ಮೈಸೂರು :ಪ್ರಿಯಕರನ ಜೊತೆ ಓಡಿ ಹೋದ ಮಗಳು ; ಮನನೊಂದು ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು, ಮೈಸೂರಿನಲ್ಲಿ ಮರ್ಯಾದೆಗೆ ಅಂಜಿ ಆತ್ಮಹತ್ಯೆ !

ಮೈಸೂರು: ಮಗಳು ಪ್ರಿಯಕರನ ಜೊತೆ ಮನೆ ಬಿಟ್ಟು ಹೋದ ಕಾರಣ ಮನನೊಂದು ಒಂದೇ ಕುಟುಂಬದ ಮೂರು ಜನ ಹೆಬ್ಬಾಳ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದ ನಿವಾಸಿಗಳಾದ ಮಹಾದೇವ ಸ್ವಾಮಿ (55) ಮಂಜುಳಾ (45) ಹಾಗೂ ಇವರ ಕಿರಿಯ ಮಗಳು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡವರು.

ಇವರೆಲ್ಲ ತಾಲೂಕಿನ ಬುದನೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಇಂದು ಬೆಳಗ್ಗೆ ಬೈಕ್ನಲ್ಲಿ ಜಲಾಶಯಕ್ಕೆ ಬಂದ ಇವರು ಬೈಕ್ ನಿಲ್ಲಿಸಿ, ಅಲ್ಲೆ ಚಪ್ಪಲಿ ಬಿಟ್ಟು ಡೆತ್ನೋಟ್ ಬರೆದಿಟ್ಟು ನೀರಿಗೆ ಹಾರಿದ್ದಾರೆ.
ಈ ಮಾರ್ಗವಾಗಿ ಹೋಗುತ್ತಿದ್ದ ಅದೇ ಗ್ರಾಮಸ್ಥರು ಬೈಕ್ ಗಮನಿಸಿ ಹತ್ತಿರ ಬಂದಾಗ ವಿಷಯ ತಿಳಿದಿದೆ. ತಕ್ಷಣ ಗ್ರಾಮಸ್ಥರು ಎಚ್.ಡಿ.ಕೋಟೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಮೂವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರಿಕ್ಷೆಗೆ ಎಚ್.ಡಿ.ಕೋಟಿ ಶವಾಗಾರಕ್ಕೆ ಕಳುಹಿಸಿದ್ದಾರೆ.
ಇತ್ತೀಚೆಗೆ ಮಹಾದೇವಸ್ವಾಮಿ ದಂಪತಿಯ ಮೊದಲ ಮಗಳು ಪ್ರೀತಿಸಿ ಮದುವೆಯಾಗಲು ಮನೆಬಿಟ್ಟು ಹೋದ ಕಾರಣ ಮರ್ಯಾದೆಗೆ ಅಂಜಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಡೆತ್ನೋಟ್ನಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.