ಮಂಗಳೂರು :ಕೋಮುವಾದ ನಿಗ್ರಹಕ್ಕೆ ಏಂಟಿ ನಕ್ಸಲ್ ಪಡೆ ರೀತಿಯಲ್ಲೇ ಕಮ್ಯೂನಲ್ ಟಾಸ್ಕ್ ಫೋರ್ಸ್ ಸ್ಥಾಪನೆ ; ಗೃಹ ಸಚಿವ ಪರಮೇಶ್ವರ್

ಮಂಗಳೂರು: ಯಾವುದೇ ಕಾರಣಕ್ಕೂ ಕರಾವಳಿ ಜಿಲ್ಲೆಯಲ್ಲಿ ಶಾಂತಿ ಹಾಳು ಮಾಡುವ ದುಷ್ಟ ಶಕ್ತಿಗೆ ಅವಕಾಶ ನೀಡುವುದಿಲ್ಲ. ಇನ್ನು ಮುಂದೆ ಈ ರೀತಿಯ ಘಟನೆ ನಡೆಯಬಾರದು ಅಂತ ಸರ್ಕಾರ ತೀರ್ಮಾನಕ್ಕೆ ಬಂದಿದೆ. ಇದಕ್ಕಾಗಿ ಹೊಸದಾಗಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಮಾಡುತ್ತೇವೆ. ಆ್ಯಂಟಿ ನಕ್ಸಲ್ ಫೋರ್ಸ್ ರೀತಿಯಲ್ಲಿ ಪ್ರತ್ಯೇಕ ಪಡೆಯನ್ನು ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಬೆನ್ನು ಬೆನ್ನಿಗೆ ನಡೆದ ಎರಡು ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿದ ಬಳಿಕ ಪರಮೇಶ್ವರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಈ ಬಾರಿಯೂ
ದ.ಕ ಮತ್ತು ಉಡುಪಿ ಭಾಗದಲ್ಲಿ ಮತ್ತೆ ಕೋಮು ವೈಷಮ್ಯ ಮರುಕಳಿಸಿದೆ ಎನ್ನುವ ಭಾವನೆ ಬಂದಿರಬಹುದು. ಆದರೆ ಜನ ಸಮುದಾಯ ಇಂತಹ ಘಟನೆಯನ್ನು ಇಷ್ಟ ಪಡುವುದಿಲ್ಲ. ಪೊಲೀಸ್ ಇಲಾಖೆ ಹಾಗೂ ಸರ್ಕಾರ ಶಾಂತಿಯಿಂದ ಇರಬೇಕು ಅಂತ ಬಯಸುತ್ತಾರೆ. ಇಲ್ಲಿಯೇ ಕಲಿಯಬೇಕು, ಉದ್ಯೋಗ ಸಿಗಬೇಕು ಅಂತ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ.

ಈ ಘಟನೆ ಹಾಗೂ ನಾಲ್ಕು ದಿನ ಹಿಂದಿನ ಅಶ್ರಫ್ ಕೊಲೆ ಮತ್ತೆ ಕೋಮು ಸೌಹಾರ್ದಕ್ಕೆ ಸವಾಲಾಗಿದೆ ನಿಂತಿದೆ. ಸುಹಾಸ್ ಪ್ರಕರಣದಲ್ಲಿ ಎಂಟು ಮಂದಿ ಅರೆಸ್ಟ್ ಮಾಡಿದ್ದಾರೆ. ಅಶ್ರಫ್ ಕೇಸ್ ನಲ್ಲಿ 21 ಮಂದಿ ಅರೆಸ್ಟ್ ಆಗಿದೆ. ನಮ್ಮ ಉದ್ದೇಶ ಈ ಭಾಗ ಶಾಂತಿಯಿಂದ ಇರಬೇಕು ಎನ್ನುವುದು. ಹಿಂದೆ ನಮ್ಮ ಪಕ್ಷದಿಂದ ಶಾಂತಿ ಸೌಹಾರ್ದ ಪಾದಯಾತ್ರೆ ಮಾಡಿದ್ದೆವು. ಈಗ ಮತ್ತೆ ಈ ರೀತಿಯ ಘಟನೆ ನಡೆದಿದೆ. ಇದರ ಹಿಂದೆ ಅನೇಕ ಶಕ್ತಿಗಳು ಇವೆ, ಅವುಗಳ ಹುಟ್ಟಡಗಿಸುವ ಕೆಲಸ ಮಾಡುತ್ತೇವೆ.
ಯಾರು ಕಮ್ಯೂನಲ್ ಅಕ್ಟಿವಿಟಿ ಮಾಡ್ತಾರೆ, ಅವರಿಗೆ ಸಹಾಯ ಮಾಡ್ತಾರೆ ಎಂಬುದನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಎರಡು ಜಿಲ್ಲೆಯಲ್ಲಿ ಶಾಂತಿ ತರುವ ಉದ್ದೇಶದಿಂದ ಈ ಫೋರ್ಸ್ ಮಾಡುತ್ತೇವೆ. ಇದಕ್ಕಾಗಿ ನಕ್ಸಲ್ ವಿರೋಧಿ ಪಡೆಯಲ್ಲಿದ್ದ ನುರಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತೇವೆ. ಯಾರು ಪ್ರಚೋದನಕಾರಿ ಭಾಷಣ ಮಾಡ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಆ್ಯಂಟಿ ಕಮ್ಯೂನಲ್ ಪೋರ್ಸ್ ಕರಾವಳಿಯ ಎರಡು ಜಿಲ್ಲೆಗೆ ಮಾತ್ರ ಇರಲಿದೆ. ಪ್ರತೇಕವಾಗಿ ಅವರಿಗೆ ಅಧಿಕಾರ ನೀಡುತ್ತೇವೆ. ಅದರ ರೂಪುರೇಷೆಯನ್ನು ಶೀಘ್ರದಲ್ಲೇ ಮಾಡುತ್ತೇವೆ. ಈ ವಿಭಾಗದಲ್ಲಿ ಅಧಿಕಾರಿಗಳು ಬೇರೆ ಬೇರೆ ಕಡೆಯಿಂದ ಬರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು.