ಕಾರವಾರ: ಹೈ ಎಲರ್ಟ್ ; ಸಮುದ್ರದಲ್ಲಿ 12 ನಾಟಿಕಲ್ ಮೈಲು ದೂರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚನೆ, ಚೀನಾ- ಪಾಕ್ ಸಿಬಂದಿ ಇದ್ದರೆ ವಿದೇಶಿ ಹಡಗುಗಳಿಗೂ ನಿರ್ಬಂಧ !

ಕಾರವಾರ : ಪಾಕಿಸ್ತಾನ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಬೆನ್ನಲ್ಲೇ ರಾಜ್ಯದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಭಾರತದ ಅತಿದೊಡ್ಡ ನೌಕಾನೆಲೆ ಎನಿಸಿರುವ ಕಾರವಾರದ ಕದಂಬ ನೌಕಾನೆಲೆ ಮತ್ತು ಕಾರವಾರ ಬಂದರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಕಾರವಾರದ ಅರಗಾದಲ್ಲಿರುವ ಕದಂಬ ನೌಕಾ ನೆಲೆಯಲ್ಲಿ ಕರಾವಳಿ ಕಾವಲುಪಡೆ, ಭಾರತೀಯ ತಟರಕ್ಷಕ ದಳದಿಂದ ತಪಾಸಣೆ ಹೆಚ್ಚಿಸಲಾಗಿದೆ. ಇದೇ ವೇಳೆ, ಅನ್ಯ ದೇಶದಿಂದ ಬರುವ ಸರಕು ಸಾಗಾಟ ಹಡಗಿನಲ್ಲಿ ಚೀನಾ, ಪಾಕಿಸ್ತಾನ ಸಿಬ್ಬಂದಿಗಳಿದ್ದರೆ ಅಂತಹ ಹಡಗುಗಳಿಗೆ ಬಂದರಿನಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.
ಯಾವುದೇ ದೇಶದ ಹಡಗಿನಲ್ಲಿ ಪಾಕಿಸ್ತಾನ, ಚೀನಾ ಸಿಬ್ಬಂದಿ ಇದ್ದರೆ ಅಂತಹ ಹಡಗುಗಳಿಗೆ ಕಾರವಾರ ಬಂದರಿನಲ್ಲಿ ನಿಲುಗಡೆಗೆ ನಿಷೇಧ ವಿಧಿಸಲಾಗಿದೆ. ಮೀನುಗಾರಿಕಾ ಬಂದರಿಗೆ ಬರುವ ಬೋಟ್, ಹಡಗುಗಳಲ್ಲಿ ಪೊಲೀಸರು ತೀವ್ರ ತಪಾಸಣೆ ಕೈಗೊಂಡಿದ್ದಾರೆ. ಎಲ್ಲ ಮಾದರಿಯ ಮೀನುಗಾರಿಕಾ ಬೋಟ್ ಗಳನ್ನೂ ಅಪರಿಚಿತ ವ್ಯಕ್ತಿಗಳಿದ್ದರೆ ಕರಾವಳಿ ಕಾವಲು ಪಡೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಇದಲ್ಲದೆ, ಸಮುದ್ರದಲ್ಲಿ 12 ನಾಟಿಕಲ್ ಮೈಲ್ ದೂರದಿಂದ ಹೊರಕ್ಕೆ ಹೋಗದಂತೆ ಆಳ ಸಮುದ್ರ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ತೀರದಿಂದ 200 ಕಿಮೀ ದೂರದ ನಂತರ ಅಂತಾರಾಷ್ಟ್ರೀಯ ಮಟ್ಟದ ಜಲಸಂಚಾರ ಇರಲಿದ್ದು ಅಲ್ಲಿ ಪಾಕಿಸ್ತಾನ ಸೇರಿದಂತೆ ಯಾವುದೇ ದೇಶದ ಹಡಗು, ಬೋಟ್ಗಳು ಸಂಚರಿಸಬಹುದು. ಪಾಕಿಗಳ ಕೈಗೆ ಸಿಕ್ಕಿಬಿದ್ದು ಒದ್ದಾಡುವ ಬದಲು ಅಲ್ಲಿ ವರೆಗೆ ಹೋಗುವುದನ್ನು ತಪ್ಪಿಸಿ ಎಂದು ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ಆಳ ಸಮುದ್ರಕ್ಕೆ ಮೀನುಗಾರಿಕೆ ತೆರಳಿದವರು 150- 200 ಕಿಮೀ ಗಡಿರೇಖೆಯ ವರೆಗೂ ಸಂಚಾರ ಮಾಡುತ್ತಾರೆ. ಸದ್ಯಕ್ಕೆ ಪಾಕಿಸ್ತಾನದ ಜೊತೆಗೆ ಸಂಘರ್ಷ ವಾತಾವರಣ ಇರುವುದರಿಂದ ಭಾರತದ ಮೀನುಗಾರರು ಅಲ್ಲಿ ವರೆಗೂ ತೆರಳದಂತೆ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ.