ನವದೆಹಲಿ :ಪಹಲ್ಗಾಮ್ ಉಗ್ರರ ದಾಳಿ ; ಪಾಕಿಸ್ತಾನಕ್ಕೆ ಸಿಂಧು ನದಿಯ ಹನಿ ನೀರನ್ನೂ ಕೊಡದಿರಲು ಶಪಥ, ಜಲಸಂಪನ್ಮೂಲ ಅಧಿಕಾರಿಗಳ ಸಭೆಯಲ್ಲಿ ಬಹುಸ್ತರ ಕಾರ್ಯಸೂಚಿ.

ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಭಾರತ ಸರ್ಕಾರ ನಿರ್ಬಂಧಗಳನ್ನು ಹೇರತೊಡಗಿದ್ದು, ನೆರೆ ರಾಷ್ಟ್ರಕ್ಕೆ ಒಂದು ಹನಿ ನೀರನ್ನೂ ಹರಿಸದಿರಲು ಶಪಥ ಮಾಡಿದೆ. ಗೃಹ ಸಚಿವ ಅಮಿತ್ ಶಾ ಅವರು ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ ಮತ್ತು ಸಚಿವಾಲಯದ ಅಧಿಕಾರಿಗಳೊಂದಿಗೆ 1960ರ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸುವ ಕುರಿತಾಗಿ ಸಭೆ ನಡೆಸಿದರು.
ಸಭೆಯಲ್ಲಿ ಸಿಂಧೂ ನದಿಯಿಂದ ಒಂದು ಹನಿ ನೀರನ್ನೂ ಪಾಕಿಸ್ತಾನಕ್ಕೆ ಹರಿಯದಂತೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಜಲಸಂಪನ್ಮೂಲ ಮತ್ತು ವಿದ್ಯುತ್ ಸಚಿವಾಲಯಗಳ ಅಧಿಕಾರಿಗಳಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಮೂರು ಅಂಶಗಳ ಕಾರ್ಯತಂತ್ರ ಸಿದ್ಧಪಡಿಸಲು ಸೂಚಿಸಲಾಗಿದೆ.
ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪಾಟೀಲ್ ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿರುವ ಅಧಿಕಾರಿಗಳು, ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಉಗ್ರರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿಯವರು ಹಲವಾರು ನಿರ್ದೇಶನಗಳನ್ನು ನೀಡಿದ್ದು, ಅವುಗಳನ್ನು ಅನುಸರಿಸಲು ಈ ಸಭೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ನಿರ್ದೇಶನಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಮಿತ್ ಶಾ ಹಲವಾರು ಸಲಹೆಗಳನ್ನು ನೀಡಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್.ಪಾಟಿಲ್ ಅವರು ಹೇಳಿದ್ದಾರೆ. ಸಿಂಧೂ ನದಿಯ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ತಲುಪದಂತೆ ನೋಡಿಕೊಳ್ಳಲು ಸಭೆಯಲ್ಲಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಸರ್ಕಾರವು ಅಲ್ಪಾವಧಿಯ, ಮಧ್ಯಮ ಅವಧಿಯ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಇದರಿಂದಾಗಿ ಒಂದು ಹನಿ ನೀರು ಕೂಡ ಪಾಕಿಸ್ತಾನಕ್ಕೆ ಹೋಗದು ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ನೀರು ಹರಿಯದಂತೆ ತಡೆಯಲು ನದಿ ನೀರನ್ನು ಬೇರೆಡೆ ತಿರುಗಿಸಲು ಮತ್ತು ನದಿಗಳ ಹೂಳು ತೆಗೆಯುವಂತಹ ತಕ್ಷಣದ ಕ್ರಮಗಳನ್ನು ಮಾಡಲಾಗುವುದು. ಸಿಂಧೂ ನದಿ ನೀರಿನ ಒಪ್ಪಂದದ ಬಗ್ಗೆ ಮೋದಿ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರದಲ್ಲಿ ಸಂಪೂರ್ಣ ರಾಷ್ಟ್ರೀಯ ಹಿತಾಸಕ್ತಿ ಇದೆ. ಸಿಂಧೂ ನದಿಯ ನೀರಿನ ಒಂದು ಹನಿಯು ಪಾಕಿಸ್ತಾನವನ್ನು ತಲುಪುವುದಿಲ್ಲವೆಂದು ನಾವು ಖಾತ್ರಿಪಡಿಸುತ್ತೇವೆಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ 1960ರಲ್ಲಿ ಸಹಿ ಹಾಕಲಾಗಿತ್ತು. ಸುದೀರ್ಘ 9 ವರ್ಷಗಳ ಮಾತುಕತೆ ಬಳಿಕ, ಉಭಯ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ವಿಶ್ವ ಬ್ಯಾಂಕ್ ಸಿಂಧು ನದಿ ಒಪ್ಪಂದಕ್ಕೆ ಸಾಕ್ಷಿಯಾಗಿದೆ. ಸಿಂಧು ನದಿ ಒಪ್ಪಂದವು ಭಾರತ-ಪಾಕಿಸ್ತಾನ ದೇಶಗಳು ಈ ನದಿ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ನಿಯಮಗಳನ್ನು ರೂಪಿಸುತ್ತದೆ. ಗಡಿಯಾಚೆಗಿನ ನದಿಗಳ ನೀರಿನ ಬಳಕೆಯ ಕುರಿತು ಎರಡೂ ಕಡೆಯವರ ನಡುವೆ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕಾಗಿ ಒಂದು ಕಾರ್ಯ ವಿಧಾನವನ್ನು ರೂಪಿಸುತ್ತದೆ.