
ಬೀಜಿಂಗ್ :ಸಫಾರಿಗೆ ಹೊರಟಿದ್ದ ಜೋಡಿಗಳ ನಡುವೆ ಜಗಳ; ಗಂಡನ ಜತೆ ಜಗಳವಾಡಿ ಕಾರಿನಿಂದಿಳಿದ ಪತ್ನಿ ಹುಲಿಯ ಬಲೆಗೆ! ಮಗಳನ್ನು ಕಾಪಾಡಿದ ತಾಯಿ ಹುಲಿಗೆ ಬಲಿ.!!

ಬೀಜಿಂಗ್: ಅರಣ್ಯದ ನಡುವೆ ಹಾದು ಹೋಗುವ ರಸ್ತೆಯಲ್ಲಿ ಸಾಗುವಾಗ ಬಲು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಂತಹ ರಸ್ತೆಯಲ್ಲಿ ಸಾಗುವಾಗ ಒಂದೊಂದು ಸಲ ವನ್ಯಜೀವಿಗಳು ಎದುರಾಗುತ್ತವೆ. ಪರಿಣಾಮ, ಕೆಲ ವನ್ಯಜೀವಿಗಳು ವಾಹನಗಳಡಿಯಲ್ಲಿ ಬಿದ್ದು ಜೀವ ಕಳೆದುಕೊಂಡರೆ, ಇನ್ನೊಂದಷ್ಟು ಸಂದರ್ಭದಲ್ಲಿ ಇದೇ ಜೀವಿಗಳು ಮನುಷ್ಯರ ಪ್ರಾಣಕ್ಕೂ ಕುತ್ತು ತರುತ್ತವೆ. ಇದಕ್ಕೆ ಸಾಕ್ಷಿಯಾದ ಸಾಕಷ್ಟು ಘಟನೆಗಳು ಕಾಣಸಿಗುತ್ತವೆ. ಸದ್ಯ ಅಂತಹದ್ದೇ ಒಂದು ದೃಶ್ಯ ವೈರಲ್ ಆಗುತ್ತಿದೆ.
ಸಫಾರಿಗೆ ಸ್ವಂತ ಕಾರಿನಲ್ಲಿ ಕುಟುಂಬ ಹೋಗುವ ಸಮಯದಲ್ಲಿ, ಗಂಡನ ಜೊತೆ ಯಾವುದೋ ಕಾರಣಕ್ಕೆ ಜಗಳವಾಡಿದ್ದಾಳೆ ಪತ್ನಿ. ಆಕೆ ಕಾರಿನ ಹಿಂದುಗಡೆ ಕುಳಿತಿದಿದ್ದಳು. ಅದೇ ಕೋಪದಲ್ಲಿ ತಾವು ಇರುವುದು ಅಭಯಾರಣ್ಯದಲ್ಲಿ ಎನ್ನುವುದನ್ನೂ ಮರೆತು, ಕಾರಿನಿಂದ ಇಳಿದು ಗಂಡನ ಜೊತೆ ಕಿತ್ತಾಡಲು ಹೋಗಿದ್ದಾಳೆ. ಅದೇ ಸಮಯದಲ್ಲಿ ಹುಲಿಯೊಂದು ಬಂದು ಮಹಿಳೆಯನ್ನು ಎಳೆದೊಯ್ದಿದೆ.
ಆ ಹೊತ್ತಿಗೆ ಮಹಿಳೆಯ ತಾಯಿ, ಗಂಡ, ಮಗ ಎಲ್ಲರೂ ಗಾಬರಿಯಿಂದ ಕಾರಿನಿಂದ ಹೊರಕ್ಕೆ ಬರುವುದನ್ನು ಅಲ್ಲಿರುವ ಸಿಸಿಟಿವಿಯಲ್ಲಿ ನೋಡಬಹುದಾಗಿದೆ. ಸಾವು ಮಹಿಳೆಗೆ ಸಮೀಪಿಸಿರಲಿಲ್ಲ, ಆದರೆ ಆಕೆಯ ತಾಯಿಯ ಸಾವು ಕಾದುಕುಳಿತಿತ್ತು. ಮಗಳನ್ನು ಉಳಿಸಿಕೊಳ್ಳಲು ತಾಯಿ ಆ ಹುಲಿಯನ್ನು ತನ್ನ ಪ್ರಾಣವನ್ನು ಪಣಕ್ಕಿಟ್ಟು ಓಡಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅದಾಗಲೇ ಹುಲಿ ಸುಮಾರು ದೂರ ಮಗಳನ್ನು ಎಳೆದೊಯ್ದಿತ್ತು. ಮಗಳನ್ನು ಕಾಪಾಡುವಲ್ಲಿ ತಾಯಿ ಯಶಸ್ವಿಯಾದಳು. ಆದರೆ ಅದೇ ಸಂದರ್ಭದಲ್ಲಿ ಅಲ್ಲಿದ್ದ ಮತ್ತೊಂದು ಹುಲಿ ತಾಯಿಯ ಮೇಲೆರಗಿ ಆಕೆಯನ್ನು ಕೊಂದುಹಾಕಿದೆ. ಮಗಳ ಪ್ರಾಣ ಉಳಿಸಿದ ತಾಯಿ ಕೊನೆಯುಸಿರೆಳೆದಿದ್ದಾಳೆ.
ಈ ಘಟನೆ ನಡೆದಿರುವುದು 2016ರಲ್ಲಿ ಎನ್ನಲಾಗಿದೆ. ಚೀನಾದ ಬೀಜಿಂಗ್ನಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಬಡಾಲಿಂಗ್ ವನ್ಯಜೀವಿ ಪಾರ್ಕ್ನಲ್ಲಿ ಘಟನೆ ನಡೆದಿದೆ.