ಭಟ್ಕಳ: ಆಸ್ತಿಗಾಗಿ ನಾಲ್ವರ ಭೀಕರ ಕೊಲೆ ಪ್ರಕರಣ; ಅಪರಾಧಿ ಮಗನಿಗೆ ಮರಣದಂಡನೆ, ತಂದೆಗೆ ಜೀವಾವಧಿ ಶಿಕ್ಷೆ.
ಕಾರವಾರ: ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿದ ಅಪರಾಧಿಗಳ ಪೈಕಿ ಓರ್ವನಿಗೆ ಮರಣದಂಡನೆ ಹಾಗೂ ಆತನ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯಕುಮಾರ್ ಆದೇಶ ನೀಡಿದ್ದಾರೆ.
ಅಪರಾಧಿ ಹಾಡುವಳ್ಳಿಯ ವಿನಯ ಶ್ರೀಧರ್ ಭಟ್‌ಗೆ ಮರಣ ದಂಡನೆ ಹಾಗೂ ಆತನ ತಂದೆ ಶ್ರೀಧರ್ ಜನಾರ್ಧನ ಭಟ್‌ಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಮತ್ತೊಬ್ಬ ಆರೋಪಿ ವಿದ್ಯಾ ಶ್ರೀಧರ್ ಭಟ್ ಅವರನ್ನು ಸಾಕ್ಷಾಧಾರಗಳ ಕೊರತೆಯಿಂದ ಕೈಬಿಡಲಾಗಿದೆ.
ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ 2023ರಲ್ಲಿ ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಮಗ ರಾಘವೇಂದ್ರ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಎನ್ನುವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಅದೃಷ್ಟವಶಾತ್ ರಾಘವೇಂದ್ರ-ಕುಸುಮಾ ದಂಪತಿಯ ಮಕ್ಕಳು ಈ ವೇಳೆ ಬಚಾವ್ ಆಗಿತ್ತು. ಈ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಅಂದಿನ ಪೊಲೀಸ್ ನಿರೀಕ್ಷರಾಗಿದ್ದ ಚಂದನ್ ಗೋಪಾಲ್ ಅವರು ಶ್ರೀಧರ್ ಜನಾರ್ಧನ ಭಟ್, ವಿನಯ ಶ್ರೀಧರ್ ಭಟ್ ಹಾಗೂ ವಿದ್ಯಾ ಶ್ರೀಧರ್ ಭಟ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರತ್ಯಕ್ಷ ಸಾಕ್ಷಿ ಹಾಗೂ ಮರಣೋತ್ತರ ಪರೀಕ್ಷೆ ಸೇರಿದಂತೆ ಇನ್ನಿತರ ಸಾಕ್ಷ್ಯಗಳನ್ನು ಪರಿಗಣಿಸಿ, ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಒಂದನೇ ಅಪರಾಧಿ ಶ್ರೀಧರ್ ಭಟ್‌ಗೆ ಜೀವಾವಧಿ ಶಿಕ್ಷೆ ಹಾಗೂ ಆತನ ಮಗ ವಿನಯ ಶ್ರೀಧರ್ ಭಟ್‌ಗೆ ಮರಣದಂಡನೆ ವಿಧಿಸಿ ಆದೇಶ ನೀಡಿದೆ. ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೊಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.
ಏನಿದು ಆಸ್ತಿ ವಿವಾದ: ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಶ್ರೀಧರ್ ಭಟ್ ಮಗಳಾದ ವಿದ್ಯಾ ಶೀಧರ್ ಭಟ್ಳನ್ನು ಭಟ್ಕಳ ತಾಲೂಕಿನ ಹಾಡವಳ್ಳಿಯ ಶಂಭು ಭಟ್ (ಕೊಲೆಯಾದ) ಅವರ ಹಿರಿಯ ಮಗ ಶ್ರೀಧರ್ ಶಂಭು ಭಟ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಶ್ರೀಧರ್ ಶಂಭು ಭಟ್ ಕಿಡ್ನಿ ತೊಂದರೆಯಿಂದ ಮೃತಪಟ್ಟಿದ್ದರು. ಬಳಿಕ ವಿದ್ಯಾ ಭಟ್ ತನ್ನ ಮಾವ ಶಂಭು ಭಟ್ ಬಳಿ ಆಸ್ತಿಯಲ್ಲಿ ಪಾಲು ಕೇಳಿದ್ದರು.
