ಬಂಟ್ವಾಳ :ಮದುವೆಯಾಗಿ 16 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿ ; ಸೀಮಂತಕ್ಕೆ ಸಿದ್ಧತೆ ನಡೆಸಿರುವಾಗಲೇ ದುರಂತ, ತಾಳಿ ಕಟ್ಟಿದ್ದ ಕೈಯಲ್ಲೇ ಪತ್ನಿಯ ಕತ್ತು ಹಿಸುಕಿ ನೇಣಿಗೆ ಶರಣಾದ ಪತಿ, ಮಗುವಿಗಾಗಿ ಹಂಬಲಿಸಿದ್ದ ದಂಪತಿಗೇಕೆ ಬಂತು ಸಾವು ?
ಬಂಟ್ವಾಳ: ಮಕ್ಕಳಿಲ್ಲದ ದಂಪತಿ ನಮ್ಗೆ ಒಂದು ಕರುಳ ಕುಡಿಯನ್ನೂ ದೇವರು ಕೊಟ್ಟಿಲ್ಲ ಅಂತ ಕೊರಗುತ್ತಿರುತ್ತಾರೆ. ಅದೇ ಕೆಲವರು ಮಕ್ಕಳು ಆಗಿಲ್ಲ ಅಂತ ಇದ್ದ ದೇವರಿಗೆಲ್ಲ ಹರಕೆ ಹೊತ್ತುಕೊಂಡು ಪೂಜೆ ಮಾಡೋದು, ಇದ್ದ ಡಾಕ್ಟರುಗಳನ್ನೆಲ್ಲ ಕಂಡು ಪರೀಕ್ಷೆ ಮಾಡಿಸಿಕೊಳ್ಳುವುದನ್ನೂ ಮಾಡುತ್ತಾರೆ. ಅಚಾನಕ್ಕಾಗಿ ಗರ್ಭಿಣಿಯಾದರೆ ದಂಪತಿಯ ಆನಂದಕ್ಕೆ ಪಾರವೇ ಇರುವುದಿಲ್ಲ. ಈ ಪ್ರಕರಣದಲ್ಲಿಯೂ ದಂಪತಿಗೆ ಅಂತಹದ್ದೇ ಸ್ಥಿತಿಯಾಗಿತ್ತು. 16 ವರ್ಷಗಳ ಬಳಿಕ ಕಡೆಗೂ ಮಗುವಾಗ್ತಿದೆ ಎನ್ನುವ ಸಂತಸದಲ್ಲಿ ದಂಪತಿ ಇದ್ದರು. ಆದರೆ ವಿಧಿ ಲಿಖಿತ ಮಾತ್ರ ಅವರ ಪಾಲಿಗೆ ಕಠೋರವಾಗಿತ್ತು.
ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಬಡಾಗುಂಡಿ ಎಂಬಲ್ಲಿ ಆಗಬಾರದ ಘಟನೆಯೊಂದು ನಡೆದುಹೋಗಿದೆ. ಮದುವೆಯಾಗಿ 16 ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಸುದ್ದಿ ಕೇಳಿದವರನ್ನೆಲ್ಲ ದಿಗ್ಭ್ರಾಂತಗೊಳಿಸಿದೆ. ನಿನ್ನೆ ರಾತ್ರಿ ಆಗಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು ಆಸುಪಾಸಿನ ಮನೆಯವರಿಗೆಲ್ಲ ಶಾಕ್ ಆಗಿಸಿದೆ. ಸಜಿಪಮೂಡ ಗ್ರಾಮದ ನಿವಾಸಿ ತಿಮ್ಮಪ್ಪ ಮೂಲ್ಯ(52) ಮತ್ತು ಅವರ ಪತ್ನಿ ಜಯಂತಿ (45) ಮೃತಪಟ್ಟವರಾಗಿದ್ದು, ಇವರ ಸಾವು ಪರಿಸರದ ಜನರಿಗೆ ನಂಬಲಿಕ್ಕೇ ಆಗದ ಸ್ಥಿತಿಯಾಗಿಸಿದೆ.
ಯಾಕಂದ್ರೆ, ಟೈಲರಿಂಗ್ ಮಾಡುತ್ತಿದ್ದ ಗಂಡನೂ, ಮನೆಯಲ್ಲಿ ಬೀಡಿ ಕಟ್ಟುತ್ತ ಜೀವನದ ಬಂಡಿ ದೂಡುತ್ತಿದ್ದ ಪತ್ನಿಯೂ ತುಂಬ ಅನ್ಯೋನ್ಯವಾಗಿದ್ದರು. ಅವರ ನಡುವೆ ಜಗಳ ಇರಲಿಲ್ಲ. ಗಲಾಟೆಯೂ ಇರಲಿಲ್ವಂತೆ. ಮದುವೆಯಾಗಿ 15 ವರ್ಷ ಆದ್ರೂ ತಮಗೊಂದು ಮಗುವಾಗಿಲ್ಲ ಎನ್ನುವ ಕೊರಗು ಮಾತ್ರ ಅವರಲ್ಲಿತ್ತು. ಸಿಕ್ಕ ಸಿಕ್ಕವರಲ್ಲಿ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದರಂತೆ. ಆದರೆ ಅಚಾನಕ್ಕಾಗಿ ಜಯಂತಿ ಗರ್ಭ ಧರಿಸಿದ್ದು, ಹೊಟ್ಟೆಗೆ ಏಳು ತಿಂಗಳಾಗಿದ್ದರಿಂದ ಸೀಮಂತಕ್ಕೂ ರೆಡಿ ಮಾಡಿಕೊಳ್ಳುತ್ತಿದ್ದರು. ನಾಡಿದ್ದು ಜುಲೈ 2ಕ್ಕೆ ಸೀಮಂತಕ್ಕೆ ದಿನವೂ ನಿಗದಿಯಾಗಿತ್ತು. ಮನೆಯಲ್ಲೇ ಸೀಮಂತ ಮಾಡುವುದೆಂದು ಸಿದ್ಧತೆ ಮಾಡಲಾಗಿತ್ತು.
ಅಕ್ಕ ಪಕ್ಕದಲ್ಲೇ ಹತ್ತಿರದ ಸಂಬಂಧಿಕರ ಮನೆಗಳೂ ಇದ್ದುದರಿಂದ ಅಪರೂಪದ ಸೀಮಂತದ ಬಗ್ಗೆ ಪರಿಸರದಲ್ಲಿ ನಿರೀಕ್ಷೆಯಿತ್ತು. ಆದರೆ ಅದೇನಾಯ್ತೋ ಏನೋ ನಿನ್ನೆ ರಾತ್ರಿ ನಡೆಯಬಾರದ್ದು ನಡೆದುಹೋಗಿದೆ. ಪಕ್ಕದ ಮನೆಯ ಅಜ್ಜಿ ಲಿಲ್ಲಿ ವಾಜ್ ಹೇಳುವ ಪ್ರಕಾರ, ರಾತ್ರಿ 11 ಗಂಟೆ ವರೆಗೂ ಲೈಟ್ ಕಾಣುತ್ತಿತ್ತು. ಬೆಳಗ್ಗೆ ದಿನವೂ 5 ಗಂಟೆಗೇ ಬಾಗಿಲು ತೆರೆದು ಕೆಲಸಕ್ಕೆ ಶುರು ಮಾಡುತ್ತಿದ್ದರು. ಗಂಡ, ಹೆಂಡತಿ ತುಂಬ ಅನ್ಯೋನ್ಯವಾಗಿದ್ದರು. ಇಂದು ಬೆಳಗ್ಗೆ ನನ್ನ ಮೊಮ್ಮಕ್ಕಳು, ಅವರ ಸಂಬಂಧಿಕ ಮಕ್ಕಳು ಶಾಲೆಗೆ ಹೊರಟಾಗಲೂ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಹಾಲು ತರಲೆಂದು ಅತ್ತ ಕಡೆ ಹೋಗುತ್ತಿದ್ದಾಗ ಅರ್ಧ ಹಾಕಿದ್ದ ಬಾಗಿಲನ್ನು ದೂಡಿ ನೋಡಿದೆ, ನೋಡಿದರೆ ಒಳಗಡೆ ನೆಲದಲ್ಲೇ ಜಯಂತಿ ಮೃತಪಟ್ಟಿದ್ದಳು ಎಂದು ಹೇಳಿ ಗದ್ಗದಿತರಾದರು.
