ಕೇರಳ :ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ ; ಇರುಮುಡಿ ಹೊತ್ತು ಸಾಗಲಿದ್ದಾರೆ ದೇಶದ ಪ್ರಥಮ ಪ್ರಜೆ ! ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ರಾಷ್ಟ್ರಪತಿ ಶಬರಿಮಲೆಗೆ ಬರುತ್ತಿರುವುದು ಇದೇ ಮೊದಲು..!!
ದ್ರೌಪದಿ ಮುರ್ಮು ಅವರು ಸಂಪ್ರದಾಯದಂತೆ, ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದೆ. ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಶಬರಿಮಲೆ ಬೆಟ್ಟ ಏರುವ ಬಯಕೆ ವ್ಯಕ್ತಪಡಿಸಿದ್ದರು. ಪ್ರಧಾನಿ ಭದ್ರತಾ ಇಲಾಖೆ ಇಂದಿರಾ ಗಾಂಧಿ ನೇರವಾಗಿ ಸನ್ನಿಧಾನದಲ್ಲಿ ಇಳಿಯಲು ಹೆಲಿಪ್ಯಾಡ್ ನಿರ್ಮಿಸಲು ಯೋಜಿಸಿತ್ತು. ಆದರೆ ಆ ರೀತಿ ಬರುವುದಕ್ಕೆ ವಿರೋಧ ಕೇಳಿಬಂದಿದ್ದರಿಂದ ಅಂತಹ ಆಲೋಚನೆ ಕೈಬಿಡಲಾಗಿತ್ತು.
ಈ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿಗೆ ರಾಷ್ಟ್ರಪತಿ ಭವನದಿಂದ ಸೂಚನೆ ಬಂದಿದೆ. ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಯನ್ನೂ ನೀಡಲಾಗಿದೆ. ಅದರ ಪ್ರಕಾರ ದ್ರೌಪದಿ ಮುರ್ಮು ಅವರು ಮೇ 18 ರಂದು ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಜಯಂತಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮೇ 19 ರಂದು ಪಂಪಾಗೆ ಪ್ರಯಾಣ ಬೆಳೆಸಲಿದ್ದಾರೆ.
ದೇವಾಲಯದ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ ಪಂಪಾ ಬೇಸ್ ಕ್ಯಾಂಪ್‌ಗೆ ತೆರಳುತ್ತಾರೆ. ಯಾತ್ರಿಕರಂತೆ 4.25 ಕಿಮೀ ಎತ್ತರದ ಹಾದಿಯಲ್ಲಿ ನಡೆದು ಸಾಗುತ್ತಾರೆ. ಇವರೊಂದಿಗೆ ಎಸ್‌ಪಿಜಿ ಯೋಧರು ಕೂಡ ಭದ್ರತೆಯಲ್ಲಿ ಕಡಿದಾದ ರಸ್ತೆಯಲ್ಲಿ ನಡೆದು ಸಾಗಲಿದ್ದಾರೆ. ಪ್ರವಾಸ ಸಂದರ್ಭದಲ್ಲಿ ಮುರ್ಮು ಅವರು ಕೊಟ್ಟಾಯಂ ಮತ್ತು ಕುಮಾರಕೋಮ್ ನಲ್ಲಿ ಉಳಿದುಕೊಳ್ಳುವ ನಿರೀಕ್ಷೆಯಿದೆ. ರಾಷ್ಟ್ರಪತಿಯ ಭದ್ರತೆ ಮತ್ತು ವಸತಿಗಾಗಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.