ಬೆಂಗಳೂರು : ಸಿಗರೇಟ್ ವಿಚಾರಕ್ಕೆ ಶುರುವಾದ ಗಲಾಟೆ; ಕಾರು ಗುದ್ದಿಸಿ ಸಾಫ್ಟ್‌ವೇರ್ ಉದ್ಯಮಿಯನ್ನು ಕೊಂದ ಕಟುಕ; ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು.
ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಶುರುವಾದ ಗಲಾಟೆಯಲ್ಲಿ ಕಾರು ಗುದ್ದಿಸಿ ಸಾಫ್ಟ್‌ವೇರ್ ಉದ್ಯೋಗಿಯನ್ನು ಹತ್ಯೆಗೈದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂಜಯ್ ಎಂಬುವರನ್ನು ಕೊಲೆಗೈದ ಆರೋಪದ ಮೇಲೆ ಪ್ರತೀಕ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಮೇ 10ರಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಕನಕಪುರ ರಸ್ತೆಯ ವಸಂತಪುರ ಕ್ರಾಸ್ನಲ್ಲಿ ಘಟನೆ ನಡೆದಿತ್ತು.
ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದ ಸಂಜಯ್ ಹಾಗೂ ಕಾರ್ತಿಕ್ ರಾತ್ರಿ ಪಾಳಿಯಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು. ಮೇ 10ರಂದು ಬೆಳಗಿನ ಜಾವ ತಮ್ಮ ಮನೆಯಿಂದ ಟೀ ಕುಡಿಯಲು ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಅದೇ ರಸ್ತೆಯಲ್ಲಿ ಪತ್ನಿಯೊಂದಿಗೆ ಕಾರಿನಲ್ಲಿ ಬಂದ ಪ್ರತೀಕ್, ಕಾರಿನಿಂದಿಳಿಯದೆ ಸಿಗರೇಟ್ ತಂದುಕೊಡುವಂತೆ ಸಂಜಯ್‌ಗೆ ಹೇಳಿದ್ದ. ಇದರಿಂದ ಕೋಪಗೊಂಡ ಸಂಜಯ್ ಮತ್ತು ಕಾರ್ತಿಕ್, ಪ್ರತೀಕ್‌ನೊಂದಿಗೆ ವಾಗ್ವಾದ ಮಾಡಿದ್ದರು. ಗಲಾಟೆ ಜೋರಾದಾಗ ಕಾರಿನಲ್ಲಿದ್ದ ಪ್ರತೀಕ್ ಪತ್ನಿ, ಹಾಗೂ ಅಂಗಡಿಯವರು ಜಗಳ ಬಿಡಿಸಿ ಕಳುಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಸಂಜಯ್ ಹಾಗೂ ಕಾರ್ತಿಕ್ ಬೈಕ್‌ನಲ್ಲಿ ಮುಂದೆ ಹೋಗುವಾಗ ಪ್ರತೀಕ್ ವೇಗವಾಗಿ ಬಂದು ಕಾರು ಗುದ್ದಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಿಣಾಮ ಬೈಕ್ನಲ್ಲಿದ್ದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜಯ್ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರಂಭದಲ್ಲಿ ಅಪಘಾತ ಪ್ರಕರಣವೆಂದುಕೊಂಡಿದ್ದ ಪೊಲೀಸರು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬಯಲಿಗೆ ಬಂದಿದೆ.
ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರತೀಕ್‌ನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ .ಬಿ. ಜಗಲಾಸರ್ ತಿಳಿಸಿದ್ದಾರೆ.