ಮುಂಬೈ :ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರಡೇ ಗಂಟೆಯಲ್ಲಿ ಹೈಸ್ಪೀಡ್ ರೈಲು ಯಾನ, ಸಾರಿಗೆ ಜಗತ್ತಿನಲ್ಲಿ ಹೊಸ ಕ್ರಾಂತಿ ಮಾಡುತ್ತಾ ಆಧುನಿಕ ತಂತ್ರಜ್ಞಾನ ?

ಮುಂಬೈ : ಭಾರತ ಮತ್ತು ದುಬೈ ನಡುವೆ ಸಮುದ್ರ ಇರುವುದರಿಂದ ಜನರ ಸಂಚಾರಕ್ಕೆ ವಿಮಾನವನ್ನೇ ಆಶ್ರಯಿಸಬೇಕು. ಆದರೆ ಸಮುದ್ರ ಒಳಗಡೆಯೇ ಆಧುನಿಕ ತಂತ್ರಜ್ಞಾನ ಬಳಸಿ ಮುಂಬೈನಿಂದ ನೇರವಾಗಿ ದುಬೈ ನಗರಕ್ಕೆ ರೈಲ್ವೇ ನೆಟ್ವರ್ಕ್ ಅಳವಡಿಸಿದರೆ ಹೇಗಿರಬಹುದು. ಹೀಗೊಂದು ಚಿಂತನೆ ಕೇವಲ ಕಾಲ್ಪನಿಕ ಕತೆಯಾಗಿ ಉಳಿದಿಲ್ಲ. ದುಬೈ ಮತ್ತು ಮುಂಬೈ ನಡುವೆ ಇಂಥದ್ದೊಂದು ರೈಲ್ ನೆಟ್ವರ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದ್ದು, ಜನರ ಗಮನ ಸೆಳೆದಿದೆ.
ಸಮುದ್ರ ತಳದಲ್ಲಿ ಹೈಸ್ಪೀಡ್ ರೈಲ್ ನೆಟ್ವರ್ಕ್ ನಿರ್ಮಿಸಿದರೆ ಮುಂಬೈನಿಂದ ದುಬೈಗೆ ಕೇವಲ 2 ಎರಡು ಗಂಟೆಯಲ್ಲಿ ತಲುಪಬಹುದು ಎನ್ನುವ ಲೆಕ್ಕಾಚಾರ ಇದೆ. ಅಂದರೆ, 600 ರಿಂದ ಒಂದು ಸಾವಿರ ಕಿಮೀನಷ್ಟು ವೇಗದಲ್ಲಿ ರೈಲು ಓಡಿಸಿದರೆ ಎರಡು ಸಾವಿರ ಕಿಮೀ ಅಂತರ ಇರುವ ಎರಡು ನಗರಗಳು ಇನ್ನಷ್ಟು ಹತ್ತಿರವಾಗುವುದಂತೆ. ಈ ಕುರಿತು ಚಿಂತನೆಗಳು ನಡೆದಿದೆಯಾದರೂ, ಯಾವುದೇ ರೀತಿಯ ಅಧಿಕೃತ ಮುದ್ರೆ ಆಡಳಿತದ ಕಡೆಯಿಂದ ಬಿದ್ದಿಲ್ಲ. ಆದರೂ ಸಮುದ್ರದ ಅಡಿಯಲ್ಲಿ ರೈಲು ಹಳಿ ಮಾಡುವುದು, ಅದರಲ್ಲಿ ಹೈಸ್ಪೀಡ್ ರೈಲು ಹೋಗುವ ಕಾಲ್ಪನಿಕ ಚಿತ್ರ ಮತ್ತು ಅದರ ಸುದ್ದಿ ಜನರ ಗಮನ ಸೆಳೆದಿದೆ.




ಸೌದಿ ಅರೇಬಿಯಾದ ಮಸ್ಕತ್ ನಿಂದ ತೊಡಗಿ ಈ ರೈಲು ಯಾನವು ಪಾಕಿಸ್ತಾನದ ಕರಾಚಿ ಮೂಲಕ ಮುಂಬೈ ತಲುಪಲಿದೆ ಎಂದು ಲೆಕ್ಕ ಹಾಕಲಾಗಿದೆ. ಇದು ಸಾಧ್ಯವಾದರೆ ವಿಮಾನ ಯಾನಕ್ಕೆ ಪರ್ಯಾಯವಾಗಿ ರೈಲಿನ ಮೂಲಕ ಜನರು ಮತ್ತು ಸರಕು ಸಾಗಣೆ ಇನ್ನಷ್ಟು ಸುಲಭವಾಗಲಿದೆ. ಅಲ್ಲದೆ, ಉಪ ಖಂಡಗಳ ನಡುವೆ ರೈಲು ಯಾನದ ಸಂಪರ್ಕದ ಮೂಲಕ ಸಾರಿಗೆ ಸಂಚಾರದಲ್ಲಿ ಹೊಸ ಕ್ರಾಂತಿಯಾಗಲಿದೆ. ಅಲ್ಲದೆ, ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ಪ್ರಮುಖವಾಗಿ ಕಚ್ಚಾ ತೈಲ ಮತ್ತು ಭಾರತದಿಂದ ನೀರಿನ ವಿನಿಮಯಕ್ಕೆ ಅನುಕೂಲ ಆಗಲಿದೆ ಎಂಬ ಲೆಕ್ಕಾಚಾರ ಇದೆ.
