ಮಂಗಳೂರು :ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇಕೆ ? ಕಾಲಿಯಾ ರಫೀಕ್ ಕೊಲೆ ಮಾದರಿಯಲ್ಲೇ ನಡೆದಿತ್ತು ಪ್ಲಾನ್ ! ಟಾರ್ಗೆಟ್ ಬದಲಿಸಿದ್ದೇ ದೊಡ್ಡ ಸಪೋರ್ಟ್ ಸಿಕ್ಕಿತ್ತು..!

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಎಂಟು ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಫಾಜಿಲ್ ಹತ್ಯೆಗೆ ಪ್ರತೀಕಾರ ಮತ್ತು ಕೋಮು ದ್ವೇಷದ ಕೊಲೆಯೆಂದೇ ಬಿಂಬಿತವಾಗಿರುವ ಈ ಪ್ರಕರಣದಲ್ಲಿ ಇಬ್ಬರು ಹಿಂದು ಧರ್ಮೀಯ ಆರೋಪಿಗಳು ಬಂಧನ ಆಗಿರುವುದು ಬಿಜೆಪಿ ಮತ್ತು ಹಿಂದು ಪರ ಸಂಘಟನೆಗಳವರಿಗೆ ಅರಗಿಸಿಕೊಳ್ಳದ ರೀತಿಯಾಗಿದೆ. ಯಾಕಂದ್ರೆ, ಕರಾವಳಿಯಲ್ಲಿ ಹೀಗೂ ಆಗತ್ತಾ ಎನ್ನುವ ಪ್ರಶ್ನೆಗಳನ್ನು ಇವರು ಮಾಡುತ್ತಿದ್ದಾರೆ.
ಈ ಬಗ್ಗೆ ಪೊಲೀಸರಲ್ಲಿ ಕೇಳಿದರೆ, ಕಳಸ ಮೂಲದ ನಾಗರಾಜ್ ಮತ್ತು ರಂಜಿತ್ ಎಂಬ ಇಬ್ಬರು ಯುವಕರು ಆರೋಪಿಗಳಲ್ಲಿ ಒಬ್ಬನಾದ ನಿಹಾಜ್ ಗೆಳೆಯರು ಎನ್ನುವ ವಿಚಾರ ತಿಳಿಸಿದ್ದಾರೆ. ಅದೇ ಹಿನ್ನೆಲೆಯಲ್ಲಿ ಇವರಿಬ್ಬರು ಕೊಲೆ ಕೃತ್ಯಕ್ಕೆ ಕೈಜೋಡಿಸಿದ್ದರು. ಆದರೆ ಅವರಿಗೆ ಸುಹಾಸ್ ಹಿಂದು ಪರ ಕಾರ್ಯಕರ್ತ, ಕೋಮು ದ್ವೇಷದ ಕೊಲೆ ಎನ್ನುವ ವಿಚಾರ ತಿಳಿದಿಲ್ಲ. ಆ ಬಗ್ಗೆ ಇನ್ನೂ ವಿಚಾರಣೆ ಆಗಿಲ್ಲ ಎನ್ನುತ್ತಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಇಲ್ಲದ ಇವರನ್ನು ಹಣದ ಆಫರ್ ಮೇಲೆ ತರಿಸಿದ್ದಾರೆಯೇ ಎನ್ನುವ ಗುಮಾನಿಯಿದೆ.












ವೈಯಕ್ತಿಕ ದ್ವೇಷ, ಪ್ರತೀಕಾರದ ಸೇಡು
ನಾಲ್ಕೈದು ವರ್ಷಗಳ ಹಿಂದೆ ಬಜ್ಪೆ ಶಾಂತಿಗುಡ್ಡೆಯಲ್ಲಿ ಸಫ್ವಾನ್, ಪ್ರಶಾಂತ್, ಧನರಾಜ್ ಇವರೆಲ್ಲ ಜೊತೆಗೇ ಬೆಳೆದಿದ್ದವರು. ಅದ್ಯಾವುದೋ ದ್ವೇಷದಲ್ಲಿ ಪ್ರಶಾಂತ್ ಮತ್ತು ಧನರಾಜ್ ಸೇರಿಕೊಂಡು ಒಂದು ವರ್ಷದ ಹಿಂದೆ ಸಫ್ಪಾನ್ ಮೇಲೆ ಚಾಕು ಇರಿದಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಆನಂತರ, ಫಾಜಿಲ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದಿದ್ದ ಸುಹಾಸ್ ಶೆಟ್ಟಿಯೂ ಪ್ರಶಾಂತ್ ಅಲಿಯಾಸ್ ಪಚ್ಚು ಜೊತೆಗೆ ತಂಡ ಸೇರಿಕೊಂಡಿದ್ದ. ಹೀಗಾಗಿ ಆ ಭಾಗದಲ್ಲಿ ಸಫ್ವಾನ್ ಮತ್ತು ಸುಹಾಸ್ ನೇತೃತ್ವದಲ್ಲಿ ಎರಡು ಟೀಮುಗಳು ಬೆಳೆದಿದ್ದವು.
ಒಂದು ಬಾರಿ ಜೈಲಿಗೆ ಹೋಗಿ ಬಂದ ಮಾತ್ರಕ್ಕೆ ರೌಡಿಯಾಗಿ ಓರಗೆಯವರಲ್ಲಿ ಮರ್ಯಾದೆಯನ್ನೂ ಗಿಟ್ಟಿಸಿಕೊಂಡಿದ್ದ ಸುಹಾಸ್ ಶೆಟ್ಟಿ ಮೀಸೆ ತಿರುವುದಕ್ಕೂ ಶುರು ಮಾಡಿದ್ದ. ಇದೇ ಸಂದರ್ಭದಲ್ಲಿ ಸಫ್ವಾನ್ ಗೆ ಭಯ ಶುರುವಾಗಿತ್ತು. ಒಳಗಡೆ ಭಯ ಇದ್ದಿರುವಾಗಲೇ ಸಫ್ವಾನ್ ಮುಗಿಸಲು ಪ್ರಶಾಂತ್ ಮತ್ತು ತಂಡ ಪ್ಲಾನ್ ಮಾಡ್ತಿದೆ ಎನ್ನುವ ಗಾಸಿಪ್ ಕೂಡ ಎದ್ದಿತ್ತು. ಇದು ಕೇಳಿದ್ದೇ ತಡ ಸಫ್ವಾನ್ ಮತ್ತು ಸಹಚರರು ಕೂಡ ಪ್ರಶಾಂತ್ ಅಥವಾ ಧನರಾಜ್ ನನ್ನು ಮುಗಿಸುವುದಕ್ಕೆ ಪ್ಲಾನ್ ಹಾಕ್ಕೊಂಡಿದ್ದರು. ಆದರೆ ಇವರನ್ನು ತೆಗೆದರೆ ನಮ್ಮನ್ನು ಸುಹಾಸ್ ಹಾಗೇ ಬಿಡಲ್ಲ, ಅಷ್ಟೇ ಅಲ್ಲ, ಈ ಭಾಗದಲ್ಲಿ ಬಲವಾಗಿಯೇ ಬೆಳೀತಿದ್ದಾನೆಂಬ ಅಳುಕು ಶುರುವಾಗಿತ್ತು.
ಟಾರ್ಗೆಟ್ ಬದಲಿಸಿದ್ದೇ ಸಪೋರ್ಟ್ ಸಿಕ್ಕಿತ್ತು!
ಸಫ್ವಾನ್ ತನ್ನ ಟಾರ್ಗೆಟ್ ಬದಲಿಸಿ ಸುಹಾಸ್ ಶೆಟ್ಟಿ ಮೇಲೆ ಪ್ಲಾನ್ ಮಾಡೋಕೆ ಶುರು ಮಾಡಿದಾಗ ಸಮುದಾಯದ ಕಡೆಯಿಂದಲೂ ಸಪೋರ್ಟ್ ಸಿಕ್ಕಿತ್ತು. ಫಾಜಿಲ್ ಕೊಲೆಯ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ನನ್ನು ಮುಗಿಸೋದಾದ್ರೆ ಸಪೋರ್ಟ್ ಮಾಡ್ತೀವಿ ಎನ್ನುವ ಸಂದೇಶ ಬಂದಿದ್ದೇ ತಡ, ಸಫ್ವಾನ್ ಟೀಮ್ ರೆಡಿ ಮಾಡಿದ್ದ. ನಿಯಾಜ್, ಮುಸಮ್ಮಿರ್ ಮತ್ತು ಇತರರು ಜೊತೆ ಸೇರಿದ್ದರು. ಸುಹಾಸ್ ನನ್ನು ಮುಗಿಸಿದರೆ ಪ್ರಶಾಂತ್ ಮತ್ತು ತಂಡ ವೀಕ್ ಆಗತ್ತೆ ಎನ್ನುವುದನ್ನೂ ಇವರು ಲೆಕ್ಕ ಹಾಕಿದ್ದರು. ಫಾಜಿಲ್ ಸೋದರನ ಕಡೆಯಿಂದಲೇ ಹಣಕಾಸು ನೆರವೂ ಸಿಕ್ಕಿತ್ತು. ಇದೇ ಆಫರ್ ನೀಡಿ ನಿಹಾಜ್ ತಾನು ಕೆಲಸ ಮಾಡುತ್ತಿದ್ದ ಕಳಸದಲ್ಲಿ ಗೆಳೆಯರಾಗಿದ್ದ ನಾಗರಾಜ್ ಮತ್ತು ರಂಜಿತ್ ನನ್ನು ಜೊತೆಗೆ ಕರೆದುಕೊಂಡು ಬಂದಿದ್ದ. ಇವರನ್ನು ಜೊತೆಗೆ ಸೇರಿಸಿಕೊಂಡರೆ ಹಿಂದು ಕಾರ್ಯಕರ್ತನಿಗೆ ಹಿಂದುಗಳಿಂದಲೇ ಗುನ್ನಾ ತೋಡಿದ್ರು ಎನ್ನುವ ಸಂದೇಶ ಮುಟ್ಟಿಸುವ ಪ್ಲಾನೂ ಇಲ್ಲಿ ಅಡಗಿತ್ತು. ಇವರು ಎರಡು ವಾರದ ಮೊದಲೇ ಬಜ್ಪೆಗೆ ಬಂದು ಉಳಿದುಕೊಂಡಿದ್ದರು.
ಪಿಕಪ್ ಬಳಸಿದ್ದು ಏಕೆ ಗೊತ್ತೇ ?
ರಸ್ತೆ ಮಧ್ಯೆ ಹಾಗೇ ಕತ್ತರಿಸಬಹುದು ಅನ್ನೋ ಪ್ಲಾನ್ ಸಕ್ಸಸ್ ಆಗಿರಲಿಲ್ಲ. ಸುಹಾಸ್ ಗುರಿಯಾಗಿಸಿ ಎರಡು ಸಲ ಇದೇ ರೀತಿ ಮಾಡಿದ್ದ ಪ್ರಯತ್ನ ಕೈಕೊಟ್ಟಿತ್ತು. ಇದು ಸುಹಾಸ್ ಶೆಟ್ಟಿಗೂ ತಿಳಿದು ತನ್ನ ಜೊತೆಗೆ ತಂಡ ಕಟ್ಟಿಕೊಂಡೇ ತಿರುಗಾಡತೊಡಗಿದ್ದ. ಹೀಗಾಗಿ ಇವನ ಕಾರು ಅಡ್ಡಹಾಕಿ ತಲವಾರು ಬೀಸಬೇಕು ಅಂತಲೇ ಪ್ಲಾನ್ ಹಾಕಿದ್ರು. ಈ ಹಿಂದೆ ಕಾಲಿಯಾ ರಫೀಕ್ ಮತ್ತು ಜಿಯಾನನ್ನು ಕೋಟೆಕಾರು ಹಾಗೂ ಫರಂಗಿಪೇಟೆಯಲ್ಲಿ ಇದೇ ರೀತಿ ಪಿಕಪ್ ಅಡ್ಡ ಹಾಕಿ ಕೊಲ್ಲಲಾಗಿತ್ತು. ಎದುರಿನಿಂದ ಬಲವಾಗಿ ಡಿಕ್ಕಿ ಹೊಡೆಸಿದರೆ ಕಾರು ಹಿಂದಕ್ಕೆ ತಿರುಗುತ್ತದೆ ಎನ್ನುವ ಯೋಜನೆ ಹಾಕಿದ್ದರು. ಪ್ಲಾನ್ ಪ್ರಕಾರ ಪಿಕಪ್ ಮತ್ತು ಹಿಂದಿನಿಂದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಯದ್ವಾತದ್ವಾ ಮುಗಿಬಿದ್ದು ಸುಹಾಸ್ ಕಾರಿನಿಂದ ಇಳಿಯುತ್ತಲೇ ಕಡಿದು ಹಾಕಿದ್ದಾರೆ. ಸಿಸಿಟಿವಿಯಲ್ಲಿ ದಾಖಲಾದ ದೃಶ್ಯ ಇವರ ಪ್ಲಾನ್ ಮತ್ತು ಕೃತ್ಯಕ್ಕೆ ಸಾಕ್ಷಿಯಾಗಿದೆ.