ಬೆಂಗಳೂರು: ತನಗೆ ತಾನೇ ಗುಂಡಿಕ್ಕಿಕೊಂಡು ಶೂಟೌಟ್ ನಾಟಕವಾಡಿದ ರಿಕ್ಕಿ ರೈ!

ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ದಿ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಗನ್ ಮ್ಯಾನ್ ವಿಠಲ್‌ನನ್ನು ಪೊಲೀಸರು ಬಂಧಿಸಿದ್ದು, ಆತ ಪ್ರಕರಣದ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಈ ಮೊದಲು, ಗನ್ ಮ್ಯಾನ್ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಸಂಶಯಿಸಿದ್ದರು. ಇದೀಗ, ರಿಕ್ಕಿ ರೈ ತನ್ನನ್ನು ತಾನೇ ಶೂಟ್ ಮಾಡಿಕೊಂಡಿದ್ದಾನೆ ಎಂದು ಗನ್ ಮ್ಯಾನ್ ಹೇಳಿಕೆ ನೀಡಿದ್ದಾನೆ.
ಸಾಕಷ್ಟು ಅನುಮಾನ ಉಂಟಾಗಿದ್ದರಿಂದ ರಿಕ್ಕಿ ರೈ ಗನ್ ಮ್ಯಾನ್ ವಿಠಲ್‌ನನ್ನು ರಾಮನಗರ ಜಿಲ್ಲೆಯ ಪೊಲೀಸರು ಬಂಧಿಸಿದ್ದರು. ಬಳಿಕ ರಾಮನಗರ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ವೇಳೆ ಪೊಲೀಸರು ವಿಠಲ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ದೊರೆತಿದೆ. ಪೊಲೀಸರು ಆತನಿಂದ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಇದರೊಂದಿಗೆ, ರಿಕ್ಕಿ ರೈ ಶೂಟೌಟ್‌ನ ನಾಟಕವಾಡುತ್ತಿದ್ದಾನಾ ಎಂಬ ಬಗ್ಗೆ ಪೊಲೀಸರು ತಾಳಿದ್ದ ಅನುಮಾನ ನಿಜವಾಗುತ್ತಿರುವಂತಿದೆ.