ಮಂಗಳೂರು:ಮನೆಗೆ ಹೋಗಲು ಹತ್ತಿಸಿಕೊಳ್ಳದ ರಿಕ್ಷಾ; ಆ ದಿನವೇ ದಿಟ್ಟ ನಿರ್ಧಾರ ತೆಗೆದುಕೊಂಡು 4 ಆಟೋ ಖರೀದಿಸಿ ಬಾಡಿಗೆಗೆ ಕೊಟ್ಟ ಮಂಗಳಮುಖಿ ; ಹಿರಿಯ ತೃತೀಯ ಲಿಂಗಿಗಳಿಗೆ, ಗರ್ಭಿಣಿಯರಿಗೆ ಉಚಿತ ಸೇವೆ..!!!

ಮಂಗಳೂರು:ಮನೆಗೆ ಹೋಗಲು ಹತ್ತಿಸಿಕೊಳ್ಳದ ರಿಕ್ಷಾ; ಆ ದಿನವೇ ದಿಟ್ಟ ನಿರ್ಧಾರ ತೆಗೆದುಕೊಂಡು 4 ಆಟೋ ಖರೀದಿಸಿ ಬಾಡಿಗೆಗೆ ಕೊಟ್ಟ ಮಂಗಳಮುಖಿ ; ಹಿರಿಯ ತೃತೀಯ ಲಿಂಗಿಗಳಿಗೆ, ಗರ್ಭಿಣಿಯರಿಗೆ ಉಚಿತ ಸೇವೆ..!!!

ಮಂಗಳೂರು : ಸಮಾಜದಲ್ಲಿ ಮಂಗಳಮುಖಿಯರೆಂದರೆ ತಾತ್ಸಾರದಿಂದ ಕಾಣುವವರೇ ಹೆಚ್ಚು. ಹಾಗಾಗಿ ಅವರು ಪ್ರತಿ ಹೆಜ್ಜೆಯಲ್ಲಿಯೂ ಅವಮಾನ ಅನುಭವಿಸುತ್ತಿದ್ದಾರೆ. ಇದೇ ರೀತಿ ಮನೆಗೆ ಹೋಗಲು ರಿಕ್ಷಾದವರು ತನ್ನನ್ನು ಹತ್ತಿಸಿಕೊಳ್ಳದ್ದಕ್ಕೆ ಅವಮಾನಗೊಂಡ ಮಂಗಳಮುಖಿಯೊಬ್ಬರು, ನಾಲ್ಕು ರಿಕ್ಷಾ ಖರೀದಿಸಿ ಬಾಡಿಗೆ ನೀಡುತ್ತಿದ್ದಾರೆ.

ಹೌದು, ಅವರೇ ಸ್ವಾಭಿಮಾನದ ಅನಿ ಮಂಗಳೂರು. ಮೂಲತಃ ರಾಯಚೂರಿನವರು. ಮಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದ ಇವರು ಇದೀಗ ಇಲ್ಲಿಯೇ ನೆಲೆ ನಿಂತಿದ್ದಾರೆ. ಬಿಎ, ಬಿಎಡ್ ಎರಡು ಸೆಮಿಸ್ಟರ್ ಬರೆದ ಇವರು ಮಂಗಳಮುಖಿಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಕಷ್ಟ ಎಂದು ಅರಿತು ಶಿಕ್ಷಣ ಮೊಟಕುಗೊಳಿಸಿದ್ದರು. ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ

ಆ ಅವಮಾನವೇ ರಿಕ್ಷಾ ಖರೀದಿಗೆ ಪ್ರೇರಣೆ: ಅನಿ ಸಂಜೆ ಮನೆಗೆ ತೆರಳಲು ರಿಕ್ಷಾವನ್ನು ಅವಲಂಬಿಸಿದ್ದು, ಇವರಿಗೆ ಪ್ರತಿದಿನವೂ ರಿಕ್ಷಾದವರು ನಿಲ್ಲಿಸದ್ದಕ್ಕೆ ಸಂಕಷ್ಟ ಎದುರಾಗಿತ್ತು. ಒಂದು ದಿನವಂತೂ ಸಂಜೆಯಿಂದ ರಾತ್ರಿಯಾದರೂ ಯಾವ ರಿಕ್ಷಾದವರೂ ಇವರನ್ನು ಆಟೋದೊಳಗೆ ಹತ್ತಿಸಿಕೊಳ್ಳಲು ಒಪ್ಪಿರಲಿಲ್ಲ. ಇದರಿಂದ ಅವರು ಮನೆಗೆ ನಡೆದುಕೊಂಡೇ ಹೋಗಬೇಕಾಯಿತು. ಆ ದಿನ ಅವರು ರಿಕ್ಷಾ ಖರೀದಿಸಿ ಬಾಡಿಗೆ ನೀಡುವ ನಿರ್ಧಾರ ಕೈಗೊಂಡರು.


