ಹಿರಿಯಡ್ಕ :ಭೀಕರ ಗಾಳಿಗೆ ದೇವಸ್ಥಾನದ ಧ್ವಜಸ್ತಂಭ ಧರೆಗೆ : ಮೂರ್ತಿಯನ್ನು ಅಪ್ಪಿ ಹಿಡಿದು ಕುಳಿತ ಅರ್ಚಕರು.!!
Wednesday, April 16, 2025

ಹಿರಿಯಡಕ: ಪುರಾತನ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವ ಸನ್ನಿಧಿಯಲ್ಲಿ ಸೋಮವಾರ ಮಧ್ಯಾಹ್ನ ಭೀಕರ ಗಾಳಿಗೆ, ದೇವಳದ ಧ್ವಜಸ್ತಂಭವು ಬುಡಸಮೇತ ಧರೆಗುರುಳಿದ ಘಟನೆ ನಡೆದಿದೆ. ಗಾಳಿ ಮಳೆಗೆ ದೇವರ ರಥವೇ ಬೀಳುವ ಪರಿಸ್ಥಿತಿಯಲ್ಲಿದ್ದಾಗ ಅರ್ಚಕರು ದೇವರ ಬಲಿಮೂರ್ತಿಯನ್ನು ಅಪ್ಪಿ ಹಿಡಿದು ರಥದಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದರು
ಧ್ವಜ ಸಹಿತ ಸ್ತಂಭ ಬಿದ್ದ ಬಳಿಕ ತಾತ್ಕಾಲಿಕವಾಗಿ ಅಡಿಕೆ ಮರವನ್ನು ಧ್ವಜಸ್ತಂಭವಾಗಿ ನೆಟ್ಟು, ಧಾರ್ಮಿಕ ವಿಧಿಗಳನ್ನು ನಡೆಸಿ ದೇವರಿಗೆ ಕಲಶ ಪ್ರೋಕ್ಷಣೆಯನ್ನು ಮಾಡಿ ರಥೋತ್ಸವ ವನ್ನು ನೆರವೇರಿಸಲಾಯಿತು. ಮುರಿದು ಬಿದ್ದ ಧ್ವಜಸ್ತಂಭಕ್ಕೆ ಸುಮಾರು ನೂರು ವರ್ಷ ಆಗಿರ ಬಹುದು ಎಂದು ಅಂದಾಜಿಸಲಾಗಿದೆ.
ಮಧ್ಯಾಹ್ನ ರಥಾರೋಹಣ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಇದ್ದುದರಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಆದರೆ ಯಾವುದೇ ಹಾನಿಯಾಗಲಿಲ್ಲ. ಅಲ್ಲದೆ ಯಾವುದೇ ಕಟ್ಟಡಕ್ಕೂ ಹಾನಿಯಾಗದೆ ಒಂದು ಮೂಲೆಗೆ ಧ್ವಜಸ್ತಂಭ ಬಿದ್ದಿರುವುದು ವಿಶೇಷ ಎಂಬ ಮಾತು ಕೇಳಿಬಂದಿದೆ.