ಮಂಗಳೂರು:ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾರ್ಮಿಕ ಚಿಹ್ನೆ ತೆಗೆಯದಿರಿ ; ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚನೆ, ಸಂಸದ ಬ್ರಿಜೇಶ್ ಚೌಟ ಮಾಹಿತಿ.

ಮಂಗಳೂರು, ಎ.28 : ರೈಲ್ವೇ ಇಲಾಖೆಯ ನೇಮಕಾತಿ ಪರೀಕ್ಷೆಗೂ ಹಿಂದು ಧಾರ್ಮಿಕ ಸಂಕೇತಗಳನ್ನು ತೆಗೆದಿಟ್ಟು ಬರಬೇಕೆಂದು ಪ್ರವೇಶ ಪತ್ರದಲ್ಲಿ ನೀಡಿರುವ ಸೂಚನೆಯ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಜನಿವಾರ, ಮಂಗಳಸೂತ್ರ, ತಿಲಕ ಇನ್ನಿತರ ಧಾರ್ಮಿಕ ಚಿಹ್ನೆಗಳನ್ನು ತೆಗೆಯದಂತೆ ಸಚಿವರ ಮೂಲಕ ಅಧಿಕಾರಿಗಳಿಗೆ ಸೂಚನೆ ರವಾನಿಸಿದ್ದಾರೆ.
ಎಪ್ರಿಲ್ 29ರಂದು ದೇಶಾದ್ಯಂತ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಭಾರತೀಯ ರೈಲ್ವೇ ಪರೀಕ್ಷೆ ಹಮ್ಮಿಕೊಂಡಿದ್ದು ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗಳು ಯಾವುದೇ ಧಾರ್ಮಿಕ ಚಿಹ್ನೆಗಳನ್ನೂ ಧರಿಸುವಂತಿಲ್ಲ. ಅಲ್ಲದೆ, ಮಂಗಳಸೂತ್ರ, ಜನಿವಾರ, ಬಳೆ, ತಿಲಕ ಇನ್ನಿತರ ಎಲ್ಲ ಸಂಕೇತಗಳನ್ನು ತೆಗೆದಿಟ್ಟು ಪರೀಕ್ಷಾ ಕೊಠಡಿಗೆ ಬರಬೇಕೆಂದು ಸೂಚನೆ ನೀಡಲಾಗಿತ್ತು. ಈ ಬಗ್ಗೆ ಆಕ್ಷೇಪ ಕೇಳಿಬರುತ್ತಿದ್ದಂತೆ ವಿಶ್ವ ಹಿಂದು ಪರಿಷತ್ ಮುಖಂಡರು ಸಂಸದ ಚೌಟ ಮತ್ತು ಜಿಲ್ಲಾಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಹಿಂದು ಧಾರ್ಮಿಕ ಸಂಕೇತ ತೆರವು ಮಾಡುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರ ಜೊತೆಗೆ ಮಾತನಾಡಿದ್ದು ಈ ಕುರಿತು ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ರವಾನಿಸುವಂತೆ ಮಾಡಿದ್ದಾರೆ. ಈ ಬಗ್ಗೆ ಚೌಟ ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಸಚಿವ ಸೋಮಣ್ಣ ಅವರು ಈ ವಿಚಾರದಲ್ಲಿ ತುರ್ತಾಗಿ ಸ್ಪಂದಿಸಿದ್ದು ಧಾರ್ಮಿಕ ಚಿಹ್ನೆ ಅಥವಾ ಮಂಗಳಸೂತ್ರ, ಜನಿವಾರದಂತಹ ಯಾವುದೇ ಧರ್ಮ ಸೂಚಕ ಸಂಕೇತಗಳನ್ನು ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚನೆ ರವಾನಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.