ದಾವಣಗೆರೆ :ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಹೃದಯಘಾತಕ್ಕೆ ಬಲಿ ; ಅಗಲಿಕೆ ನೋವು ತಾಳಲಾರದೆ ಮಕ್ಕಳಿಬ್ಬರ ಕೊಂದು ಗಂಡ ಆತ್ಮಹತ್ಯೆ, ದಾವಣಗೆರೆಯಲ್ಲಿ ದಾರುಣ ಘಟನೆ.

ದಾವಣಗೆರೆ: ವ್ಯಕ್ತಿಯೋರ್ವ ತನ್ನ ಪತ್ನಿಯ ಅಗಲಿಕೆಯ ನೋವಿನಿಂದ ಹೊರಬರಲಾಗದೆ, ತನ್ನಿಬ್ಬರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಉದಯ್ (35), ಮಕ್ಕಳಾದ ಸಿಂಧುಶ್ರೀ (06) ಹಾಗೂ ಶ್ರೀಜಯ್ (04) ಮೃತಪಟ್ಟವರು.
ಎಸ್ಪಿಎಸ್ ನಗರದ ಉದಯ್ ರಾಣೇಬೆನ್ನೂರು ಮೂಲದ ಹೇಮಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಪತ್ನಿ ಹೇಮಾ ಅನಾರೋಗ್ಯಕ್ಕೆ ಒಳಗಾಗಿ 8 ತಿಂಗಳ ಹಿಂದೆ ಸಾವನ್ನಪ್ಪಿದ್ದರು.
ಈ ಬೇಸರದಿಂದ ಹೊರಬರಲಾರದ ಪತಿ ಉದಯ್ ಮಕ್ಕಳನ್ನು ಕರೆದುಕೊಂಡು ಆಗಾಗ ಪತ್ನಿ ಸಮಾಧಿ ಬಳಿ ತೆರಳುತ್ತಿದ್ದರು. ಮನೆಯವರು ಎಷ್ಟೇ ಬುದ್ದಿ ಹೇಳಿದರೂ ಸರಿಹೋಗದ ಉದಯ್ ನಿನ್ನೆ ಕೆಲಸಕ್ಕೂ ತೆರಳದೆ ಸಂಜೆ ವೇಳೆ ಇಬ್ಬರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಹೋದರ ಹೇಳಿದ್ದೇನು?:
'ನಾನು ಸತ್ತರೆ ಜೊತೆಗೆ ಮಕ್ಕಳನ್ನು ಕರೆತರುವೆ ಎಂದು ಉದಯ್ ಪದೇ ಪದೇ ಎನ್ನುತ್ತಿದ್ದ" ಎಂದು ಆತನ ಸಹೋದರ ಅಶೋಕ್ ತಿಳಿಸಿದ್ದಾರೆ. "ಉದಯ್ ಪತ್ನಿ ಹೇಮಾ ಅನಾರೋಗ್ಯದಿಂದ ಸಾವನಪ್ಪಿದ್ದರು. ಅದೇ ನೆನಪಿನಲ್ಲಿ ಉದಯ್ ಖಿನ್ನತೆಗೆ ಒಳಗಾಗಿದ್ದ. ಈಗ ತನ್ನ ಮಕ್ಕನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದು ದುರಂತ. ಪದೇ ಪದೇ ಮೃತ ಹೆಂಡತಿ ಹೇಮಾ ಸಮಾಧಿ ಬಳಿ ಮಕ್ಕಳನ್ನು ಕರೆದೊಯ್ಯುತ್ತಿದ್ದ. ಅವನಿಗೆ ಬುದ್ಧಿವಾದ ಹೇಳಿದ್ದರೂ ಈ ರೀತಿ ಮಾಡಿಕೊಂಡಿದ್ದಾನೆ" ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಮೃತ ಉದಯ್ ತಾಯಿ ಕಲಾವತಿ ಮಾತನಾಡಿ, "ಹೆಂಡತಿಯ ಸಾವಿನಿಂದ ಬೇಸರಗೊಂಡಿದ್ದ. ರಾತ್ರಿ ಹೇಳದೆ, ಕೇಳದೆ ಎಲ್ಲೋ ಹೋಗಿದ್ದವನನ್ನು ಹುಡುಕಿ ಕರೆತಂದಿದ್ದೆವು. ಬೆಳಗ್ಗೆ ಮಲಗುತ್ತೇನೆ ಎಂದು ಹೇಳಿ ಮಕ್ಕಳೊಂದಿಗೆ ಹೀಗೆ ಮಾಡಿಕೊಂಡಿದ್ದಾನೆ. ಮಕ್ಕಳನ್ನು ನೋಡಿದರೆ ಬಹಳ ಬೇಸರ ಆಗುತ್ತಿದೆ" ಎಂದು ದುಃಖ ವ್ಯಕ್ತಪಡಿಸಿದರು.
ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಉಮಾಪ್ರಶಾಂತ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಪಿ, ''ಮೃತ ಉದಯ್ ತನ್ನ ಹೆಂಡತಿಯು ಮೃತಪಟ್ಟ ಹಿನ್ನೆಲೆಯಲ್ಲಿ ತೀವ್ರ ನೊಂದಿದ್ದರು. ಪತ್ನಿ ಹೇಮಾ 8 ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ಮಕ್ಕಳು ಕೂಡ ತಾಯಿಯ ಬಗ್ಗೆ ಆಗಾಗ್ಗೆ ಕೇಳುತ್ತಿದ್ದರು. ಹೇಮಾರನ್ನು ಪ್ರೀತಿಸಿ ಮದುವೆಯಾಗಿದ್ದ ಉದಯ್, ಪತ್ನಿಯ ಅಗಲಿಕೆಯ ಬೇಸರದಲ್ಲಿದ್ದರು. ಉದಯ್ ತಾಯಿ ಆತನ ಮನೆಗೆ ಹೋಗಿ ನೋಡಿದಾಗ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಗಾಂಧಿನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೊಲೆ ಹಾಗೂ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ'' ಎಂದು ತಿಳಿಸಿದರು.