ನವದೆಹಲಿ :ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ್ಧಿ ; ಗಡಿಭಾಗದಲ್ಲಿ ಮತ್ತೆ ಗುಂಡಿನ ಸದ್ದು, ನಗ್ರೋಟಾದಲ್ಲಿ ಉಗ್ರರ ದಾಳಿ, ಪಂಜಾಬ್, ರಾಜಸ್ಥಾನ ಗಡಿಯಲ್ಲಿ ಡ್ರೋಣ್ ಹಾರಾಟ, ಕದನ ವಿರಾಮಕ್ಕಿಲ್ಲ ಕಿಮ್ಮತ್ತು! ಮತ್ತೆ ಪಾಕಿಸ್ತಾನಕ್ಕೆ ಉತ್ತೇಜನ ಕೊಟ್ಟ ಚೀನಾ..!

ನವದೆಹಲಿ: ಪಾಕಿಸ್ತಾನ ಮತ್ತು ಅಲ್ಲಿನ ಭಯೋತ್ಪಾದಕರು ತಮ್ಮ ನರಿ ಬುದ್ಧಿ ಬಿಟ್ಟಿಲ್ಲ. ಭಾರತ ಕದನ ವಿರಾಮ ಘೋಷಣೆ ಮಾಡಿದ್ದರೂ ಕೆಲವೇ ಗಂಟೆಗಳಲ್ಲಿ ಗಡಿಭಾಗದ ಉದ್ದಕ್ಕೂ ಗುಂಡಿನ ಸದ್ದು ಕೇಳಿಬಂದಿದೆ. ಡ್ರೋಣ್ ಹಾರಾಟವೂ ಅಲ್ಲಲ್ಲಿ ಆಗತೊಡಗಿದೆ. ಜಮ್ಮು ಕಾಶ್ಮೀರದ ಉರಿ, ಪೂಂಛ್, ರಜೌರಿ, ಪಂಜಾಬ್ ರಾಜ್ಯದ ಗಡಿಜಿಲ್ಲೆ ಗುರುದಾಸ್ ಪುರದಲ್ಲಿ ಡ್ರೋಣ್ ಹಾರಾಟ ಆಗಿದೆ. ಗಡಿಭಾಗದಲ್ಲಿ ಸೇನಾ ಪಡೆ ತೀವ್ರ ನಿಗಾ ಇಟ್ಟಿದ್ದು, ದಾಳಿಯಾದ್ರೆ ಪ್ರತಿದಾಳಿಗೆ ಸಿದ್ಧವಾಗಿದೆ.
ಕೆಲವು ದಿನಗಳಿಂದ ತೀವ್ರ ಶೆಲ್ ದಾಳಿಗೆ ಸಾಕ್ಷಿಯಾಗಿದ್ದ ಕಾಶ್ಮೀರದ ಗಡಿಜಿಲ್ಲೆಗಳಲ್ಲಿ ದಾಳಿಗಳು ನಿಂತಿದ್ದರೂ, ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಗುಂಡಿನ ಸದ್ದು ಕೇಳುತ್ತಿದೆ. ಗಡಿಭಾಗದ ಜಿಲ್ಲೆಗಳು ಸತತ ನಾಲ್ಕನೇ ದಿನವೂ ಕತ್ತಲಲ್ಲೇ ಮುಳುಗಿವೆ. ಇದೇ ವೇಳೆ, ಪಂಜಾಬಿನ ಫಿರೋಜ್ ಪುರದಲ್ಲಿ ಏರ್ ಡಿಫೆನ್ಸ್ ಸಿಸ್ಟಮ್ ಸೈರನ್ ಮೊಳಗಿಸಿದೆ. ರಾಡಾರಿನಲ್ಲಿ ಶತ್ರುಗಳ ಹಾರಾಟ ಕಂಡುಬಂದರೆ ಮಾತ್ರ ಸೈರನ್ ಮೊಳಗುತ್ತದೆ.

ಪಂಜಾಬಿನ ಗುರುದಾಸ್ ಪುರ, ಫಿರೋಜ್ ಪುರ, ಪಠಾಣ್ ಕೋಟ್, ಹೊಶಿಯಾರ್ ಪುರ, ಜಲಂಧರ್ ಮತ್ತು ಫರೀದ್ ಕೋಟ್ ನಲ್ಲಿ ಡ್ರೋಣ್ ಹಾರಾಟ ಕಣ್ಣಿಗೆ ಕಂಡಿದೆ. ಪಾಕಿಸ್ತಾನಕ್ಕೆ ಹೊಂದಿಕೊಂಡ ರಾಜಸ್ಥಾನ ಗಡಿಭಾಗದಲ್ಲಿಯೂ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿದ್ದಾರೆ. ಗುಂಡಿನ ದಾಳಿ ಆಗಿರುವುದರಿಂದ ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ವಿದ್ಯುತ್ ದೀಪಗಳನ್ನು ಉರಿಸದಂತೆ ಎಲ್ಲ ಲೈಟ್ ಆಫ್ ಮಾಡಲು ಜಿಲ್ಲಾಡಳಿತಗಳು ಸೂಚನೆ ಸಾರ್ವಜನಿಕರಿಗೆ ಸೂಚನೆ ನೀಡಿವೆ. ಗುಜರಾತಿನ ಕಛ್ ಪ್ರದೇಶದಲ್ಲೂ ಡ್ರೋಣ್ ಹಾರಾಟ ಕಾಣಿಸಿಕೊಂಡಿದೆ. ಅಮೃತಸರ ಜಿಲ್ಲೆಯಲ್ಲೂ ಏರ್ ಡಿಫೆನ್ಸ್ ಸೈರನ್ ಮೊಳಗಿಸಿದೆ. ಜಮ್ಮು ಕಾಶ್ಮೀರದ ನಗ್ರೋಟಾ ಪ್ರದೇಶದಲ್ಲಿ ತೀವ್ರ ಗುಂಡಿನ ಚಕಮಕಿಯಾಗಿದ್ದು, ಉಗ್ರರು ಗಡಿಭಾಗದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆನ್ನುವ ಮಾಹಿತಿ ಇದೆ.
ಇದೇ ವೇಳೆ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದು, ಕಾಶ್ಮೀರದಲ್ಲಿ ಗುಂಡಿನ ಸದ್ದು ಕೇಳುತ್ತಿದ್ದು, ಎಲ್ಲಿದೆ ಕದನ ವಿರಾಮ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ, ಚೀನಾ ವಿದೇಶಾಂಗ ಮಂತ್ರಿ ವಾಂಗ್ ಯೀ ಪಾಕಿಸ್ತಾನದ ವಿದೇಶ ಸಚಿವ ಇಷಾಕ್ ದಾರ್ ಜೊತೆಗೆ ಫೋನ್ ಸಂಭಾಷಣೆ ಮಾಡಿದ ವೇಳೆ, ದೇಶದ ಸ್ವಾತಂತ್ರ್ಯ, ಸಮಗ್ರತೆ, ಗಡಿಭಾಗ ಉಳಿಸಿಕೊಳ್ಳುವ ದೃಷ್ಟಿಯಿಂದ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ವಾಗ್ದಾನ ನೀಡಿದ್ದಾರೆ. ಮೇ 10ರ ಸಂಜೆ 5 ಗಂಟೆಯಿಂದ ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿತ್ತು.