ಚಾಮರಾಜನಗರ: 5 ಹುಲಿಗಳ ದುರಂತ ಅಂತ್ಯ ; ದುಷ್ಟ ಹಸು ಮಾಲೀಕ ಸೇರಿ ವಿಷ ಹಾಕಿದ್ದ ಮೂವರ ಬಂಧನ, ವಿಚಾರಣೆಯಲ್ಲಿ ಬಿಚ್ಚಿಕೊಂಡ ಸೇಡಿನ ಕಥೆ!
ಚಾಮರಾಜನಗರ : ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ಅರಣ್ಯ ಇಲಾಖೆ ಶನಿವಾರ ಬಂಧಿಸಿ, ಹೆಚ್ಚಿನ ವಿಚಾರಣೆ ಕೈಗೊಂಡಿದೆ.
ಹನೂರು ತಾಲೂಕಿನ ಕೊಪ್ಪ ಗ್ರಾಮದ ಹಸುವಿನ ಮಾಲೀಕ ಕೋನಪ್ಪ ಹಾಗೂ ಹಸುವಿನ ಮೃತದೇಹಕ್ಕೆ ವಿಷಪ್ರಾಶನ ಮಾಡಿದ ಆರೋಪದ ಮೇಲೆ ಮಾದುರಾಜ್ ಹಾಗೂ ನಾಗರಾಜು ಪೂಜಾರಿಗೌಡ ಎಂಬ ದನಗಾಹಿಗಳನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಮೀಣ್ಯಂ ಸಮೀಪವೇ ಕೊಪ್ಪ ಗ್ರಾಮವಿದ್ದು ಜಾನುವಾರುಗಳಿಗೆ ಹುಲಿ ಉಪಟಳ ಕೊಡುತ್ತಿದೆ ಎಂಬ ಕೋಪಕ್ಕೆ ಹುಲಿ ಬೇಟೆಯಾಡಿದ್ದ ಹಸುವಿನ ದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿರುವುದಾಗಿ ಆರಂಭಿಕ ವಿಚಾರಣೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಡಿನಲ್ಲಿರುವ ಹುಲಿಗಳನ್ನು ಕೊಲ್ಲಬೇಕು ಎಂಬ ಕಾರಣಕ್ಕಾಗಿಯೇ ಹಸುವಿನ ಶವವೊಂದರ ಮೇಲೆ ಕ್ರಿಮಿನಾಶಕವನ್ನು ಸುರಿದಿದ್ದರು. ಅದನ್ನರಿಯದೇ ಆ ಮಾಂಸವನ್ನು ತಿಂದಿದ್ದ ಒಂದು ತಾಯಿ ಹುಲಿ ಹಾಗೂ ಅಧರ ಐದು ಮರಿ ಹುಲಿಗಳು ಸಾವಿಗೀಡಾಗಿದ್ದವು. ಏಕಾಏಕಿ ಐದು ಹುಲಿಗಳ ಸಾವು ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವನ್ಯಜೀವಿ ಪ್ರಿಯರು ''ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು'' ಎಂದು ಸರ್ಕಾರವನ್ನು ಆಗ್ರಹಿಸಿದ್ದರು. ವಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ಆ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿದ್ದರು.
ಹುಲಿಗಳಿಗೆ ವಿಷ ಹಾಕಿದ್ಯಾಕೆ ?
ಬಂಧಿತ ನಾಗರಾಜು ಹಾಗೂ ನಾಗಮಾಧು ಅವರು ಹುಲಿಗಳಿಗೆ ವಿಷ ಹಾಕಿರುವ ವಿಚಾರವನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ನಾಗರಾಜು ಎಂಬಾತ ಮಲೆಮಹದೇಶ್ವರ ಬೆಟ್ಟದ ಸಮೀಪವೇ ದನಕರುಗಳನ್ನು ಸಾಕಿಕೊಂಡಿದ್ದ. ತಾನು ಮುದ್ದಾಗಿ ಸಾಕಿ ಬೆಳೆಸಿದ್ದ ಹಸುವಿಗೆ ಕೆಂಚಿ ಎಂದು ಹೆಸರಿಟ್ಟಿದ್ದ. ಆದರೆ, ಇತ್ತೀಚೆಗೆ ಹುಲಿಯೊಂದು ಆ ಹಸುವಿನ ಮೇಲೆ ದಾಳಿ ಮಾಡಿ ಅದನ್ನು ಕೊಂದಿತ್ತು.
ಇದರಿಂದ ತೀವ್ರ ದುಃಖಕ್ಕೀಡಾಗಿದ್ದ ನಾಗರಾಜು, ತನ್ನ ಆಪ್ತ ಸ್ನೇಹಿತ ನಾಗಮಾಧು ಬಳಿ ಹೋಗಿ ನಡೆದುದ್ದೆಲ್ಲವನ್ನೂ ಹೇಳಿ ದುಃಖಿಸುತ್ತಿದ್ದ. ಆಗಲೇ ಇಬ್ಬರೂ ಹಸುಗಳನ್ನು ಕೊಲ್ಲುವ ಹುಲಿಗಳನ್ನು ಬಿಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದರು. ಆಗಲೇ, ಕ್ರಿಮಿನಾಶಕವೊಂದನ್ನು ಕೊಂಡುಕೊಂಡ ಅವರು, ಜೂ. 25ರಂದು ಸತ್ತಿದ್ದ ಹಸುವಿನ ಮೃತ ಶರೀರವನ್ನು ಕಾಡಿಗೆ ಎಳೆದೊಯ್ದು, ಆ ಶರೀರದ ಮೇಲೆ ಕ್ರಿಮಿನಾಶಕ ಸುರಿದು ಬಂದಿದ್ದರು. ಜೂ. 26ರಂದು ಆ ಹಸುವಿನ ಮಾಂಸ ಸೇವಿಸಿದ್ದ ಹುಲಿಗಳು ಸಾವನ್ನಪ್ಪಿದ್ದವು. ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವಿಚಾರಣೆಯಲ್ಲಿ ಈ ವಿಚಾರವನ್ನು ಆರೋಪಿಗಳು ಬಹಿರಂಗಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ವಿಷ ಸತ್ಯ ಬಯಲು:
ಮೃತಪಟ್ಟಿದ್ದ 5 ಹುಲಿಗಳಲ್ಲಿ ತಾಯಿ ಹುಲಿ ಸೇರಿದಂತೆ ನಾಲ್ಕು ಹೆಣ್ಣು ಹುಲಿ ಹಾಗೂ ಒಂದು ಗಂಡು ಹುಲಿಗಳಾಗಿವೆ. ತಾಯಿ ಹುಲಿಗೆ 8 ವರ್ಷ ಮತ್ತು ಮರಿಗಳಿಗೆ 8-10 ತಿಂಗಳು ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ. ಹುಲಿಗಳು ಮೃತಪಟ್ಟು 3 ದಿನಗಳ ಬಳಿಕ ಕೇಸ್ ಬೆಳಕಿಗೆ ಬಂದಿತ್ತು.
ಹಸುವಿನ ಮೃತದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಹಸುವಿನ ಮಾಂಸ ತಿಂದಿದ್ದ ಹುಲಿಗಳು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ. ಹೆಚ್ಚಿನ ತನಿಖೆಗಾಗಿ ಹುಲಿ ಮತ್ತು ಹಸುವಿನ ಅಂಗಾಂಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.