ಕೊಲ್ಲಮ್ :ಕಾರ್ಮಿಕರಿಂದ ಪಾಣಿಪುರಿ ತಿನ್ನುತ್ತೀರಾ..? ಗಂಭೀರ ಆರೋಗ್ಯ ತೊಂದರೆಗೀಡಾಗುತ್ತೀರಿ ಎಚ್ಚರ ! ತಿಂಡಿಗಳನ್ನು ಪ್ಲಾಸ್ಟಿಕ್ ಮಿಕ್ಸ್ ಎಣ್ಣೆಯಲ್ಲಿ ಕಾಯಿಸೋದು ಪತ್ತೆ.

ಕೊಲ್ಲಂ: ವಲಸೆ ಕಾರ್ಮಿಕರು ರಸ್ತೆ ಬದಿಗಳಲ್ಲಿ ಸ್ನ್ಯಾಕ್ಸ್ ತಯಾರಿಸಿ ಮಾರಾಟ ಮಾಡುವುದನ್ನು ನೋಡಿದ್ದೀರಿ. ಅವರು ಮಾಡೋ ಪಾಣಿಪುರಿ, ಮಸಾಲೆ ಪುರಿಗಳನ್ನು ಬಾಯಿ ರುಚಿಗಾಗಿ ಜನರು ಮುಗಿಬಿದ್ದು ಸೇವಿಸುವುದನ್ನೂ ನೋಡಿರುತ್ತೀರಿ. ಕೇರಳದ ಕೊಲ್ಲಂನಲ್ಲಿ ಇದೇ ರೀತಿಯ ವಲಸೆ ಕಾರ್ಮಿಕರು ಪಾಣಿ ಪುರಿಯನ್ನು ಫ್ರೈ ಮಾಡಲು ಏನು ಮಾಡಿದ್ದಾರೆ ಗೊತ್ತಾ.. ನೀವು ಈ ಸ್ಟೋರಿ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳುತ್ತೀರಿ.
ಕೊಲ್ಲಂ ನಗರದ ಆಹಾರ ಇಲಾಖೆ ಮತ್ತು ಆರೋಗ್ಯ ಅಧಿಕಾರಿಗಳು ಎಸ್ ಎಂಪಿ ಪ್ಯಾಲೇಸ್ ರಸ್ತೆಯಲ್ಲಿ ಸ್ನ್ಯಾಕ್ಸ್ ತಯಾರಿಸುವ ಉತ್ತರ ಭಾರತ ಮೂಲಕ ವಲಸಿಗರು ಬಳಸುತ್ತಿದ್ದ ಎಣ್ಣೆಯನ್ನು, ಅವರು ಮಾಡುತ್ತಿದ್ದ ಫ್ರೈಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಎಲ್ಲೆಡೆ ಪಾಮ್ ಆಯಿಲನ್ನು ಬಳಸಿ ತಿಂಡಿಗಳನ್ನು ಕರಿಯುತ್ತಿದ್ದರೆ, ಇವರು ಆ ಎಣ್ಣೆ ಕುದಿಯುವಾಗ ಪಾಮ್ ಆಯಿಲ್ ತಂದಿದ್ದ ದಪ್ಪಗಿನ ಪ್ಲಾಸ್ಟಿಕ್ ಪ್ಯಾಕೆಟನ್ನೂ ಕಾಯಲು ಹಾಕುತ್ತಾರೆ. ಈ ರೀತಿಯ ಎಣ್ಣೆಯಲ್ಲಿ ತಿಂಡಿಗಳನ್ನು ಕಾಯಿಸಿದರೆ ಹೆಚ್ಚು ಪಳ ಪಳ ಅನ್ನುತ್ತದಂತೆ. ಅಷ್ಟೇ ಅಲ್ಲ, ಅಡುಗೆ ಎಣ್ಣೆಯೂ ಬೇಗ ದಪ್ಪಗಾಗೋದಿಲ್ವಂತೆ. ಹೀಗಾಗಿ ವಲಸೆ ಕಾರ್ಮಿಕರು ತಿಂಡಿಗಳನ್ನು ಕಾಯಿಸುವಾಗ ಪ್ಲಾಸ್ಟಿಕ್ಕನ್ನೂ ಕುದಿಯುವ ಎಣ್ಣೆಗೆ ಹಾಕುತ್ತಿದ್ದುದನ್ನು ಕೊಲ್ಲಂ ಆರೋಗ್ಯಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ಅಧಿಕಾರಿಗಳ ತಪಾಸಣೆ ವೇಳೆ ಅರ್ಧ ಮೆಲ್ಟ್ ಆಗಿದ್ದ ದಪ್ಪಗಿನ ಪ್ಲಾಸ್ಟಿಕ್ ಕವರ್ ಗಳು ಸ್ಥಳದಲ್ಲಿ ಪತ್ತೆಯಾಗಿದ್ದು, ಇದನ್ನು ಮಲಯಾಳ ಮನೋರಮಾ ಪತ್ರಿಕೆಯವರು ವಿಡಿಯೋ ಸಹಿತ ಸುದ್ದಿ ಮಾಡಿದ್ದಾರೆ. ಅಡುಗೆ ಎಣ್ಣೆಯನ್ನು ಈ ರೀತಿ ಬಳಸಿದರೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಮತ್ತು ತಿಂಡಿ ಗರಿ ಗರಿಯಾಗಿ ಕಾಣುತ್ತದೆ ಎಂಬ ಒಂದೇ ಕಾರಣಕ್ಕೆ ಜನರ ಆರೋಗ್ಯದ ಮೇಲೆ ಚೆಲ್ಲಾಟ ಆಡುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೆ ಉದ್ದೇಶಪೂರ್ವಕವಾಗಿ ವಲಸೆ ಕಾರ್ಮಿಕರು ಅತ್ಯಂತ ಗಲೀಜು ನೀರು ಮತ್ತು ಎಣ್ಣೆಯನ್ನು ಬಳಸುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕೊಲ್ಲಂ ರಸ್ತೆ ಬದಿಯಲ್ಲಿ ಹೀಗೆ ಕಾಯಿಸಿ ನೀಡುತ್ತಿದ್ದ ಪಾಣಿ ಪುರಿಗಳು ರೈಲ್ವೇ ನಿಲ್ದಾಣ ಸೇರಿದಂತೆ ಎಲ್ಲ ಕಡೆಗೆ ಪೂರೈಕೆ ಆಗುತ್ತಿದ್ದವು.


ಅಡುಗೆ ಎಣ್ಣೆಗೆ ಪ್ಲಾಸ್ಟಿಕ್ ಬಳಸೋದೇಕೆ ?
ಪಾಮ್ ಎಣ್ಣೆಯಲ್ಲಿ ಪ್ಲಾಸ್ಟಿಕ್ಕನ್ನು ಕಾಯಿಸಿ ಮೆಲ್ಟ್ ಮಾಡಿದರೆ ಅದರ ಗುಣ ಹೆಚ್ಚು ಪ್ರಖರವಾಗುತ್ತದೆ ಎಂದು ಕಾರ್ಮಿಕರು ನಂಬಿದ್ದರು. ಇದರಿಂದ ದೀರ್ಘ ಕಾಲಕ್ಕೆ ಅಡುಗೆ ಎಣ್ಣೆ ಬಳಸುವುದಕ್ಕಾಗುತ್ತದೆ ಮತ್ತು ಕಾಯಿಸಿದ ತಿಂಡಿಗಳು ಹೆಚ್ಚು ಆಕರ್ಷಕವಾಗಿರುತ್ತವೆ ಎಂಬುದನ್ನು ಕಂಡುಕೊಂಡಿದ್ದರು. ಆದರೆ ಇದರ ಭಯಾನಕ ಆರೋಗ್ಯ ತೊಂದರೆಗಳ ಬಗ್ಗೆ ವಲಸೆ ಕಾರ್ಮಿಕರಿಗೆ ಅರಿವಿಲ್ಲ.
ಆರೋಗ್ಯ ತೊಂದರೆಗಳೇನು?
