ಹೈದರಾಬಾದ್:ಸ್ಥಳೀಯ ಮಹಿಳೆಯರಿಂದ ವಿಶ್ವ ಸುಂದರಿ ಸ್ಪರ್ಧಿಗಳ ಕಾಲು ತೊಳೆಸಿದ ಸರ್ಕಾರ! ಇದು ನಾರಿ ಶಕ್ತಿಗೆ ಮಾಡಿದ ಅಪಮಾನ ಎಂದು ವ್ಯಾಪಕ ಟೀಕೆ..!!

ಹೈದರಾಬಾದ್: ತೆಲಂಗಾಣ ಸರ್ಕಾರ ಯಾರನ್ನೋ ಮೆಚ್ಚಿಸಲು ಹೋಗಿ ಜನಾಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ತೆಲಂಗಾಣದ ಮಹಿಳೆಯರಿಂದ ವಿದೇಶಿ ಮಹಿಳೆಯರ ಕಾಲು ತೊಳೆಸಲಾಗಿದೆ!.
ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಇದನ್ನು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಗುಲಾಮಗಿರಿ ಮತ್ತು ಜನಾಂಗೀಯ ಭೇದದಂತೆ ಕಾಣುತ್ತಿದೆ ಎಂದು ಜನರು ಟೀಕೆ ಮಾಡುತ್ತಿದ್ದಾರೆ.
ವಿಶ್ವ ಸುಂದರಿ (Miss World) ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮಹಿಳೆಯರು ಹೈದರಾಬಾದ್‌ಗೆ ಬಂದಿದ್ದಾರೆ. ಇಲ್ಲಿನ ದೇವಸ್ಥಾನಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರಿಂದ ವಿಶ್ವ ಸುಂದರಿ ಸ್ಪರ್ಧಿಗಳ ಕಾಲು ತೊಳೆಸಲಾಗಿದೆ.
ಈ ಬಾರಿ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ಅದರ ಪ್ರಕ್ರಿಯೆಗಳು ಆರಂಭ ಆಗಿವೆ. ಅದರ ಅಂಗವಾಗಿ ಕೆಲವು ಸ್ಥಳಗಳಿಗೆ ವಿದೇಶಿ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಮೇ 31ರಂದು ಹೈದರಾಬಾದ್ನಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆಯ ಫಿನಾಲೆ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈ ನಡುವೆ ವಿವಾದ ಕೂಡ ಶುರುವಾಗಿದೆ.
ನೂರಕ್ಕೂ ಅಧಿಕ ದೇಶಗಳಿಂದ ಬಂದಿರುವ ವಿಶ್ವ ಸುಂದರಿ ಸ್ಪರ್ಧಿಗಳು ತೆಲಂಗಾಣದಲ್ಲಿ ಉಳಿದುಕೊಂಡಿದ್ದಾರೆ. ಹೈದರಾಬಾದ್ನಲ್ಲಿ ಮೇ 10ರಿಂದ ವಿಶ್ವ ಸುಂದರಿ ಸ್ಪರ್ಧೆಯ ಪ್ರಕ್ರಿಯೆಗಳು ಆರಂಭವಾಗಿದ್ದು, ಸ್ಪರ್ಧಿಗಳೆಲ್ಲರೂ ರಾಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದರ ಉಸ್ತುವಾರಿಯನ್ನು ತೆಲಂಗಾಣ ಸರ್ಕಾರದ ಪ್ರವಾಸೋದ್ಯಮದ ಇಲಾಖೆ ವಹಿಸಿಕೊಂಡಿದೆ. ಸಂಪ್ರದಾಯದ ಪ್ರಕಾರ ಕಾಲು ತೊಳೆದುಕೊಂಡು ದೇವಸ್ಥಾನ ಪ್ರವೇಶ ಮಾಡಬೇಕು. ಆದರೆ ಆ ಸಂಪ್ರದಾಯ ಪಾಲಿಸುವಲ್ಲಿ ಅತಿರೇಕದ ವರ್ತನೆ ತೋರಿಸಲಾಗಿದೆ.
ವಿದೇಶಿ ಮಹಿಳೆಯರನ್ನು ಸಾಲಾಗಿ ಕೂರಿಸಲಾಗಿದೆ. ಅವರ ಕಾಲುಗಳನ್ನು ತೆಲಂಗಾಣದ ಸ್ಥಳೀಯ ಮಹಿಳೆಯರಿಂದ ತೊಳೆಸಲಾಗಿದೆ. ಬಳಿಕ ಕಾಲು ಒರೆಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಬಹುತೇಕರು ಕಟುವಾಗಿ ಟೀಕಿಸಿದ್ದಾರೆ. ‘ತೆಲಂಗಾಣ ಸರ್ಕಾರದ ಅಸಹ್ಯ ಕೆಲಸ ಇದು’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ನೂರಾರು ಸ್ಪರ್ಧಿಗಳಲ್ಲಿ ಕೆಲವರು ಯಾರ ಸಹಾಯವನ್ನೂ ಪಡೆಯದೇ ಸ್ವತಃ ಕಾಲು ತೊಳೆದುಕೊಂಡರು. ಆದರೆ ಇನ್ನುಳಿದ ಸ್ಪರ್ಧಿಗಳ ಕಾಲುಗಳನ್ನು ತೆಲಂಗಾಣದ ಮಹಿಳೆಯರು ತೊಳೆದರು. ಇದು ನಾರಿ ಶಕ್ತಿಗೆ ಮಾಡಿದ ಅವಮಾನ ಎಂದು ಟೀಕಿಸಲಾಗುತ್ತಿದೆ.