ಅದರಂತೆ ಅವರು ಬ್ಯಾಂಕ್​ನಲ್ಲಿ ಸಾಲ ಮಾಡಿ ನಾಲ್ಕು ರಿಕ್ಷಾಗಳನ್ನು ಖರೀದಿಸಿದ್ದಾರೆ. ನಾಲ್ಕು ರಿಕ್ಷಾಗಳನ್ನು ಮಂಗಳೂರಿನ ಗ್ರಾಮಾಂತರ ಭಾಗವಾದ ದೇರಳಕಟ್ಟೆಯಲ್ಲಿ ಬಾಡಿಗೆಗೆ ನೀಡಿದ್ದಾರೆ. ಇದರಿಂದ ಅವರಿಗೆ ಒಂದು ನಿಶ್ಚಿತ ಆದಾಯವೂ ಬರುತ್ತಿದೆ.

ಗರ್ಭಿಣಿಯರಿಗೆ, ಹಿರಿಯ ಮಂಗಳಮುಖಿಯರಿಗೆ ಉಚಿತ ಸೇವೆ : ರಿಕ್ಷಾದಲ್ಲಿ ಪ್ರಯಾಣಿಸುವ ಗರ್ಭಿಣಿಯರಿಗೆ ಮತ್ತು ಹಿರಿಯ ಮಂಗಳಮುಖಿಯರಿಗೆ ರಿಕ್ಷಾದಲ್ಲಿ ಸೇವೆ ಉಚಿತವಾಗಿರಲಿದೆ. ಈ ನಾಲ್ಕು ರಿಕ್ಷಾದಲ್ಲಿಯೂ ಉಚಿತ ಸೇವೆ ಇರಲಿದೆ. ಈ ಬಗ್ಗೆ ತಮ್ಮ ಎಲ್ಲಾ ರಿಕ್ಷಾ ಚಾಲಕರಿಗೆ ಅನಿ ಅವರು‌ ನಿರ್ದೇಶನ ಸಹ ನೀಡಿದ್ದಾರೆ. ಅಲ್ಲದೇ, ಕಷ್ಟದಲ್ಲಿರುವವರಿಗೆ ಸಹಾಯ ಹಾಗೂ ನಿರ್ಗತಿಕರಿಗೆ ಅನ್ನದಾನವನ್ನು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.

ತನಗೆ ರಿಕ್ಷಾ ಹತ್ತಿಸಿಕೊಳ್ಳದೆ ಆದ ಅವಮಾನ, ಸಂಕಷ್ಟ ಬೇರೆ ಮಂಗಳಮುಖಿಯರಿಗೆ ಬರಬಾರದೆಂದು ಅನಿ ಅವರು ಈ ನಿರ್ಧಾರ ಮಾಡಿದ್ದಾರೆ.

 ಅನಿ ಮಂಗಳೂರು, 'ನನಗೆ ಮನೆಗೆ ಹೋಗಲು ರಿಕ್ಷಾ ನಿಲ್ಲಿಸದೆ ಮಾಡಿದ ಅವಮಾನದಿಂದ ತುಂಬಾ ನೊಂದುಕೊಂಡಿದ್ದೆ. ತಾಯಿ ನೀಡಿದ ಪ್ರೋತ್ಸಾಹದಿಂದ ನಾನು ರಿಕ್ಷಾ ಖರೀದಿಸುವ ನಿರ್ಧಾರ ತೆಗೆದುಕೊಂಡೆ. ಈ ಮೂಲಕ ನನಗೆ ಸಾಧಿಸುವ ಛಲ ಬಂತು' ಎನ್ನುತ್ತಾರೆ. 

ಅನಿ ಮಂಗಳೂರು ಅವರ ಗೆಳತಿ ರೇಶ್ಮಾ ಸ್ವಾತಿ ಮಾತನಾಡಿ, 'ಅನಿ ಅವರು ರಿಕ್ಷಾ ಖರೀದಿಸುವ ನಿರ್ಧಾರ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದ್ದಾರೆ. ಅನಿ ಅವರು ತಮ್ಮ ಕೆಲಸದಿಂದ ನಮ್ಮೆಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ' ಎಂದು ಹೇಳುತ್ತಾರೆ.

ಅನಿ‌ ಅವರು ಛಲವಂತೆ. ಎಲ್ಲಾ ಕಷ್ಟಗಳನ್ನು ಎದುರಿಸಿ ಬೆಳೆದು ನಿಂತವರು. ಇವರು ಈಗಾಗಲೇ ಶಿವಲೀಲಾ ಎಂಬ ಕನ್ನಡ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಜಿಮ್ ಟ್ರೈನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಓಡಾಟಕ್ಕೆ ಟೂ ವ್ಹೀಲರ್ ಖರೀದಿಸಿದ್ದಾರೆ. ಇವರಿಗೆ ಹಿರಿಯ ಮಂಗಳಮುಖಿಯರಿಗೆ ಆಶ್ರಮ ಸ್ಥಾಪಿಸುವ ಗುರಿ ಇದ್ದು, ಇದಕ್ಕಾಗಿ ಪ್ರಯತ್ನ ಮುಂದುವರೆಸಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನಿ ಮಂಗಳೂರು ಅವರು ತನ್ನ ಸಾಧನೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಛಲದಿಂದ ಸಾಧನೆಯ ಶಿಖರವನ್ನೇರಿದ್ದಾರೆ. ಇವರು ಮಂಗಳಮುಖಿಯಾಗಿ ಮಾಡಿದ ಸಾಧನೆ ಎಲ್ಲರಲ್ಲೂ ಬೆರಗು ಮೂಡಿಸಿದೆ.

Ads on article

Advertise in articles 1

advertising articles 2

Advertise under the article