ಬೆಂಗಳೂರು : ವಕ್ಫ್ ತಿದ್ದುಪಡಿ ಮಸೂದೆಯನ್ನು ಶ್ಲಾಘಿಸಿದ ಮಾಜಿ ಪ್ರಧಾನಿ ದೇವೇಗೌಡ ; ಮುಸ್ಲಿಮರ ಹಕ್ಕು, ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಪ್ರತಿಪಾದನೆ.

ಬೆಂಗಳೂರು : ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಆಗಿರುವುದನ್ನು ಮಾಜಿ ಪ್ರಧಾನಿ, ಹಿರಿಯ ಸಂಸದ ಎಚ್‌ಡಿ ದೇವೇಗೌಡ ಶ್ಲಾಘಿಸಿದ್ದು, ಈ ಮಸೂದೆಯಿಂದ ಯಾವುದೇ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಬಳಿಕ ಎಚ್.ಡಿ ದೇವೇಗೌಡ ಮಾತನಾಡಿದ್ದು ನೂತನ ವಕ್ಫ್ ಮಸೂದೆಯನ್ನು ಬಲವಾಗಿ ಬೆಂಬಲಿಸಿದರು. ಈ ಕಾಯ್ದೆ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ. ಆದರೆ ಆದಾಯ ಮತ್ತು ಆಡಳಿತ ವಿಷಯಗಳಿಗೆ ಕಟ್ಟುನಿಟ್ಟಾಗಿ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದರು.
ವಕ್ಫ್ ಮಂಡಳಿಗಳ ಅಡಿಯಲ್ಲಿರುವ ಆಸ್ತಿಗಳ ಆಡಳಿತವನ್ನು ನಿಯಂತ್ರಿಸುವ ಗುರಿಯನ್ನು ಈ ಕಾಯ್ದೆ ಹೊಂದಿದೆ. ಪ್ರಸ್ತುತ ದೇಶಾದ್ಯಂತ 9.4 ಲಕ್ಷ ಎಕರೆಗಳಷ್ಟು ವಿಸ್ತಾರವಾಗಿರುವ 8.7 ಲಕ್ಷ ಆಸ್ತಿಗಳನ್ನು ಈ ಕಾಯ್ದೆ ನಿಯಂತ್ರಿಸುತ್ತದೆ. 1.2 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮರು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಮಸೂದೆಯು ವಕ್ಫ್ ಆಸ್ತಿಯನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಶ್ರೀಮಂತರಿಂದ ಬಡ ಮುಸ್ಲಿಮರನ್ನು ರಕ್ಷಿಸುತ್ತದೆ. ನ್ಯಾಯದ ಹಿತದೃಷ್ಟಿಯಿಂದ, ನೂತನ ಮಸೂದೆಯನ್ನು ನಮ್ಮ ಸಂವಿಧಾನದ ಮೂಲ ತತ್ವಗಳಿಗೆ ಹೊಂದಿಕೆ ಮಾಡಲಾಗಿದೆ ಎಂದು ದೇವೇಗೌಡರು ಒತ್ತಿ ಹೇಳಿದರು.
ಮುಸ್ಲಿಂ ನಾಗರಿಕರು ಸಹ ಈ ದೇಶದ ಸಮಾನ ನಾಗರಿಕರು. ಅವರ ಹಿತಾಸಕ್ತಿಗಳನ್ನು ಸರ್ಕಾರವು ರಕ್ಷಿಸಬೇಕು ಮತ್ತು ಮಸೂದೆಯು ಅದನ್ನೇ ಮಾಡುತ್ತದೆ. ವಕ್ಫ್ ಆಸ್ತಿಗಳ ಐತಿಹಾಸಿಕ ದುರುಪಯೋಗದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಒಮ್ಮೆ ವಕ್ಫ್ ಆಸ್ತಿ ಎಂದರೆ ಅದು ಶಾಶ್ವತವಾಗಿ ವಕ್ಫ್ ಎಂಬ ಉಲ್ಲಂಘನೆಯನ್ನು ಅವರು ಎತ್ತಿ ತೋರಿಸಿದರು. ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿದ ಆಸ್ತಿಗಳನ್ನು ಪ್ರಬಲ ಮಧ್ಯವರ್ತಿಗಳು, ವಿಶೇಷವಾಗಿ ಕರ್ನಾಟಕದಂತಹ ರಾಜ್ಯಗಳಲ್ಲಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅವರು ಗಮನಸೆಳೆದರು. ಕಳೆದ ದಶಕಗಳಲ್ಲಿ ಸಮೀಕ್ಷೆಗಳ ನಂತರ ಸಮೀಕ್ಷೆಗಳು, ಘಟನೆಗಳ ನಂತರ ಘಟನೆಗಳು ನಮಗೆ ಇದನ್ನು ತಿಳಿಸಿವೆ ಎಂದು ಹೇಳಿದರು.