ಬೆಂಗಳೂರು:ಸೈಬರ್ ಕ್ರೈಂ; ಪೊಲೀಸ್ ಕಮೀಷನರ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ;ಫೋಟೋ ವೈರಲ್

ಬೆಂಗಳೂರು: ವಿಜ್ಞಾನ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಕಳ್ಳರು ಹೈಟೆಕ್ ಆಗುತ್ತಿದ್ದು ಸೈಬರ್ ಖದೀಮರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದ ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ಮೊಬೈಲ್ ಸಹಾಯದಿಂದಲೇ ವಂಚನೆ ಮಾಡುವ ಖದೀಮರಿಗೆ ಯಾರ ಭಯವೂ ಇಲ್ಲ.
ಇದೀಗ ಇಲ್ಲೊಬ್ಬ ಕಿರಾತಕ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿದ್ದಾನೆ. ಜನಸಾಮಾನ್ಯರಿಗೆ ಸ್ನೇಹಿತರ ರಿಕ್ವೆಸ್ಟ್ ಕಳುಹಿಸುವ ಮೂಲಕ ವಂಚನೆಗೆ ಯತ್ನಿಸುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇದೀಗ ಆ ನಕಲಿ ಅಕೌಂಟ್ ಸ್ಕ್ರೀನ್‌ಶಾಟ್ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಹೆಸರಿನಲ್ಲಿ ತೆರೆಯಲಾಗಿರುವ ಈ ನಕಲಿ ಫೇಸ್‌ಬುಕ್ ಖಾತೆಯು ಹಿಂದಿ ಭಾಷೆಯಲ್ಲಿದೆ. ಈ ಖಾತೆಯ ಮೂಲಕ ಖದೀಮರು, ಸಾಮಾನ್ಯ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ಒಂದು ವೇಳೆ ಈ ರಿಕ್ವೆಸ್ಟ್‌ಗಳನ್ನು ಸ್ವೀಕರಿಸಿದರೆ, ವಂಚಕರು ವೈಯಕ್ತಿಕ ಮಾಹಿತಿಯನ್ನು ಕದಿಯುವ ಅಥವಾ ಹಣಕಾಸಿನ ವಂಚನೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಈ ಖಾತೆಯಿಂದ ಕಳುಹಿಸಲಾಗುವ ಸಂದೇಶಗಳು ಅಥವಾ ರಿಕ್ವೆಸ್ಟ್‌ಗಳು ಆಯುಕ್ತರಿಂದ ಬಂದಿರುವಂತೆ ತೋರಿಸುವಂತೆ ರಚಿತವಾಗಿವೆ, ಇದು ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ.ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ. ನಕಲಿ ಖಾತೆಯ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಖಾತೆಯನ್ನು ತೆಗೆದುಹಾಕಲು ಫೇಸ್‌ಬುಕ್ ಆಡಳಿತದೊಂದಿಗೆ ಸಂಪರ್ಕ ಸಾಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