ಮಂಗಳೂರು :ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ, ಗಸ್ತು ಪಡೆ, ಸ್ವಯಂಸೇವಕರ ತಂಡ ರಚನೆ ; ಜಿಪಂ ಉಪ ಕಾರ್ಯದರ್ಶಿ ಸೂಚನೆ.

ಮಂಗಳೂರು :ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ, ಗಸ್ತು ಪಡೆ, ಸ್ವಯಂಸೇವಕರ ತಂಡ ರಚನೆ ; ಜಿಪಂ ಉಪ ಕಾರ್ಯದರ್ಶಿ ಸೂಚನೆ.

ಮಂಗಳೂರು : ರಾಷ್ಟ್ರೀಯ ಹೆದ್ದಾರಿ, ರಾಜ್ಯ ಮತ್ತು ಗ್ರಾಮೀಣ ಭಾಗದ ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯುವ ಸಲುವಾಗಿ “ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು; ನಮ್ಮೊಂದಿಗೆ ನೀವು” ಅಭಿಯಾನ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯಕೊಡ  ಸೂಚಿಸಿದ್ದಾರೆ. 

ದ.ಕ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 73ರ ಇಕ್ಕೆಲಗಳಲ್ಲಿ ತ್ಯಾಜ್ಯ ಬೀಳುವುದನ್ನು ನಿಯಂತ್ರಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ 73ರ ಇಕ್ಕೆಲಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಮೊದಲಿಗೆ ಮಂಗಳೂರು ತಾಲೂಕಿನ ಅಡ್ಯಾರ್, ಬಂಟ್ವಾಳ ತಾಲೂಕಿನ ತುಂಬೆ, ಪುದು ಹಾಗೂ ಕಳ್ಳಿಗೆ ಗ್ರಾಮ ಪಂಚಾಯತ್‍ಗಳನ್ನು ಆಯ್ಕೆ ಮಾಡಲಾಗಿದ್ದು, ಈ ವ್ಯಾಪ್ತಿಯ ರಸ್ತೆ ಬದಿ ಬೀಳುವ ತ್ಯಾಜ್ಯಗಳನ್ನು ತಡೆಗಟ್ಟಲು ಗಸ್ತು ಪಡೆ ಹಾಗೂ ಬ್ಲಾಕ್ ಸ್ಪಾಟ್‍ಗಳಲ್ಲಿ ನಿಲ್ಲಲು 5 ಜನರ ತಂಡವನ್ನು ರಚಿಸಲಾಗುವುದು. ಬ್ಲಾಕ್ ಸ್ಪಾಟ್‍ನಲ್ಲಿ ನಿಲ್ಲಲು ಪರಿಸರ ಮತ್ತು ಸ್ವಚ್ಛತೆ ವಿಷಯದಲ್ಲಿ ಕಾಳಜಿ ಇರುವವರು ಭಾಗವಹಿಸಬಹುದು.

ಈ ಅಭಿಯಾನವು ಮೂರು ತಿಂಗಳಿನ ವರೆಗೆ ನಡೆಯಲಿದ್ದು ಈ ವೇಳೆ ಜನರನ್ನು ಮಾಹಿತಿ, ಶಿಕ್ಷಣ ನೀಡಿ ತ್ಯಾಜ್ಯ ಬಿಸಾಡುವವರ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳಲು ಅವರು ಸೂಚನೆ ನೀಡಿದರು. ಸಭೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಸಚಿನ್  ಮಾತನಾಡಿ, ಹೆದ್ದಾರಿಗಳ ಕಸ ನಿರ್ವಹಣೆಗೆ ತೊಡಗುವ ಮೊದಲು ವಾಣಿಜ್ಯ ಮಳಿಗೆಗಳಲ್ಲಿ ಹಾಗೂ ಪ್ರತೀ ಮನೆಗಳಲ್ಲಿ ಕಸ ವಿಂಗಡಿಸಿ ಕೊಡುವಂತೆ ಕ್ರಮ ವಹಿಸಬೇಕಿದೆ. 100% ಮನೆಗಳಿಂದ ಸರಿಯಾದ ಕ್ರಮದಲ್ಲಿ ತ್ಯಾಜ್ಯ ಸಂಗ್ರಹ ಆದರೆ ಮಾತ್ರ ರಸ್ತೆ ಬದಿಗಳಲ್ಲಿ ಕಸ ಬೀಳುವುದನ್ನು ತಡೆಗಟ್ಟಬಹುದು ಎಂದರು. 

ಮಂಗಳೂರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ, ರಸ್ತೆ ಬದಿಯಲ್ಲಿ ಕಸ ಬೀಳುವ ಪ್ರದೇಶವನ್ನು ಗುರುತಿಸಿ ನಿಗಾ ವಹಿಸಬೇಕಿದೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದರು. ಸಭೆಯಲ್ಲಿ ಕಳ್ಳಿಗೆ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ, ಅಡ್ಯಾರ್ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್, ತುಂಬೆ ಪಂಚಾಯತ್ ಉಪಾಧ್ಯಕ್ಷ ಗಣೇಶ್, ಹಸಿರು ದಳದ ನಾಗರಾಜ್ ಆರ್ ಅಂಚನ್, ಜಿಲ್ಲಾ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಮಾಲೋಚಕರು ಉಪಸ್ಥಿತರಿದ್ದರು.

ಕಸ ಬೀಳುವ ಪ್ರದೇಶ ಗುರುತಿಸಿ ಆ ಪ್ರದೇಶದಲ್ಲಿ ಬೆಳಗ್ಗೆ 5 ರಿಂದ 8 ಗಂಟೆಯವರಗೆ ಹಾಗೂ ಸಂಜೆ 6 ರಿಂದ 9 ಗಂಟೆಯವರೆಗೆ ಪರಿಸರ ಮತ್ತು ಸ್ವಚ್ಛತೆಯಲ್ಲಿ ಆಸಕ್ತಿ ಇರುವ 5 ಜನ ಸ್ವಯಂಸೇವಕರನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವೇಳೆ ತ್ಯಾಜ್ಯ ಬಿಸಾಡುವರನ್ನು ಗುರುತಿಸಿ ಅವರಿಗೆ ಮನವರಿಕೆ ಮಾಡಲು ಉದ್ದೇಶಿಸಿದೆ. ಅಲ್ಲದೆ ಸ್ವಚ್ಛತೆ ಜಾಗೃತಿ ಮೂಡಿಸುವ ಸಲುವಾಗಿ ವಾಹನದಲ್ಲಿ ಮೈಕ್ ಪ್ರಚಾರ, ತ್ಯಾಜ್ಯ ಬೀಳುವುದನ್ನು ತಡೆಹಿಡಿಯಲು ಗಸ್ತು ಪಡೆ ರಚಿಸಲು ದ.ಕ. ಜಿಲ್ಲಾ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಿದ್ಧತೆ ನಡೆಸಿದೆ.

Ads on article

Advertise in articles 1

advertising articles 2

Advertise under the article