ಮಂಗಳೂರು: ಟಾರ್ಗೆಟ್ ಕಿಲ್ಲಿಂಗ್ ; ಸುಹಾಸ್ ಶೆಟ್ಟಿ ಕಾರು ಅಡ್ಡಗಟ್ಟಿ ಭೀಕರ ಹತ್ಯೆ, ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ದುಷ್ಕರ್ಮಿಗಳು, ಆಸ್ಪತ್ರೆ ಮುಂದೆ ಸೇರಿದ ಹಿಂದು ಕಾರ್ಯಕರ್ತರು !

ಮಂಗಳೂರು: ಟಾರ್ಗೆಟ್ ಕಿಲ್ಲಿಂಗ್ ; ಸುಹಾಸ್ ಶೆಟ್ಟಿ ಕಾರು ಅಡ್ಡಗಟ್ಟಿ ಭೀಕರ ಹತ್ಯೆ, ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ದುಷ್ಕರ್ಮಿಗಳು, ಆಸ್ಪತ್ರೆ ಮುಂದೆ ಸೇರಿದ ಹಿಂದು ಕಾರ್ಯಕರ್ತರು !

ಮಂಗಳೂರು: ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಟಾರ್ಗೆಟ್ ಮಾಡಿ ಕೊಂದು ಹಾಕಿದ್ದು ಮಂಗಳೂರಿನಲ್ಲಿ ಮತ್ತೆ ಕೋಮು ದ್ವೇಷ ಹೊತ್ತಿಕೊಂಡಿದೆ. ಎರಡು ದಿನಗಳ ಹಿಂದೆ ಕೇರಳ ಮೂಲದ ಅಶ್ರಫ್ ಎಂಬ ಯುವಕನ ಹತ್ಯೆಯಾಗಿತ್ತು. ಅದಕ್ಕೆ ಪ್ರತೀಕಾರ ಎನ್ನುವಂತೆ ಎರಡು ವರ್ಷ ಹಳೆಯ ಫಾಜಿಲ್ ಕೇಸಿನಲ್ಲಿ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಕೊಂದು ಮುಗಿಸಿದ್ದಾರೆ.

ಬಜ್ಪೆ ಬಳಿಯ ಕಿನ್ನಿಪದವು ಎಂಬಲ್ಲಿ ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ. ಸುಹಾಸ್ ಶೆಟ್ಟಿ ತನ್ನ ಗೆಳೆಯರಾದ ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಮತ್ತು ಶಶಾಂಕ್ ಎಂಬವರ ಜೊತೆಗೆ ಇನೋವಾ ಕಾರಿನಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ಮೀನು ಸಾಗಾಟದ ಪಿಕಪ್ ವಾಹನದಲ್ಲಿ ಡಿಕ್ಕಿಯಾಗಿಸಿ ಅಡ್ಡ ಹಾಕಿದ್ದಾರೆ. ಪ್ರತೀಕಾರದ ಅರಿವಿಲ್ಲದ ಸುಹಾಸ್ ಶೆಟ್ಟಿ ಕಾರಿನಿಂದ ಇಳಿಯುತ್ತಿದ್ದಂತೆ 6-7 ಮಂದಿಯಿದ್ದ ಯುವಕರು ತಲವಾರಿನಲ್ಲಿ ಯದ್ವಾತದ್ವಾ ದಾಳಿ ನಡೆಸಿದ್ದಾರೆ. ನಡುರಸ್ತೆಯಲ್ಲಿಯೇ ಕೃತ್ಯ ನಡೆದಿದ್ದು ಎಲ್ಲರೂ ನೋಡ ನೋಡುತ್ತಲೇ ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ. ಸುಹಾಸ್ ಜೊತೆಗಿದ್ದ ಒಂದಿಬ್ಬರ ಮೇಲೂ ದಾಳಿಯಾಗಿದ್ದು ತಲವಾರು ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೂಡಲೇ ಸುಹಾಸ್ ಶೆಟ್ಟಿ ದೇಹವನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ತರಲಾಯಿತು. ಅಷ್ಟರಲ್ಲೇ ಪ್ರಾಣ ಹೋಗಿತ್ತು. ಕೆಲ ಹೊತ್ತಿನಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆ ಕಾರ್ಯಕರ್ತರು ಆಸ್ಪತ್ರೆ ಆವರಣದಲ್ಲಿ ಸೇರಿದ್ದು ಪೊಲೀಸರ ವಿರುದ್ಧ ಕೂಗಾಡಿದ್ದಾರೆ. ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಹರೀಶ್ ಪೂಂಜ, ಸತೀಶ್ ಕುಂಪಲ ಆಗಮಿಸಿದ್ದು ಅವರ ಮುಂದೆಯೂ ಕಾರ್ಯಕರ್ತರು ರೇಗಾಟ ಮಾಡಿದ್ದಾರೆ. ಇಂಥವರೇ ಕೃತ್ಯ ಮಾಡಿದ್ದಾರೆ, ನಾಳೆ ಜಿಲ್ಲೆ ಬಂದ್ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಆಸ್ಪತ್ರೆಗೆ ಬಂದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು ಸುಹಾಸ್ ಶೆಟ್ಟಿ ರೌಡಿ ಶೀಟರ್ ಆಗಿದ್ದು ಬಜ್ಪೆ, ಸುರತ್ಕಲ್, ಬೆಳ್ತಂಗಡಿ ಠಾಣೆಯಲ್ಲಿ ಕೇಸುಗಳಿವೆ. ಬಜ್ಪೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಮಂಗಳೂರು ಸೇರಿ ಇಡೀ ಜಿಲ್ಲೆಯಲ್ಲಿ ಅಲರ್ಟ್ ಮಾಡಲಾಗಿದ್ದು ಹೆಚ್ಚುವರಿ ಪೊಲೀಸರ ನಿಯೋಜಿಸಲಾಗುವುದು. ಹೊರ ಜಿಲ್ಲೆಗಳಿಂದ ಎಎಸ್ಪಿ ಸೇರಿದಂತೆ ಮಂಗಳೂರಿನಲ್ಲಿ ಕೆಲಸ ಮಾಡಿ ಅನುಭವ ಇರುವ ಅಧಿಕಾರಿಗಳನ್ನು ಕರೆಸಲಾಗುವುದು ಎಂದು ತಿಳಿಸಿದ್ದಾರೆ. ಸುಹಾಸ್ ಮೇಲೆ ಮಂಗಳೂರಿನಲ್ಲಿ ಬೆಳ್ತಂಗಡಿಯಲ್ಲಿ ಒಟ್ಟು ಐದು ಪ್ರಕರಣಗಳಿದ್ದವು. ಅದರಲ್ಲಿ ಮೂರು ಕೇಸಿನಲ್ಲಿ ಖುಲಾಸೆಯಾಗಿದ್ದರೆ, ಒಂದು ವಿಚಾರಣೆ ಹಂತದಲ್ಲಿದೆ. ಇನ್ನೊಂದರಲ್ಲಿ ಶಿಕ್ಷೆಯಾಗಿತ್ತು. ಫಾಜಿಲ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಒಂದು ವರ್ಷದ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಬಜಪೆ ಭಾಗದಲ್ಲಿ ತನ್ನದೇ ತಂಡ ಕಟ್ಟಿಕೊಂಡಿದ್ದ.

ಇದೇ ವೇಳೆ, ಪ್ರತಿಕ್ರಿಯಿಸಿದ ಬಿಜೆಪಿ ಶಾಸಕರಾದ ವೇದವ್ಯಾಸ್ ಮತ್ತು ಭರತ್ ಶೆಟ್ಟಿ, ಮುಸ್ಲಿಂ ಗೂಂಡಾಗಳು ಹಿಂದು ಸಂಘಟನೆ ಪ್ರಮುಖರನ್ನು ಟಾರ್ಗೆಟ್ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಎಸ್ಡಿಪಿಐ, ಪಿಎಫ್ಐನ ಕ್ರಿಮಿನಲ್ ಗಳ ಪರವಾಗಿದ್ದು ಕೇಸನ್ನು ಹಿಂಪಡೆದು ಬೆಂಬಲವಾಗಿ ನಿಂತಿದೆ. ಇದರಿಂದಾಗಿ ಮುಸ್ಲಿಂ ಗೂಂಡಾಗಳು ಹಿಂದುಗಳನ್ನು ಟಾರ್ಗೆಟ್ ಮಾಡಿದ್ದಾರೆ. ಇಂತಹ ಗೂಂಡಾಗಳ ಹಿಂದೆ ಯಾರಿದ್ದಾರೆ, 8-10 ಜನ ಬಂದು ಗುಂಪು ಕೂಡಿ ಹತ್ಯೆ ಮಾಡುತ್ತೆ ಎಂದರೆ ಪೊಲೀಸ್ ಇಲಾಖೆ ಯಾಕಿದೆ. ಇಂಟೆಲಿಜೆನ್ಸ್ ಏನು ಮಾಡುತ್ತಿದೆ ಎಂದು ಕೇಳಬೇಕಾಗಿದೆ ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಪೊಲೀಸರು ಕಳೆದ ಕೆಲವು ದಿನಗಳಿಂದ ಸುಹಾಸ್ ಮನೆಗೆ ಬಂದು ತಪಾಸಣೆ ಮಾಡುತ್ತಿದ್ದರು. ಕಾರಿನಲ್ಲಿ ವೆಪನ್ ಇದೆಯೇ ಎಂದು ಚೆಕ್ ಮಾಡುತ್ತಿದ್ದರು. ಆತ ತನ್ನ ರಕ್ಷಣೆಗೆ ಶಸ್ತ್ರ ಇಟ್ಟುಕೊಳ್ಳದಂತೆ ಮಾಡಿದ್ದು ಇದನ್ನು ನೋಡಿದರೆ ಮೊದಲೇ ಸ್ಕೆಚ್ ಹಾಕಿದ್ದರೇ ಎಂಬ ಅನುಮಾನ ಬರುತ್ತದೆ. ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರು ಕೂಡ ಕ್ರಿಮಿನಲ್ ಪರವಾಗಿ ಕೆಲಸ ಮಾಡುತ್ತಿದ್ದಾರೆಂಬ ಭಾವನೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article