ಮಂಗಳೂರು:ಮದುವೆ ಸಂಬಂಧದಲ್ಲಿ ಬಿರುಕು ; ಮಾತುಕತೆಗೆ ಬಂದ ಬ್ರೋಕರನ್ನೇ ಕಡಿದು ಹತ್ಯೆಗೈದ ಮದುವೆ ಗಂಡು, ಇಬ್ಬರು ಮಕ್ಕಳಿಗೂ ತಲವಾರು ಏಟು, ವಳಚ್ಚಿಲ್ ನಲ್ಲಿ ಭೀಕರ ಕೃತ್ಯ.!!

ಮಂಗಳೂರು : ಮದುವೆ ಸಂಬಂಧದಲ್ಲಿ ಬಿರುಕು ಉಂಟಾದ ಕೋಪದಲ್ಲಿ ಮದುವೆ ಗಂಡು ಬ್ರೋಕರ್ ವ್ಯಕ್ತಿಯನ್ನೇ ಕತ್ತಿಯಿಂದ ಕಡಿದು ಕೊಲೆಗೈದ ದಾರುಣ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ನಲ್ಲಿ ನಡೆದಿದೆ.
ವಾಮಂಜೂರು ನಿವಾಸಿ ಸುಲೇಮಾನ್ (50) ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ. ತಲವಾರಿನಿಂದ ಕಡಿದು ಕೊಲೆಗೈದ ವಳಚ್ಚಿಲ್ ನಿವಾಸಿ ಮುಸ್ತಫಾ (30) ನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆ ಬ್ರೋಕರ್ ಆಗಿದ್ದ ಸುಲೇಮಾನ್ ತನ್ನ ಸಂಬಂಧಿಕ ಯುವತಿಯನ್ನು ಎಂಟು ತಿಂಗಳ ಹಿಂದೆ ಮುಸ್ತಫಾಗೆ ಮದುವೆ ಮಾಡಿಸಿದ್ದ. ಮದುವೆ ನಂತರ ಕುಟುಂಬ ಜಗಳ ಉಂಟಾಗಿದ್ದು ವೈಮನಸ್ಸಿನಿಂದ ಎರಡು ತಿಂಗಳ ಹಿಂದೆ ಪತ್ನಿ ಮುಸ್ತಫಾನನ್ನು ಬಿಟ್ಟು ಹೋಗಿದ್ದಳು. ಇದರ ಕೋಪದಲ್ಲಿ ಸುಲೇಮಾನ್ ಮತ್ತು ಮುಸ್ತಫಾ ನಡುವೆ ಜಗಳ ಆಗಿತ್ತು.
ನಿನ್ನೆ ರಾತ್ರಿ ಮಾತುಕತೆಗೆಂದು ಆರೋಪಿ ಮುಸ್ತಫಾ, ಸುಲೇಮಾನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಹರೆಯದ ಇಬ್ಬರು ಮಕ್ಕಳ ಜೊತೆಗೆ ರಾತ್ರಿ ಹತ್ತು ಗಂಟೆ ವೇಳೆಗೆ ಮುಸ್ತಫಾ ಮನೆಗೆ ಬಂದಿದ್ದ ಸುಲೇಮಾನ್, ಮನೆಯ ಹೊರಗಡೆ ಮಕ್ಕಳನ್ನು ನಿಲ್ಲಿಸಿ ಮಾತುಕತೆ ನಡೆಸುತ್ತಿದ್ದ. ಆನಂತರ, ಮಾತುಕತೆ ವಿಫಲವಾಯ್ತು, ನಾವು ಮರಳಿ ಹೋಗೋಣ ಎಂದು ಹೇಳುತ್ತ ಬಿರುಸಿನಿಂದ ಸುಲೇಮಾನ್ ಹಿಂದಕ್ಕೆ ಬರುತ್ತಿದ್ದಾಗಲೇ ಕತ್ತಿ ಹಿಡಿದು ಅಟ್ಟಿಸಿಕೊಂಡು ಬಂದ ಮುಸ್ತಫಾ ನೇರವಾಗಿ ಸುಲೇಮಾನ್ ಕುತ್ತಿಗೆ ಭಾಗಕ್ಕೆ ಕಡಿದಿದ್ದಾನೆ.
ಗಂಭೀರ ಏಟಿಗೊಳಗಾದ ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದರೆ, ತಡೆಯಲು ಬಂದ ಮಕ್ಕಳಾದ ಸಿಯಾಬ್ ಮತ್ತು ರಿಯಾಬ್ ಮೇಲೂ ಆರೋಪಿ ತಲವಾರು ಬೀಸಿದ್ದಾನೆ. ಸಿಯಾಬ್ ಎದೆಗೆ ಗಾಯವಾಗಿದ್ದರೆ, ರಿಯಾಬ್ ಬಲಗೈಯ ಅಂಗೈಗೆ ಏಟು ಬಿದ್ದಿದೆ. ಸ್ಥಳೀಯರು ಕೂಡಲೇ ಇವರನ್ನು ಅಡ್ಯಾರ್ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು ಅಷ್ಟರಲ್ಲಿ ಸುಲೇಮಾನ್ ಸಾವನ್ನಪ್ಪಿದ್ದಾರೆ. ಆರೋಪಿ ಮುಸ್ತಫಾನನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.