ವಿಜಯಪುರ :ಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ, ಗಾಂಧಿ ಹುಟ್ಟಿಸಿರುವ ಕೂಸೇ ಪಾಕಿಸ್ತಾನ ; ಮತ್ತೆ ನಾಲಿಗೆ ಹರಿಬಿಟ್ಟ ಯತ್ನಾಳ್, ಕಾಂಗ್ರೆಸ್ ಆಕ್ರೋಶ, ಬಿತ್ತು FIR !

ವಿಜಯಪುರ: ಮಹಾತ್ಮ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ; ಪಾಕಿಸ್ತಾನದ ರಾಷ್ಟ್ರಪಿತ...ಮಹಾತ್ಮ ಗಾಂಧಿ ಹುಟ್ಟಿಸಿರುವ ಕೂಸೇ ಪಾಕಿಸ್ತಾನ. ಮುಸ್ಲಿಂರಿಗಾಗಿ ಪಾಕಿಸ್ತಾನ ಕೊಟ್ಟಿದ್ದಾರೆ...' ಎಂದೆಲ್ಲಾ ಮಾತನಾಡಿರುವ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೇಲೆ ಎಫ್‌ಐಆರ್ ದಾಖಲಾಗಿದೆ.
ಮೇ 12 ರಂದು ಆದರ್ಶ ನಗರದ ಬಸವೇಶ್ವರ ದೇವಸ್ಥಾನ ಕಾಮಗಾರಿಯ ಭೂಮಿ ಪೂಜೆ ಸಂದರ್ಭದಲ್ಲಿ ಶಾಸಕ ಯತ್ನಾಳ ಮಾತನಾಡುತ್ತಾ ಮಹಾತ್ಮ ಗಾಂಧಿಯವರನ್ನು ಅವಹೇಳನ ಮಾಡಿದ್ದಾರೆ. ಆಧಾರ ರಹಿತ ಆರೋಪಗಳನ್ನು ಮಾಡಿ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಯತ್ನಾಳ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನಗರದ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಕರಣ ದಾಖಲಿಸಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಯವರನ್ನು ಏಕವಚನದಲ್ಲಿ ಸಂಬೋಧಿಸಿದ್ದಲ್ಲದೇ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ; ಪಾಕಿಸ್ತಾನದ ರಾಷ್ಟ್ರಪಿತ ಎಂದು ಆಧಾರ ರಹಿತ ಆರೋಪ ಮಾಡಿದ್ದಾರೆ. ಬಸನಗೌಡ ಪಾಟೀಲ ತನ್ನ ಹಳೆಯ ಚಾಳಿಯಂತೆ ಸಮಾಜ ಒಡೆಯುವ ಉದ್ದೇಶದಿಂದ ಸಮಾಜದಲ್ಲಿ ದಂಗೆ ಎಬ್ಬಿಸುವ ಉದ್ದೇಸದಿಂದ ಜಾತಿ-ಜಾತಿಯಲ್ಲಿ ವೈಮನಸ್ಸು ಹಾಗೂ ಅಶಾಂತಿ ಹುಟ್ಟಿಸುವ ಉದ್ದೇಶದಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿಯಾಗಿ ಅವಾಚ್ಯ ಶಬ್ದಗಳನ್ನು ಬಳಸಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದ್ದಾರೆ.
ಗಾಂಧೀಜಿ ಭಾರತದ ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವದಲ್ಲಿ ಅಹಿಂಸೆ ಪ್ರತೀಕ ಎಂದು ಖ್ಯಾತರು. ಇದಕ್ಕೆ 2001 ರಲ್ಲಿ ಯುನೈಟೆಡ್ ನೇಷನ್ ವತಿಯಿಂದ ಪ್ರತಿವರ್ಷ 2 ನೇ ಅಕ್ಟೋಬರ್ ಗಾಂಧೀಜಿ ಹುಟ್ಟಿದ ದಿನವನ್ನು ವಿಶ್ವ ಅಹಿಂಸಾ ದಿನಾಚರಣೆ ಎಂದು ಘೋಷಿಸಿರುವುದೇ ಸಾಕ್ಷಿ. ಇಂತಹ ವ್ಯಕ್ತಿತ್ವದ ವಿರುದ್ಧ ಹಗುರವಾಗಿ ಮಾತನಾಡಿದ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.