ಭಾರೀ ವೆಚ್ಚದಾಯಕ ಈ ಯೋಜನೆ
ಸಮುದ್ರದ ಅಡಿಯಲ್ಲಿ ರೈಲು ಸಂಚಾರಕ್ಕಾಗಿ ಸ್ಟೀಲ್ ಅಥವಾ ಗ್ಲಾಸ್ ನಿಂದ ಸುರಂಗ ಮಾದರಿ ನಿರ್ಮಾಣ ಮಾಡಬೇಕಾಗುತ್ತದೆ. ಎರಡು ಸಾವಿರ ಕಿಮೀ ಉದ್ದಕ್ಕೆ ಟನೆಲ್ ನಿರ್ಮಿಸುವುದು ಭಾರೀ ವೆಚ್ಚದಾಯಕ. ಬಿಲಿಯನ್ ಡಾಲರ್ ಲೆಕ್ಕದಲ್ಲಿ ಹಣ ಖರ್ಚಾಗುತ್ತದೆ. ಇದಕ್ಕೆಲ್ಲ ಉಭಯ ರಾಷ್ಟ್ರಗಳ ಕಡೆಯಿಂದ ಹೂಡಿಕೆಯೂ ಮುಖ್ಯವಾಗುತ್ತದೆ. ಸಮುದ್ರ ತಳಭಾಗದಲ್ಲಿ ನೀರಿನ ಒತ್ತಡದ ನಡುವೆ ಹೈಸ್ಪೀಡ್ ರೈಲು ಓಡಿಸುವುದಕ್ಕೆ ಆಧುನಿಕ ಮಾದರಿಯ ತಂತ್ರಜ್ಞಾನವೂ ಬೇಕಾಗುತ್ತದೆ. ಆದರೆ ಮುಂಬೈ- ದುಬೈ ನಡುವೆ ಈ ರೀತಿಯ ಪ್ರಾಜೆಕ್ಟ್ ಸಾಧ್ಯವಾದರೆ ಜಗತ್ತಿನ ಇತರ ಕಡೆಗಳಲ್ಲೂ ಸಮುದ್ರ ತಳದಲ್ಲಿ ರೈಲ್ ನೆಟ್ವರ್ಕ್ ಹೊಸ ಮಾದರಿಯಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಸದ್ಯಕ್ಕೆ ಈ ರೀತಿಯ ಪ್ರಾಜೆಕ್ಟ್ ಕೇವಲ ಕಾಲ್ಪನಿಕ ನೆಲೆಯಲ್ಲಿ ಚರ್ಚೆಯಾಗುತ್ತಿದ್ದು, ಇದರ ಸಾಧ್ಯಾಸಾಧ್ಯತೆಗಳು ಮತ್ತು ಪರಿಸರ ಹಾನಿ ವಿಚಾರಗಳ ಬಗ್ಗೆ ಇನ್ನಷ್ಟೇ ಅಧ್ಯಯನ ಆಗಬೇಕಿದೆ.
ಸದ್ಯಕ್ಕೆ ಈ ರೀತಿಯ ಚರ್ಚೆಗಳು ಆಗುತ್ತಿರುವುದರಿಂದ ಸಮುದ್ರದ ಅಡಿಯಲ್ಲೂ ರೈಲು ಯಾನ ಕೇವಲ ಕಾಲ್ಪನಿಕ ಅಲ್ಲ, ಆಧುನಿಕ ತಾಂತ್ರಿಕತೆಯಲ್ಲಿ ಇದೂ ಸಾಧ್ಯ ಎನ್ನುವ ಆಶಾಕಿರಣವಂತೂ ಮೂಡಿದೆ. ಇಂತಹ ಅಂಡರ್ ವಾಟರ್ ಪ್ರಾಜೆಕ್ಟ್ ಸಾಧ್ಯವಾದರೆ ಏಶ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳ ನಡುವೆ ಸಂಪರ್ಕ ಮತ್ತಷ್ಟು ಹತ್ತಿರವಾಗಲಿದೆ. ಪ್ರವಾಸೋದ್ಯಮ, ಜನರ ಸಂಚಾರವೂ ಸುಲಭವಾಗಲಿದ್ದು ಸಾರಿಗೆ ಜಗತ್ತಿನಲ್ಲಿ ಮನುಷ್ಯ ಹೊಸ ಕ್ರಾಂತಿಯನ್ನು ಮಾಡಿದಂತಾಗುತ್ತದೆ.