ಕುಕ್ಕೆ ಸುಬ್ರಹ್ಮಣ್ಯ:ದೇವಸ್ಥಾನ ಆಡಳಿತ ಸಮಿತಿಗೆ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ಅಧ್ಯಕ್ಷ ; ದೇವಸ್ಥಾನಕ್ಕೂ 'ರೌಡಿಭಾಗ್ಯ' ಎಂದು ಜಾಲತಾಣದಲ್ಲಿ ಬಿಜೆಪಿ ಟೀಕೆ, ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಸಚಿವ ದಿನೇಶ್ ಗುಂಡೂರಾವ್.

ಕುಕ್ಕೆ ಸುಬ್ರಹ್ಮಣ್ಯ:ದೇವಸ್ಥಾನ ಆಡಳಿತ ಸಮಿತಿಗೆ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ಅಧ್ಯಕ್ಷ ; ದೇವಸ್ಥಾನಕ್ಕೂ 'ರೌಡಿಭಾಗ್ಯ' ಎಂದು ಜಾಲತಾಣದಲ್ಲಿ ಬಿಜೆಪಿ ಟೀಕೆ, ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಸಚಿವ ದಿನೇಶ್ ಗುಂಡೂರಾವ್.

ಮಂಗಳೂರು : ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಸಮಿತಿಗೆ ಮಾಜಿ ರೌಡಿಶೀಟರ್ ಆಗಿರುವ ಕಾಂಗ್ರೆಸ್ ಮುಖಂಡ ಹರೀಶ್ ಇಂಜಾಡಿ ಎಂಬವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಬಿಜೆಪಿ ಟೀಕೆಗೆ ಗುರಿಯಾಗಿದೆ. ಎರಡು ದಿನಗಳ ಹಿಂದೆ ಭಾರೀ ಪೈಪೋಟಿಯ ಮಧ್ಯೆ ಕಾಂಗ್ರೆಸ್ ಜಿಲ್ಲಾ ಮುಖಂಡರ ಶಿಫಾರಸಿನಂತೆ ಹರೀಶ್ ಇಂಜಾಡಿ ಅವರನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗಿತ್ತು.

ಹರೀಶ್ ಇಂಜಾಡಿ ಆಯ್ಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಡೆಯನ್ನು ಟೀಕಿಸಿ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಸುಹಾಸ್ ಶೆಟ್ಟಿ ಕೊಲೆಯಾದ ಸಂದರ್ಭದಲ್ಲಿ ಆತ ರೌಡಿಶೀಟರ್ ಎನ್ನುವ ಕಾರಣಕ್ಕೆ ಮನೆಗೆ ಭೇಟಿ ನೀಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಮತ್ತು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಇದೇ ವಿಚಾರವನ್ನು ಮುಂದಿಟ್ಟು ಈಗ ಬಿಜೆಪಿ ನಾಯಕರು ಟೀಕಿಸಿದ್ದು, ರೌಡಿಶೀಟರ್ ಮನೆಗೆ ಭೇಟಿ ನೀಡಲ್ಲ ಎನ್ನುತ್ತಿದ್ದವರು ಈಗ ರೌಡಿಶೀಟ್ ವ್ಯಕ್ತಿಯ ಕೈಗೆ ಶ್ರೀಮಂತ ದೇವಸ್ಥಾನದ ಆಡಳಿತವನ್ನೇ ಕೊಟ್ಟಿದ್ದಾರೆ, ದೇವಸ್ಥಾನಕ್ಕೂ ರೌಡಿಭಾಗ್ಯ ಎಂದು ಟೀಕಿಸಿ ಟ್ರೋಲ್ ಮಾಡಿದ್ದಾರೆ.

