ಉಳ್ಳಾಲ :ಸರಕಾರಿ ಆಸ್ಪತ್ರೆಗಳ ಉನ್ನತೀಕರಣದಿಂದ ಆರೋಗ್ಯ ಸೇವೆಯಲ್ಲಿ ಸಮತೋಲನ ಸಾಧ್ಯ ; ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟಿಸಿ ದಿನೇಶ್ ಗುಂಡೂರಾವ್

ಉಳ್ಳಾಲ : ಆರೋಗ್ಯ ಸೇವೆಯಲ್ಲಿ ಖಾಸಗಿ ಆಸ್ಪತ್ರೆಗಳು ಸಾಕಷ್ಟು ಕೊಡುಗೆಗಳನ್ನು ನೀಡಿವೆ. ಆದರೂ ಕೆಲವು ಆಸ್ಪತ್ರೆಗಳಲ್ಲಿ ವಿಪರೀತ ಶುಲ್ಕಗಳನ್ನ ಪೀಕಿಸಿ ಸೇವೆಗಳ ದುರುಪಯೋಗ ಪಡಿಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳ ಉನ್ನತೀಕರಣದಿಂದಲೇ ಆರೋಗ್ಯ ಸೇವೆಗಳಲ್ಲಿ ಸಮತೋಲನ ತರಲು ಸಾಧ್ಯವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು, ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರ್ ಘಟಕ ದ.ಕ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲದ ನಗರ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡಗಳ ಉದ್ಘಾಟನೆ, ಶವಾಗಾರದ ಉದ್ಘಾಟನೆ, ಶವ ಶೀತಲೀಕರಣ ಪೆಟ್ಟಿಗೆ ಹಸ್ತಾಂತರ, ಡಯಾಲಿಸಿಸ್ ಕಟ್ಟಡ ಉದ್ಘಾಟನೆ ಹಾಗೂ ನೂತನ ಪುನಶ್ಚೇತನ ಕೇಂದ್ರ, ಆಯುಷ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.



ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರವು ಇಡೀ ಕರ್ನಾಟಕಕ್ಕೆ ಮಾದರಿಯಾದ ಸುಸಜ್ಜಿತ ಕೇಂದ್ರವಾಗಿದೆ. ಎಲ್ಲಾ ಆರೋಗ್ಯ ಕೇಂದ್ರಗಳು ಈ ರೀತಿಯಲ್ಲೇ ನಿರ್ವಹಣೆ ಮಾಡಿದರೆ ಆರೋಗ್ಯ ಕ್ಷೇತ್ರವು ಮೇಲ್ದರ್ಜೆಗೇರಲು ಸಾಧ್ಯ. ಆರೋಗ್ಯವೇ ಜೀವನದಲ್ಲಿ ಬಲು ಪ್ರಾಮುಖ್ಯ ವಿಚಾರವಾಗಿದೆ. ಉತ್ತಮ ಆರೋಗ್ಯ ಸೇವೆ ನೀಡಲು ಸಿಬ್ಬಂದಿಗಳನ್ನ ಭರ್ತಿ ಮಾಡುವ ಕೆಲಸ ಆಗಬೇಕಿದ್ದು ಈ ಬಗ್ಗೆ ಮುಖ್ಯಮಂತ್ರಿ ಜೊತೆ ಸಭೆ ನಡೆಸಿದ್ದು ಅತೀ ಶೀಘ್ರ ನಿರ್ಧಾರ ಕೈಗೊಳ್ಳಲಿದ್ದೇವೆ. ಉಳ್ಳಾಲ ಭಾಗದಲ್ಲಿ ಯು.ಟಿ.ಖಾದರ್ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದು ಆದಷ್ಟು ಬೇಗನೆ ಈ ಭಾಗಕ್ಕೆ ತಾಲೂಕು ಆಸ್ಪತ್ರೆಯನ್ನ ಮಂಜೂರು ಮಾಡಲಾಗುವುದೆಂದರು.
ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ 2014ರಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ ಉಳ್ಳಾಲದ ಹಂಚಿನ ಛಾವಣಿಯ ಈ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿ ಸುಸಜ್ಜಿತ ಮಾದರಿ ಕಟ್ಟಡ ನಿರ್ಮಾಣ ಮಾಡುವಂತಾಯಿತು. ಅತ್ಯುತ್ತಮ ಲ್ಯಾಬ್ ಸಹಿತ ಸಮುದಾಯ ಆರೋಗ್ಯ ಕೇಂದ್ರ ಹೇಗಿರಬೇಕೋ ಅದಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಒದಗಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಉಚಿತವಾಗಿ ಡಯಾಲಿಸಿಸ್ ಘಟಕ ಆರಂಭಿಸಿದ್ದು ರೋಗಿಗಳಿಗೆ ಚಿಕಿತ್ಸೆಯ ಪ್ರೇರಣೆಗಾಗಿ ಮನರಂಜನೆ ಒದಗಿಸಲು ಟೆಲಿ ವಿಷನ್ ಗಳನ್ನು ಅಳವಡಿಸಲಾಗಿದೆ. ಸ್ಥಿತಿವಂತರು ಸೇರಿ ಡಯಾಲಿಸಿಸ್ ಕೇಂದ್ರಕ್ಕೆ ಬರುವ ರೋಗಿಗಳಿಗೆ ತಿಂಗಳಿಗೆ ಒಂದು ಆಹಾರ ಕಿಟ್ ಒದಗಿಸುವ ವ್ಯವಸ್ಥೆ ಮಾಡಬೇಕೆಂದರು. ಇದು ಸಮುದಾಯ ಆರೋಗ್ಯ ಕೇಂದ್ರವೇ ಹೊರತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಲ್ಲ ಎಂಬುದನ್ನ ಜನರು ಮನಗಾಣಬೇಕು. ಸದುದ್ದೇಶದಿಂದ ಯಾವುದೇ ಉತ್ತಮ ಯೋಜನೆ ಹಾಕಿಕೊಂಡಾಗ ಅದಕ್ಕೆ ದೇವರ ಸಹಾಕಾರ ಸಿಕ್ಕೇ ಸಿಗುತ್ತದೆ. ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪುನಶ್ಚೇತನ ಕೇಂದ್ರ ನಿರ್ಮಾಣಕ್ಕೆ ಬಿಪಿಸಿಎಲ್ ಸಂಸ್ಥೆಯ ರಾಜ್ಯ ಮುಖ್ಯಸ್ಥೆ ನೀರಾ ಸಿಂಗ್ ಅವರು 1.59 ಕೋಟಿ ರೂ. ಅನುದಾನ ನೀಡಿರುವುದೇ ಅದಕ್ಕೆ ಸ್ಪಷ್ಟ ನಿದರ್ಶನವೆಂದರು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ದೊಡ್ಡ ಅನುದಾನ ನೀಡಿದ ಬಿಪಿಸಿಎಲ್ ಸಂಸ್ಥೆ
ಮುಖ್ಯಸ್ಥೆ ನೀರಾ ಸಿಂಗ್, ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ವಹಿಸಿರುವ ಯೇನೆಪೋಯ ವಿವಿ ಕುಲಪತಿ ಡಾ.ಯು.ಅಬ್ದುಲ್ಲಾ ಕುಂಞಿ, ಶವಾಗಾರಕ್ಕೆ ಶವ ಶೀತಲೀಕರಣ ಪೆಟ್ಟಿಗೆ ನೀಡಿದ ಮಾರುತಿ ಜನಸೇವಾ ಸಂಘವನ್ನ ಸನ್ಮಾನಿಸಲಾಯಿತು.