ಬೆಂಗಳೂರು: ಯುವಕನೊಬ್ಬ ತಂದೆಯ ಹುಟ್ಟಿದ ಹಬ್ಬದ ಆಚರಿಸಲು ಮಟನ್ ಖರೀದಿಸಲು ತೆರಳುವಾಗ ಬಿದ್ದ ಮರದ ಕೊಂಬೆ ; ತಲೆಯಲ್ಲಿ 10ಕ್ಕೂ ಹೆಚ್ಚು ಬಿರುಕು!
ಬೆಂಗಳೂರು: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಕೊಂಬೆ ಬಿದ್ದು ಸವಾರನೊಬ್ಬ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಶ್ರೀನಗರದ ನಿವಾಸಿ ಅಕ್ಷಯ್‌ಗೆ (29) ಗಾಯಗೊಂಡಿರುವ ಸವಾರ. ಭಾನುವಾರ ಮಧ್ಯಾಹ್ನ 1:15ರ ಸುಮಾರಿಗೆ ಬನಶಂಕರಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಘಟನೆ ನಡೆದಿದೆ. ಮರದ ಕೊಂಬೆ ಬಿದ್ದು ಅಕ್ಷಯ್ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಸ್ಥಳೀಯರು ತಕ್ಷಣ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಲೆಯಲ್ಲಿ 10ಕ್ಕೂ ಅಧಿಕ ಬಿರುಕು: ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಅಕ್ಷಯ್, ಭಾನುವಾರ ತನ್ನ ತಂದೆಯ ಬರ್ತ್ ಡೇ ಇದ್ದುದರಿಂದ ಮಟನ್ ಖರೀದಿಸಲು ಮನೆಯಿಂದ ಹೊರಬಂದಿದ್ದರು. ಸ್ಕೂಟರ್‌ನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದ್ದು, ಅಕ್ಷಯ್‌ಗೆ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತಲೆ ಬುರುಡೆಯಲ್ಲಿ ಸುಮಾರು 10ಕ್ಕೂ ಅಧಿಕ ಬಿರುಕುಗಳುಂಟಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಚಿಕಿತ್ಸೆ ವೆಚ್ಚ ಭರಿಸುವುದಾಗಿ ಬಿಬಿಎಂಪಿ ಭರವಸೆ: ಅಕ್ಷಯ್ ಅವರ ಶಸ್ತ್ರಚಿಕಿತ್ಸೆಗೆ 2.5 ಲಕ್ಷ ರೂ. ಖರ್ಚಾಗಬಹುದು ಎಂದು ಆಸ್ಪತ್ರೆಯವರು ತಿಳಿಸಿದ ಹಿನ್ನೆಲೆಯಲ್ಲಿ 1.5 ಲಕ್ಷ ರೂ ಪಾವತಿಸಿದ್ದ ಕುಟುಂಬಸ್ಥರು ಉಳಿದ ಹಣ ಹೊಂದಿಸಲು ಪರದಾಡಿದ್ದರು. ಸಂಜೆಯ ಬಳಿಕ ಬಿಬಿಎಂಪಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಬಿಬಿಎಂಪಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ಅಕ್ಷಯ್ ಕುಟುಂಬ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ಮೊಮ್ಮಗ ಸಂಪೂರ್ಣ ಗುಣಮುಖನಾಗುವವರೆಗೆ ಬಿಬಿಎಂಪಿಯ ಅಧಿಕಾರಿಗಳು ಬರುತ್ತಿರಬೇಕು, ತಪ್ಪಿಸಿಕೊಂಡು ಹೋಗುವಂತಿಲ್ಲ ಎಂದು ಅಕ್ಷಯ್ ಅಜ್ಜಿ ಸಾವಿತ್ರಮ್ಮ ಆಗ್ರಹಿಸಿದ್ದಾರೆ.