ಆದರೆ, ಈ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಪೊಲೀಸ್ ಪ್ರಕರಣ ಕೂಡ ದಾಖಲಿಸಿದ್ದರು. ಶಂಭು ಭಟ್ 1.9 ಎಕರೆ ತೋಟವನ್ನು ವಿದ್ಯಾ ಭಟ್‌ಗೆ ನೀಡಿದ್ದರೂ ಗಲಾಟೆ ಮಾತ್ರ ಮುಂದುವರೆದಿತ್ತು. ವಿದ್ಯಾಗೆ ನೀಡಿದ್ದ ತೋಟವನ್ನು ಆಕೆಯ ಸಹೋದರ, ಇದೀಗ ಮರಣ ದಂಡನೆಗೆ ಗುರಿಯಾದ ವಿನಯ್ ಭಟ್ ನೋಡಿಕೊಳ್ಳುತ್ತಿದ್ದ.
2023ರ ಫೆಬ್ರವರಿ 24ರ ಮಧ್ಯಾಹ್ನ ತಂದೆ ಶ್ರೀಧರ್ ಭಟ್ ಜೊತೆ ತೋಟಕ್ಕೆ ಆಗಮಿಸಿದ ವೇಳೆ ಮತ್ತೆ ಗಲಾಟೆ ನಡೆದಿತ್ತು. ಈ ಜಗಳ ತಾರಕಕ್ಕೇರಿ ರಾಘವೇಂದ್ರ ಭಟ್, ಅವರ ಪತ್ನಿ ಕುಸುಮಾ ಭಟ್ ಹಾಗೂ ಶಂಭು ಭಟ್ ಅವರನ್ನು ವಿನಯ್ ಭಟ್ ಕೊಚ್ಚಿ ಕೊಲೆ ಮಾಡಿದ್ದ. ಈತನ ತಂದೆ ಶ್ರೀಧರ್ ಭಟ್ ಶಂಭು ಭಟ್ಟರ ಪತ್ನಿ ಮಹಾದೇವಿಯನ್ನು ಕತ್ತಿಯಿಂದ ಕೊಚ್ಚಿ ಹತ್ಯೆಗೈದಿರುವ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ತ್ವರಿತ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದೆ ಎಂದು ಸಂತ್ರಸ್ತರ ಪರವಾದ ಮಂಡಿಸಿದ ಸರ್ಕಾರಿ ಅಭಿಯೊಜಕಿ ತನುಜಾ ಹೊಸಪಟ್ಟಣ ಮಾಹಿತಿ ನೀಡಿದರು.
"ನಮ್ಮ ಕುಟುಂಬದವರನ್ನು ಕೊಚ್ಚಿ ಕೊಲೆ ಮಾಡಿದ್ದ ಅಪರಾಧಿಗಳಿಗೆ ಮರಣ ದಂಡನೆ ನೀಡಿರುವುದು, ನಮಗಾದ ಅನ್ಯಾಯಕ್ಕೆ ಸಿಕ್ಕ ಜಯ. ನಮ್ಮ ತಂದೆ, ತಾಯಿ, ಅಣ್ಣ, ಅತ್ತಿಗೆಯನ್ನು ಇವರು ಬರ್ಬರವಾಗಿ ಹತ್ಯೆ ಮಾಡಿದ್ದರು. ಇನ್ನೊಮ್ಮೆ ಯಾರೂ ಕೂಡ ಇಂತಹ ತಪ್ಪು ಮಾಡದಂತೆ ಎಚ್ಚರಿಕೆಯಾಗಿ ಈ ತೀರ್ಪು ಬಂದಿರುವುದು ಸ್ವಾಗತಾರ್ಹ" ಎಂದು ಮೃತ ಶಂಭು ಭಟ್ ಮಗಳು ಜಯ ಭಟ್ ಸಂತಸ ವ್ಯಕ್ತಪಡಿಸಿದರು.