ಹಾಸನ :ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ ಶವವಾಗಿ ಪತ್ತೆ, ಕೊಲೆ ಶಂಕೆ.

ಹಾಸನ: ಕೊಡಗು ಭೂಕುಸಿತ ಅವಲೋಕನಕ್ಕೆಂದು ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ಸಂಪತ್ ಕುಮಾರ್ ಮೃತಪಟ್ಟ ವ್ಯಕ್ತಿ. 2022ರಲ್ಲಿ ಸಿದ್ದರಾಮಯ್ಯ ಅವರು ಕೊಡಗು ಭೂಕುಸಿತ ಅವಲೋಕನಕ್ಕೆಂದು ಭೇಟಿ ನೀಡಿದ್ದಾಗ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಸಂಪತ್ ಕುಮಾರ್ ಎಂಬಾತ ಮೊಟ್ಟೆ ಎಸೆದಿದ್ದ ಪ್ರಕರಣ ನಡೆದಿತ್ತು.
ಈ ಪ್ರಕರಣದ ಆರೋಪಿ ಎನ್ನಲಾದ ಸಂಪತ್ ಕುಮಾರ್‌ನ ಶವ ಈಗ ಹಾಸನದಲ್ಲಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಏಪ್ರಿಲ್ 9ರಂದು ಕೊಡಗಿನ ಕುಶಾಲನಗರದಿಂದ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಬಂದಿದ್ದ. ಏ.10ರಂದು ಸಂಪತ್ ಕುಮಾರ್ ತೆಗೆದುಕೊಂಡು ಹೋಗಿದ್ದ ಕಾರು ಹಾಸನ ಜಿಲ್ಲೆಯ ಸಕಲೇಶಪುರದ ಕಲ್ಲಹಳ್ಳಿ ಬಳಿ ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆಗಳು ಇದ್ದವು. ಆದರೆ ಸಂಪತ್ ಸುಳಿವು ಸಿಕ್ಕಿರಲಿಲ್ಲ. ಕುಶಾಲನಗರ ಠಾಣೆಯಲ್ಲಿ ಸಂಪತ್ ಕುಮಾರ್ ನಾಪತ್ತೆ ಕೇಸ್ ದಾಖಲಾಗಿತ್ತು.
ಇತ್ತ ಕಾರು ಪತ್ತೆಯಾದ ಬಗ್ಗೆ ಸ್ಥಳೀಯರು ಯಸಳೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಆದರೆ ಈಗ ಸಂಪತ್ ಕುಮಾರ್ ಮೃತದೇಹ ಕಲ್ಲಹಳ್ಳಿ ಬಳಿ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಬಳಿಕ ಶವವನ್ನು ಕಾರಿನಲ್ಲಿ ತಂದು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.