ಮಂಗಳೂರು :ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ; ಮೂವರು ತಲೆಮರೆಸಿಕೊಂಡವರು ಸೇರಿ ನಾಲ್ವರ ವಿರುದ್ಧ ಮತ್ತೆ ಚಾರ್ಜ್ ಶೀಟ್, ಆರು ಮಂದಿ ಇನ್ನೂ ನಾಪತ್ತೆ.

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಮೂವರು ತಲೆಮರೆಸಿಕೊಂಡವರು ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಅಬ್ದುಲ್ ನಾಸಿರ್, ನೌಶಾದ್, ಅಬ್ದುಲ್ ರಹ್ಮಾನ್ ಮತ್ತು ಅತೀಕ್ ಅಹ್ಮದ್ ಎಂಬವರ ವಿರುದ್ಧ ಎರಡನೇ ಬಾರಿಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಆರೋಪ ಗುರುತಿಸಲಾಗಿದೆ. 1967ರ ಯುಎಪಿಎ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಆರು ಮಂದಿ ತಲೆಮರೆಸಿಕೊಂಡವರು ಸೇರಿ ಒಟ್ಟು 27 ಆರೋಪಿಗಳ ವಿರುದ್ಧ ಈವರೆಗೆ ಎನ್ಐಎ ಚಾರ್ಜ್ ಶೀಟ್ ಹಾಕಲಾಗಿದೆ. ಇದೀಗ ಮೂವರು ನಾಪತ್ತೆಯಾದ ಆರೋಪಿಗಳು ಸಹಿತ ನಾಲ್ವರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಅಬ್ದುಲ್ ನಾಸಿರ್, ನೌಶಾದ್ ಮತ್ತು ಅಬ್ದುಲ್ ರಹ್ಮಾನ್ ನಾಪತ್ತೆಯಾದವರು. ಎನ್ಐಎ ತನಿಖೆಯ ಪ್ರಕಾರ, ಈ ಮೂವರು ಕೂಡ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಲ್ಪಟ್ಟವರಿಗೆ ಮೈಸೂರು, ಚಾಮರಾಜನಗರ ಮತ್ತು ತಮಿಳುನಾಡಿನ ಈರೋಡ್ ನಲ್ಲಿ ಅಡಗಿಕೊಳ್ಳಲು ವ್ಯವಸ್ಥೆ ಮಾಡಿದ್ದರು. ಅಲ್ಲದೆ, ಅಬ್ದುಲ್ ನಾಸಿರ್ ಮತ್ತು ಅಬ್ದುಲ್ ರಹ್ಮಾನ್ ಎಂಬವರು ಪ್ರಮುಖ ಆರೋಪಿ ತುಫೈಲ್ ಗೆ ಬೆಂಗಳೂರಿನಲ್ಲಿ ಅವಿತಿರಲು ವ್ಯವಸ್ಥೆ ಮಾಡಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.
2022ರ ಜುಲೈ 26ರಂದು ಪ್ರವೀಣ್ ನೆಟ್ಟಾರು ಅವರನ್ನು ಕೊಚ್ಚಿ ಕೊಂದ ಬಳಿಕ ಇಡೀ ಪ್ರಕರಣದಲ್ಲಿ ಸಂಚು ನಡೆಸಿದ್ದ ಮುಸ್ತಫಾ ಪೈಚಾರ್ ಚೆನ್ನೈಯಲ್ಲಿ ಅವಿತುಕೊಳ್ಳಲು ಅತೀಕ್ ಅಹ್ಮದ್ ಮತ್ತು ಕಲಂದರ್ ಎಂಬವರು ಸಹಾಯ ಮಾಡಿದ್ದರು. ಈ ನಡುವೆ, ನೆರವು ನೀಡಿದ್ದ ಅಬ್ದುಲ್ ರಹ್ಮಾನ್ ವಿದೇಶಕ್ಕೆ ಪಲಾಯನ ಮಾಡಿದ್ದರೆ, ಆನಂತರ ಇನ್ನೊಬ್ಬ ಆರೋಪಿ ರಿಯಾಜ್, ಮುಸ್ತಫಾ ಪೈಚಾರ್ 2024ರ ವರೆಗೂ ಬೇರೆ ಬೇರೆ ಕಡೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ ಎಂದು ಎನ್ಐಎ ತನಿಖೆಯಲ್ಲಿ ಪತ್ತೆ ಮಾಡಿದೆ.
2022ರ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬೈಕ್ ಅಡ್ಡಗಟ್ಟಿದ್ದ ನಾಲ್ವರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಹರಿತ ಆಯುಧಗಳಿಂದ ಕೊಂದು ಹಾಕಿದ್ದರು. ರಾಜ್ಯಾದ್ಯಂತ ಕೊಲೆ ಪ್ರಕರಣ ತೀವ್ರ ಸದ್ದು ಮಾಡಿದ್ದರಿಂದ ರಾಜ್ಯ ಸರಕಾರ ಪ್ರಕರಣವನ್ನು ಎನ್ಐಎಗೆ ವಹಿಸಿತ್ತು. ಎನ್ಐಎ ಅಧಿಕಾರಿಗಳು ಮೂರು ವರ್ಷಗಳಿಂದ ನಿರಂತರ ತನಿಖೆ ನಡೆಸಿದ್ದು, 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣ ಬೆನ್ನಲ್ಲೇ ಪಿಎಫ್ಐ ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ್ದು ಪತ್ತೆಯಾಗುತ್ತಲೇ ಕೇಂದ್ರ ಸರಕಾರ ಆ ಸಂಘಟನೆಯನ್ನೇ ನಿಷೇಧ ಮಾಡಿತ್ತು.