ಬೆಂಗಳೂರು:ಪ್ರೇತಾತ್ಮ ಓಡಿಸಿ ಮದುವೆಯಾಗುವಂತೆ ಮಾಡುವುದಾಗಿ ಮಹಿಳಾ ಪೊಲೀಸ್‌ಗೆ ವಂಚನೆ: ಜ್ಯೋತಿಷಿ ಬಂಧನ..!!

ಬೆಂಗಳೂರು: ಪ್ರೇತಾತ್ಮ ಬಿಡಿಸಿ, ವಿವಾಹ ಯೋಗ ಕೂಡಿ ಬರುವ ಹಾಗೆ ಮಾಡುತ್ತೇನೆ. ಅದಕ್ಕೆ ವಿಶೇಷ ಪೂಜೆ ಮಾಡಿಸಬೇಕಾಗುತ್ತದೆ ಎಂದು ನಂಬಿಸಿ ಮಹಿಳಾ ಕಾನ್ಸ್‌ಟೆಬಲ್‌ವೊಬ್ಬರ ಬಳಿ 5.19 ಲಕ್ಷ ರೂ.ಪಡೆದು ವಂಚಿಸಿದ್ದ ಕಲಬುರಗಿಯ ಜ್ಯೋತಿಷಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಹೇಮಂತ್‌ಭಟ್ ಬಂಧಿತ ಆರೋಪಿ. ಈತನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಹೇಮಂತ್ ಭಟ್ ಬೆಂಗಳೂರಿನಲ್ಲಿ ನೆಲೆಸಿರುವ 33 ವರ್ಷದ ಸಂತ್ರಸ್ತೆ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ನೇಹಿತೆಯೊಬ್ಬರ ಮುಖಾಂತರ ಹೇಮಂತ್ ಭಟ್ ಪರಿಚಿತನಾಗಿದ್ದ. ನಿಮ್ಮ ದೇಹದಲ್ಲಿ 15 ಆತ್ಮಗಳಿವೆ. ಅವುಗಳನ್ನು ದೇಹದಿಂದ ಓಡಿಸಬೇಕಾದರೆ ವಿಶೇಷ ಪೂಜೆ ಮಾಡಿಸಬೇಕು ಎಂದಿದ್ದ. ಜತೆಗೆ, ವಿಶೇಷ ಪೂಜೆ ಮಾಡಲು ಪ್ರತ್ಯೇಕ ಕೊಠಡಿ ಇರಬೇಕು. ವಿಶೇಷ ಪೂಜೆ ಹಾಗೂ ವಶೀಕರಣ ಮಾಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆ ಬಗೆಹರಿಯಲಿದೆ. ಜತೆಗೆ, ವಿವಾಹ ಯೋಗ ಕೂಡಿ ಬರಲಿದೆ ಎಂದು ಹೇಮಂತ್ ಭಟ್ ಭರವಸೆ ನೀಡಿದ್ದ.
ಹೇಮಂತ್ ಸೂಚನೆಯಂತೆ ಸಂತ್ರಸ್ತೆ ಹಂತ ಹಂತವಾಗಿ 5.19 ಲಕ್ಷ ರೂ. ನೀಡಿದ್ದರು.
ಸಮಸ್ಯೆಯಿಂದ ಮುಕ್ತಿ ಹೊಂದುವ ಸಲುವಾಗಿ ಸಂತ್ರಸ್ತೆ ಹೇಮಂತ್ ಭಟ್‌ನನ್ನು ನಗರಕ್ಕೆ ಕರೆಸಿದ್ದಳು. ಹೋಟೆಲ್‌ವೊಂದರಲ್ಲಿ ಕೊಠಡಿ ಬುಕ್ ಮಾಡಿ ತನ್ನಿಬ್ಬರು ಸ್ನೇಹಿತೆಯರ ಜತೆ ತೆರಳಿದ್ದರು. ಕೊಠಡಿಯಲ್ಲಿ ಧೂಪ ಹಾಕಿ ನಿಂಬೆ ಹಣ್ಣು ಕತ್ತರಿಸಿ ಪೂಜೆ ನೆರವೇರಿಸಿದ್ದ ಹೇಮಂತ್, ಇನ್ನು ಮುಂದೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದಿದ್ದ.
ಈ ನಡುವೆ, ಪೂಜೆ ನೋಡಿದ್ದ ಸಂತ್ರಸ್ತೆ ಸ್ನೇಹಿತೆಯರಿಬ್ಬರು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಹೇಮಂತ್ ಬಳಿ ಕೇಳಿಕೊಂಡಿದ್ದರು. ಅದೇ ದಿನ ಅವರಿಬ್ಬರೂ ಹೇಮಂತ್ ಸೂಚನೆ ಮೇರೆಗೆ 1.30 ಲಕ್ಷ ರೂ. ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.
ಹಲವು ತಿಂಗಳು ಉರುಳಿದರೂ ಸಮಸ್ಯೆಗಳಿಗೆ ಪರಿಹಾರ ಸಿಗದ ಸಂತ್ರಸ್ತೆ, ಮಹಿಳಾ ಕಾನ್ಸ್‌ಟೆಬಲ್, ಹೇಮಂತ್‌ಗೆ ದೂರವಾಣಿ ಮುಖಾಂತರ ಕರೆ ಮಾಡಿ ವಿಚಾರ ತಿಳಿಸಿದರೂ ಹಲವು ಸಬೂಬು ಹೇಳುತ್ತಿದ್ದ. ಕಡೆಗೆ ದೂರವಾಣಿ ಕರೆ ಸ್ವೀಕರಿಸುತ್ತಿರಲಿಲ್ಲ. ಅಂತಿಮವಾಗಿ ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತೆಯರು ಇತ್ತೀಚೆಗೆ ದೂರು ದಾಖಲಿಸಿದ್ದರು.
ಆರೋಪಿ ಹೇಮಂತ್ ಭಟ್ ಸಹಚರರಾದ ವಿಜಯ್ ಹಾಗೂ ಭಾಗೇಶ್ ಎಂಬುವರ ವಿರುದ್ಧವೂ ವಂಚನೆ ಕೇಸ್ ದಾಖಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.