್ ಯಂತ್ರ ಢಮಾರ್ ಆಗಿತ್ತು.

ದುರಸ್ತಿಗೆ ಗೃಹ ಸಚಿವರ ಸೂಚನೆ
ವಾರದ ಹಿಂದೆ ಗೃಹ ಸಚಿವರು ಮಂಗಳೂರಿಗೆ ಬಂದಾಗ, ಜೈಲಿನ ಅಧಿಕಾರಿಗಳು ಜಾಮರ್ ಹಾನಿಯಾದ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದಾರೆ. ಈ ವೇಳೆ, ಜೈಲು ಸಿಬಂದಿ ಬಗ್ಗೆ ಗರಂ ಆದ ಸಚಿವರು ಅವರನ್ನು ತರಾಟೆಗೆತ್ತಿಕೊಂಡಿದ್ದಲ್ಲದೆ, ಜಾಮರ್ ಯಂತ್ರ ದುರಸ್ತಿ ಪಡಿಸುವಂತೆ ಸೂಚನೆ ನೀಡಿದ್ದಾರಂತೆ. ಸ್ಥಳೀಯ ನಿವಾಸಿಗಳು ಮಾತ್ರ ಜಾಮರ್ ಯಂತ್ರ ಸರಿ ಮಾಡದೇ ಇರಲಿ ಎಂದು ಕೇಳಿಕೊಂಡಿದ್ದಾರೆ. ಆಸುಪಾಸಿನಲ್ಲಿ ಬಹಳಷ್ಟು ಡಾಕ್ಟರ್ಸ್, ರೋಗಿಗಳಿದ್ದು, ಮೊಬೈಲ್ ಜಾಮರ್ ಹಾಕಿದರೆ ಒಳಗಿನ ಕೈದಿಗಳಿಗಿಂತ ಹೊರಗಿದ್ದ ಹಿರಿಯ ನಾಗರಿಕರು, ಜನಸಾಮಾನ್ಯರೇ ಹೆಚ್ಚು ಬವಣೆ ಪಡುತ್ತಾರೆ. ಕೊಡಿಯಾಲ್ ಬೈಲ್, ಪಿವಿಎಸ್, ಬೆಸೆಂಟ್ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ವರೆಗೂ ಜಾಮರ್ ಪ್ರಭಾವ ಇದ್ದುದರಿಂದ ಜೈಲಿಗಿಂತ ಹೆಚ್ಚು ಈ ಭಾಗದಲ್ಲಿ ವಾಸವಿರುವ ಮತ್ತು ವೃತ್ತಿ ನಿರತ ಸಾವಿರಾರು ಜನರು ಸಮಸ್ಯೆ ಎದುರಿಸುತ್ತಾರೆ ಎಂದು ಅಲವತ್ತುಕೊಂಡಿದ್ದಾರೆ