ತಿಮ್ಮಪ್ಪ ಮೂಲ್ಯ ಅವರು ಸಜಿಪಮೂಡ ಗ್ರಾಮದವರಾಗಿದ್ದು ಅಲ್ಲಿಯೇ ಟೈಲರ್ ಅಂಗಡಿ ಹೊಂದಿದ್ದರು. ಅಲ್ಲಿಂದಲೇ ಪತ್ನಿಯ ಮನೆಗೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ಹೊಸತಾಗಿ ಏಕ್ಟಿವಾ ಸ್ಕೂಟರ್ ಖರೀದಿಸಿದ್ದ ತಿಮ್ಮಪ್ಪ, ಕಡೆಗೂ ಮಗು ಆಗ್ತಿದೆ ಅನ್ನುವ ಸಂತೃಪ್ತ ಭಾವದಲ್ಲಿದ್ದರು. ಆದರೆ ನಿನ್ನೆ ರಾತ್ರಿ ಅದೇನಾಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ.
16 ವರ್ಷಗಳ ಬಳಿಕ ಪತ್ನಿ ಗರ್ಭಿಣಿಯಾಗಿದ್ದನ್ನು ಅಂಗಡಿಗೆ ಬಂದಿದ್ದವರು ಯಾರಾದ್ರೂ ಅಣಕಿಸಿ ಮಾತನಾಡಿದ್ರೋ ಏನೋ ಅನ್ನುವ ಮಾತು ಕೆಲವರ ಬಾಯಿಂದ ಕೇಳಿಬರ್ತಿತ್ತು. ತುಂಬ ಮುಗ್ಧ ಮತ್ತು ಯಾರಿಗೂ ಕೇಡು ಬಗೆಯದ ಮನುಷ್ಯರಿಗೆ ಕೆಲವೊಮ್ಮೆ ಕೆಲವರ ಮಾತುಗಳು ಮನಸ್ಸಿಗೆ ನಾಟುತ್ತದೆ. ತಲೆಯಲ್ಲಿ ಅದೇ ಮಾತು ರಿಂಗಣಿಸುತ್ತ ತನ್ನ ಕೈಯಲ್ಲಿ ಮಾಡಬಾರದ್ದನ್ನೂ ಮಾಡಿಸುತ್ತದೆ. ಪತ್ನಿಯನ್ನು ಸಂಶಯದ ದೃಷ್ಟಿಯಲ್ಲಿ ಕಾಣುವಂತಾಗಿ, ಅದೇ ವಿಚಾರ ಪತ್ನಿ ಜೊತೆಗೆ ಜಗಳಕ್ಕೆ ಕಾರಣವಾಯಿತೋ ಏನೋ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಮಕ್ಕಳಿಲ್ಲ ಎಂಬ ಕೊರಗಿನಲ್ಲಿದ್ದ ದಂಪತಿಗೆ ಕಡೆಗೂ ಮಗು ಆಗ್ತಾ ಇದೆ ಎನ್ನುವಾಗಲೇ ಇಂಥ ದುರಂತ ಎದುರಾಗಿದ್ದು ಮಾತ್ರ ಯಾರೂ ಊಹಿಸಲಾಗದ ವಿಪರ್ಯಾಸ. ಮದುವೆ, ಮೈಥುನ, ಮಕ್ಕಳು ಎನ್ನುವ ಕುಟುಂಬ ಜೀವನವೇ ಕೆಲವೊಮ್ಮೆ ಮನುಷ್ಯನನ್ನು ಕ್ರೂರವಾಗಿ ಕಾಡುತ್ತದೆ ಎನ್ನುವುದು ಇದಕ್ಕೇ ಇರಬೇಕು.