ಹಾಸನ: ಪ್ರತ್ಯೇಕ ಪ್ರಕರಣ ; ಹಾಸನ ಜಿಲ್ಲೆಯಲ್ಲಿ ಹದಿಹರೆಯದ ಯುವಕ, ಯುವತಿ ಹೃದಯಾಘಾತದಿಂದ ಸಾವು, ಸ್ನಾನಕ್ಕೆ ಹೋಗಿದ್ದ ಹುಡುಗಿ ಕುಸಿದು ಬಿದ್ದು ಮೃತ್ಯು.!!

ಹಾಸನ : ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಹಾಸನ ಜಿಲ್ಲೆಯ ಇಬ್ಬರು ಹದಿಹರೆಯದ ಯುವಕ ಮತ್ತು ಯುವತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದ್ದು ಅಚ್ಚರಿ ಮೂಡಿಸಿದೆ.
ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿ ಸಂಧ್ಯಾ (19) ಮತ್ತು ಅರಕಲಗೂಡು ತಾಲ್ಲೂಕಿನ ಕಾಡನೂರು ಗ್ರಾಮದ ನಿವಾಸಿ ಅಭಿಷೇಕ್ (19) ಮೃತ ದುರ್ದೈವಿಗಳು.
ಸಂಧ್ಯಾ ವೆಂಕಟೇಶ್- ಪೂರ್ಣಿಮಾ ದಂಪತಿಯ ಪುತ್ರಿಯಾಗಿದ್ದು ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು. ಸ್ನಾನಕ್ಕಾಗಿ ಬಾತ್‌ರೂಂಗೆ ತೆರಳಿದ್ದ ವೇಳೆ ಸಂಧ್ಯಾ ಕುಸಿದು ಬಿದ್ದಿದ್ದು ಕೆಲ ಹೊತ್ತಿನ ಬಳಿಕ ಬಾತ್‌ರೂಂ ಬಾಗಿಲು ಒಡೆದು ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಸಂಧ್ಯಾ ಕೆಲವ ವರ್ಷಗಳಿಂದ ಬಿಪಿ ಮತ್ತು ಶುಗರ್‌ನಿಂದ ಬಳಲುತ್ತಿದ್ದಳು.
ಮತ್ತೊಂದು ಪ್ರಕರಣದಲ್ಲಿ ಅಭಿಷೇಕ್ ಎನ್ನುವ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಅರಕಲಗೂಡು ತಾಲ್ಲೂಕಿನ, ಕಾಡನೂರು ಗ್ರಾಮದ ಅನಸೂಯ - ರಾಮಕೃಷ್ಣ ದಂಪತಿ ಪುತ್ರನಾಗಿದ್ದು ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಒಂದೇ ದಿನ ಎರಡು ಕುಟುಂಬಗಳಲ್ಲಿ ಶಾಕ್ ಆಗಿದ್ದು ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.