ಪ್ಲಾಸ್ಟಿಕ್ ಮಿಕ್ಸ್ ಆಗಿರುವ ಎಣ್ಣೆಯಲ್ಲಿ ತಿಂಡಿಗಳನ್ನು ಕರಿದರೆ ಅದನ್ನು ತಿನ್ನುವ ಮನುಷ್ಯನ ಆರೋಗ್ಯಕ್ಕೆ ಭಾರೀ ತೊಂದರೆಗಳನ್ನು ತರಬಹುದು. ತಿಂಡಿಯ ಜೊತೆಗೆ ಟಾಕ್ಸಿಕ್ ಏಸಿಡ್ ಗಳಾದ ಡಯಾಕ್ಸಿನ್ (Dioxins), ಫುರಾನ್ಸ್ (Furans), Phthalates, ಲೋಹದ ಅಂಶಗಳು (Heavy metals) ದೇಹ ಸೇರುತ್ತದೆ. ಇದರಿಂದ ಕ್ಯಾನ್ಸರ್ ಕಾರಕ ಅಂಶಗಳು ದೇಹ ಸೇರುವುದಲ್ಲದೆ, ಹಾರ್ಮೋನ್ ತೊಂದರೆಗಳು ಕಾಣಿಸಿಕೊಳ್ಳಬಹುದು. ಲಿವರ್ ಮತ್ತು ಕಿಡ್ನಿ ತೊಂದರೆಯೂ ಕಾಣಿಸಿಕೊಳ್ಳಬಹುದು. ಉಸಿರಾಟದ ತೊಂದರೆ ಮತ್ತು ಜೀರ್ಣ ಕ್ರಿಯೆಯಲ್ಲಿ ತೊಂದರೆ ಆಗಬಲ್ಲದು.
ಹೇಗೆ ಇದನ್ನು ಪತ್ತೆ ಮಾಡಬಹುದು ?
- 1. ತಿಂಡಿಗಳನ್ನು ಪ್ಲಾಸ್ಟಿಕ್ ಮಿಕ್ಸ್ ಎಣ್ಣೆಯಲ್ಲಿ ಕರಿದಿದ್ದಾರೆಯೇ ಎಂದು ಪತ್ತೆ ಹೇಗೆ ಮಾಡಬಹುದು. ಮೇಲ್ನೋಟಕ್ಕೆ ಅಂತಹ ಸಂಶಯ ಬಂದಲ್ಲಿ ಅದರ ಪರಿಮಳ ನೋಡಬಹುದು. ಗ್ರೀಸ್ ಮಾದರಿಯ ವಾಸನೆ ಇದ್ದರೆ ಅದು ಪ್ಲಾಸ್ಟಿಕ್ ಮಿಕ್ಸ್ ಎಣ್ಣೆಯಿಂದಾಗಿರುವ ಸಾಧ್ಯತೆ ಇರುತ್ತದೆ.
- 2. ಕಡಿಮೆ ದರ ಇದ್ದರೆ ಅದನ್ನು ಸಂಶಯ ಪಡಬಹುದು. ಬೀದಿಯಲ್ಲಿ ತಿನ್ನುವುದಕ್ಕಿಂತ ಲೈಸನ್ಸ್ ಇರುವ ವ್ಯಾಪಾರಿಗಳಿಂದಲೇ ಖರೀದಿಸಿ. ಕ್ಲೀನ್ ಮತ್ತು ತಿಂಡಿಗಳನ್ನು ತಯಾರಿಸುವಾಗ ಸ್ವಚ್ಛತೆ ಕಾಯ್ದುಕೊಂಡಿದ್ದಾರೆಯೇ ಎಂದು ತಿಳಿದುಕೊಳ್ಳಿ.
- 3. ಸಂಶಯ ಕಾಣಿಸಿದಲ್ಲಿ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತನ್ನಿ. ಆಹಾರ ಇಲಾಖೆಗೆ ದೂರು ಕೊಡಿ. ಆಹಾರ ಸುರಕ್ಷತೆ ನಮ್ಮ ಹಕ್ಕು. ಅದನ್ನು ಸರಿಯಾಗಿ ಬಳಸಿಕೊಳ್ಳಿ.