ಮಂಗಳೂರು :ಮುಸ್ಲಿಂ ಯುವಕನ ಕೊಲೆಗೆ ಆಕ್ರೋಶ ; ಹಳೆ ಕೇಸಿನಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಬಂಧಿಸಿದ ಪೊಲೀಸರು..!!
ಮಂಗಳೂರು : ಬಂಟ್ವಾಳದಲ್ಲಿ ಯುವಕನ ಕೊಲೆ ಹಿನ್ನೆಲೆ ಮುಸ್ಲಿಂ ಸಂಘಟನೆಗಳು ಹಾಗೂ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು, ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಿಲ್ಲ ಯಾಕೆಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಹಳೆ ಕೇಸಿನ ನೆಪದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆಯ ಹಿನ್ನೆಲೆಯಲ್ಲಿ ಮೇ 1ರಂದು ಎಜೆ ಆಸ್ಪತ್ರೆಯ ಬಳಿ ಜಮಾಯಿಸಿದ್ದ ಕಾರ್ಯಕರ್ತರ ಬೇಡಿಕೆಯಂತೆ, ಶರಣ್ ಪಂಪ್ವೆಲ್ ಮರುದಿನ ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಮಾಡುವಂತೆ ಕರೆ ಕೊಟ್ಟಿದ್ದರು. ಅದರಂತೆ, ಮರುದಿನ ಈ ಹೇಳಿಕೆಯಿಂದ ಪ್ರೇರಣೆ ಪಡೆದ ಕಾರ್ಯಕರ್ತರು ಬಸ್ಸಿಗೆ ಕಲ್ಲು ತೂರಿದ್ದಲ್ಲದೆ, ಕೆಲವು ಕಡೆ ಮುಸ್ಲಿಂ ಯುವಕರಿಗೆ ಚೂರಿ ಇರಿತ ಮಾಡಿದ್ದರು. ಅಹಿತಕರ ಘಟನೆಗಳಿಗೆ ಶರಣ್ ಪಂಪ್ವೆಲ್ ಬಂದ್ ಕರೆ ಮತ್ತು ಸುಹಾಸ್ ಶೆಟ್ಟಿಯನ್ನು ಪಿಎಫ್ಐನ ಜಿಹಾದಿ ಇಸ್ಲಾಮಿ ಭಯೋತ್ಪಾದಕರು ಮಾಡಿದ್ದಾರೆಂದು ಉದ್ರೇಕಿಸಿದ್ದು ಕಾರಣವೆಂದು ಕದ್ರಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.
ಕದ್ರಿ ಠಾಣೆಯಲ್ಲಿ ಬಿಎನ್ ಎಸ್ ಸೆಕ್ಷನ್ 49, 196(1), 324(2), 324(4), 324(5), 353(2) ಪ್ರಕಾರ ಕೇಸು ದಾಖಲಾಗಿತ್ತು. ಪ್ರಕರಣ ಸಂಬಂಧಿಸಿ ದಾಖಲೆಗಳನ್ನು ಸಂಗ್ರಹಿಸಿ, ವಿಚಾರಣೆಗೆ ಹಾಜರಾಗಲು ಎರಡು ಬಾರಿ ನೋಟೀಸ್ ನೀಡಲಾಗಿತ್ತು. ವಿಚಾರಣೆಗೆ ಬಾರದೆ ತನಿಖೆಗೂ ಸಹಕಾರ ನೀಡದೇ ಇದ್ದ ಶರಣ್ ಪಂಪ್ವೆಲ್ ಅವರನ್ನು ಮೇ 27ರಂದು ಬಂಧನ ಮಾಡಲಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಇತ್ತ ಮುಸ್ಲಿಂ ಯುವಕನ ಕೊಲೆ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೊಲೀಸರ ವಿರುದ್ಧ ತಿರುಗಿದೆ. ಇದೇ ವೇಳೆ, ಅಬ್ದುಲ್ ರಹೀಂ ಕೊಲೆ ಘಟನೆಯನ್ನು ಖಂಡಿಸಿರುವ ಸಚಿವ ದಿನೇಶ್ ಗುಂಡೂರಾವ್, ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದಾರೆ.