ಅಮೇರಿಕಾ :140 ಕೋಟಿ ಸದಸ್ಯರ ಕ್ಯಾಥೋಲಿಕ್ ಚರ್ಚ್‌ಗೆ ಹೊಸ ನಾಯಕನ ಆಯ್ಕೆ ; ನೂತನ ಪೋಪ್ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌ ನೇಮಕ.

ಅಮೇರಿಕಾ :140 ಕೋಟಿ ಸದಸ್ಯರ ಕ್ಯಾಥೋಲಿಕ್ ಚರ್ಚ್‌ಗೆ ಹೊಸ ನಾಯಕನ ಆಯ್ಕೆ ; ನೂತನ ಪೋಪ್ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌ ನೇಮಕ.

ವ್ಯಾಟಿಕನ್‌: ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್‌ ಹೊಸ ಪೋಪ್ ಆಗಿ ಆಯ್ಕೆಯಾಗಿದ್ದಾರೆ. ಇವರು ತಮ್ಮ ನೂತನ ಹೆಸರಾಗಿ ಪೋಪ್ ಲಿಯೋ XIV ಅನ್ನು ಸ್ವೀಕರಿಸಿದ್ದಾರೆ. ಅಂದರೆ ಇವರು ಇದೇ ಹೆಸರಿನಿಂದ ಇನ್ನು ಮುಂದೆ ಗುರುತಿಸಿಕೊಳ್ಳಲಿದ್ದಾರೆ.

ಗುರುವಾರ ನಡೆದ ಅನಿರೀಕ್ಷಿತ ಆಯ್ಕೆಯಲ್ಲಿ ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಅವರು ಕ್ಯಾಥೋಲಿಕ್ ಚರ್ಚ್‌ನ ಹೊಸ ಮುಖ್ಯಸ್ಥರಾಗಿ ಆಯ್ಕೆಯಾದರು. ಇವರು ಅಮೆರಿಕದ ಮೊದಲ ಪೋಪ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಸ್ಟೀನ್ ಚಾಪೆಲ್‌ನ ಮೇಲಿರುವ ಚಿಮಣಿಯಿಂದ ಬಿಳಿ ಹೊಗೆ ಹೊರಬಂದ ಸುಮಾರು 70 ನಿಮಿಷಗಳ ನಂತರ ಪೋಪ್ ಲಿಯೋ, ಸೇಂಟ್ ಪೀಟರ್ಸ್ ಬೆಸಿಲಿಕಾದ ಕೇಂದ್ರ ಬಾಲ್ಕನಿಯಲ್ಲಿ ಕಾಣಿಸಿಕೊಂಡರು. ಇದರಲ್ಲಿ ಬಿಳಿ ಹೊಗೆ ಕಾಣಿಸಿಕೊಂಡರೆ ಪೋಪ್‌ ಆಯ್ಕೆ ಅಂತಿಮಗೊಂಡಿದೆ ಎಂದು ಅರ್ಥ. 133 ಕಾರ್ಡಿನಲ್ ಮತದಾರರು 140 ಕೋಟಿ ಸದಸ್ಯರ ಕ್ಯಾಥೋಲಿಕ್ ಚರ್ಚ್‌ಗೆ ಹೊಸ ನಾಯಕನನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಇದು ಸೂಚಿಸಿತ್ತು.

ಫ್ರೆಂಚ್ ಕಾರ್ಡಿನಲ್ ಡೊಮಿನಿಕ್ ಮಾಂಬರ್ಟಿ ಅವರು ಸೇಂಟ್ ಪೀಟರ್ಸ್ ಚೌಕದಲ್ಲಿ ಹೊಸ ಪೋಪ್‌ ಆಯ್ಕೆಯ ಸುದ್ದಿ ಕೇಳಲು ನೆರೆದಿದ್ದ ಹತ್ತಾರು ಸಾವಿರ ಜನರಿಗೆ ಲ್ಯಾಟಿನ್ ಪದಗಳಾದ 'ಹ್ಯಾಬೆಮಸ್ ಪಾಪಮ್' (ನಮಗೆ ಪೋಪ್ ಇದ್ದಾರೆ) ಎಂದು ಹೇಳುವ ಮೂಲಕ ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್‌ ಅವರ ಆಯ್ಕೆಯನ್ನು ಘೋಷಿಸಿದರು.

ಹುಟ್ಟಿದ್ದು ಅಮೆರಿಕ, ಕಾರ್ಯಕ್ಷೇತ್ರ ಪೆರು ;

69 ವರ್ಷ ವಯಸ್ಸಿನ ಮತ್ತು ಮೂಲತಃ ಶಿಕಾಗೋದವರಾದ ಪ್ರಿವೋಸ್ಟ್ ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ಪೆರುವಿನಲ್ಲಿ ಮಿಷನರಿಯಾಗಿ ಕಳೆದಿದ್ದರು. 2023ರಲ್ಲಿ ಅವರು ಕಾರ್ಡಿನಲ್ ಪದವಿಗೆ ಏರಿದ್ದರು. ಅವರು ಕೆಲವೇ ಕೆಲವು ಮಾಧ್ಯಮ ಸಂದರ್ಶನಗಳನ್ನು ನೀಡಿದ್ದು, ಸಾರ್ವಜನಿಕವಾಗಿ ಮಾತನಾಡಿದ್ದು ತೀರಾ ವಿರಳ.

ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಆಗಿದ್ದ ಮತ್ತು 12 ವರ್ಷಗಳ ಕಾಲ ಚರ್ಚ್ ಅನ್ನು ಮುನ್ನಡೆಸಿದ್ದ ಪೋಪ್ ಫ್ರಾನ್ಸಿಸ್ ಅವರ ಕಳೆದ ತಿಂಗಳು ನಿಧನರಾಗಿದ್ದರು. ಅವರ ನಿಧನದ ನಂತರ ಲಿಯೋ 267ನೇ ಕ್ಯಾಥೋಲಿಕ್ ಪೋಪ್ ಆಗಿ ಆಯ್ಕೆಯಾಗಿದ್ದಾರೆ.

ಪೋಪ್‌ ಫ್ರಾನ್ಸಿಸ್ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಮಹಿಳೆಯರ ದೀಕ್ಷೆ ಮತ್ತು ಎಲ್‌ಜಿಬಿಟಿಕ್ಯೂ ಕ್ಯಾಥೋಲಿಕರ ಸೇರ್ಪಡೆಯಂತಹ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡಿದ್ದರು.

ಪೋಪ್‌ ಆಯ್ಕೆಗೂ ಮೊದಲು ಕೆಲವು ಕಾರ್ಡಿನಲ್‌ಗಳು ಪೋಪ್‌ ಫ್ರಾನ್ಸಿಸ್ ಅವರ ಹೆಚ್ಚಿನ ಮುಕ್ತ ಮತ್ತು ಸುಧಾರಣೆಯ ಹಾದಿಯನ್ನು ಮುಂದುವರಿಸುವವರ ಆಯ್ಕೆಗೆ ಕರೆ ನೀಡಿದ್ದರು. ಇದರ ನಡುವೆ ರಾಬರ್ಟ್ ಫ್ರಾನ್ಸಿಸ್ ಪ್ರಿವೋಸ್ಟ್‌ ಅವರ ಆಯ್ಕೆ ನಡೆದಿದೆ.

Ads on article

Advertise in articles 1

advertising articles 2

Advertise under the article