ದೇವಸ್ಥಾನ ಕಮಿಟಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹರೀಶ್ ಇಂಜಾಡಿ ವಿರುದ್ಧ 25 ವರ್ಷಗಳ ಹಿಂದೆ ಸುಬ್ರಹ್ಮಣ್ಯ ಠಾಣೆಯಲ್ಲಿ ರೌಡಿಶೀಟ್ ಹಾಕಲಾಗಿತ್ತು. ಮರ ಕಳ್ಳತನ, ಮರಳು ದಂಧೆ ಮತ್ತು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಣ್ಣು ಕಾಯಿ ಅಂಗಡಿ ತೆರೆದು ವಂಚನೆ ಎಸಗಿದ ಆರೋಪದಲ್ಲಿ ಬೆನ್ನು ಬೆನ್ನಿಗೆ ಕೇಸು ದಾಖಲಾಗಿದ್ದರಿಂದ ರೌಡಿಶೀಟ್ ತೆರೆಯಲಾಗಿತ್ತು. ಈ ಕಾರಣದಿಂದ ದೇವಸ್ಥಾನ ಹಿತಾಸಕ್ತಿಗೆ ವಿರುದ್ಧ ಇರುವ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಕೊಡಬಾರದು ಎಂದು ಸುಬ್ರಹ್ಮಣ್ಯದ ಕೆಲವು ಗ್ರಾಮಸ್ಥರು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೂ ಪತ್ರ ಬರೆದಿದ್ದರು. ಆಕ್ಷೇಪ ಬಂದಿದ್ದರಿಂದ ಕಾಂಗ್ರೆಸ್ ವಲಯದಲ್ಲಿಯೂ ಹರೀಶ್ ಇಂಜಾಡಿ ನೇಮಕಕ್ಕೆ ವಿರೋಧ ಕೇಳಿಬಂದಿತ್ತು. ಹೀಗಾಗಿ ಇನ್ನೊಬ್ಬ ಆಕಾಂಕ್ಷಿ ಮಹೇಶ್ ಕರಿಕ್ಕಳ ಅವರನ್ನು ಅಧ್ಯಕ್ಷ ಹುದ್ದೆಗೇರಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಕೊನೆಕ್ಷಣದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ಹರೀಶ್ ಇಂಜಾಡಿ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದರಿಂದ ಅದೇ ಹೆಸರು ಆಯ್ಕೆಯಾಗಿತ್ತು.

ಟೀಕೆ- ವಿವಾದ ಕೇಳಿಬಂದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನ ಕಮಿಟಿಯ ನೂತನ ಅಧ್ಯಕ್ಷ ಹರೀಶ್ ಇಂಜಾಡಿ ಸ್ಪಷ್ಟನೆ ನೀಡಿದ್ದು, ನಾನು ರೌಡಿಶೀಟರ್ ಅಲ್ಲ, ದೇವಸ್ಥಾನ ಕಮಿಟಿಗೆ ಹಣ ಬಾಕಿ ಇರಿಸಿಕೊಂಡಿದ್ದೂ ಇಲ್ಲ. 25 ವರ್ಷಗಳ ಹಿಂದೆ ಅಂಗಡಿ ಗುತ್ತಿಗೆ ಪಡೆದ ವೇಳೆ ದೇವಸ್ಥಾನಕ್ಕೆ ಹಣ ಬಾಕಿ ಇತ್ತು. ಆಬಳಿಕ ಚೆಕ್ ಬೌನ್ಸ್ ಪ್ರಕರಣವೂ ದಾಖಲಾಗಿತ್ತು. ಆನಂತರ, ಎರಡು ವರ್ಷಗಳಲ್ಲಿ ಎಲ್ಲ ಬಾಕಿಯನ್ನೂ ಚುಕ್ತಾ ಮಾಡಿದ್ದೇನೆ. ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. 15 ವರ್ಷಗಳ ಹಿಂದೆ ನನ್ನ ಮೇಲಿದ್ದ ರೌಡಿಶೀಟ್ ರದ್ದು ಪಡಿಸಲಾಗಿತ್ತು. ಆನಂತರ ಎರಡು ಅವಧಿಗೆ ಸುಬ್ರಹ್ಮಣ್ಯ ಗ್ರಾಪಂ ಅಧ್ಯಕ್ಷನಾಗಿದ್ದೇನೆ. ನನ್ನ ರಾಜಕೀಯ ವಿರೋಧಿಗಳು ಮತ್ತು ವ್ಯಾವಹಾರಿಕ ವಿರೋಧಿಗಳು ಷಡ್ಯಂತ್ರ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಮಾಡಿರುವ ಅವ್ಯವಹಾರ ಹೊರಗೆಳೆಯುತ್ತೇನೆಂಬ ಭಯದಲ್ಲಿ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದು ಒಳ್ಳೆಯ ಬೆಳವಣಿಗೆ ಅಲ್ಲ – ಉಸ್ತುವಾರಿ

ಇದೇ ವಿಚಾರದಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಾನು ಯಾರಿಗೂ ಶಿಫಾರಸು ಪತ್ರ ನೀಡಿಲ್ಲ. ದೇವಸ್ಥಾನ ಕಮಿಟಿಗೆ ಚುನಾವಣೆ ಮಾಡಿ ಆಯ್ಕೆ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಇದರ ಬಗ್ಗೆ ಮುಜರಾಯಿ ಇಲಾಖೆ ಸಚಿವರ ಜೊತೆ ಮಾತನಾಡುತ್ತೇನೆ. ಚುನಾವಣೆ ಮೂಲಕ ಮಾಡಿದ್ದನ್ನು ನಿಯಮ ಪ್ರಕಾರ ಬದಲಿಸಲು ಆಗಲ್ಲ. ಮೂರು ವರ್ಷ ಅಧಿಕಾರಾವಧಿ ಇರುತ್ತೆ, ಅದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article