ಭಟ್ಕಳ :ವಿಚಾರಣೆ ನೆಪದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನನ್ನ ಠಾಣೆಗೆ ಕರೆಸಿ ಎಸ್ಪಿ ಹಲ್ಲೆ ; ರಾತ್ರೋ ರಾತ್ರಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ, ಎಸ್ಪಿ ಕ್ಷಮೆ ಕೋರುವಂತೆ ಕಾರ್ಯಕರ್ತರ ಆಕ್ರೋಶ !

ಕಾರವಾರ: ವಿಚಾರಣೆ ನೆಪದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನನ್ನು ಠಾಣೆಗೆ ಕರೆಸಿ ಎಸ್.ಪಿ ಎಂ.ನಾರಾಯಣ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಭಟ್ಕಳದಲ್ಲಿ ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಹೆದ್ದಾರಿ ತಡೆದು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ಭಟ್ಕಳದ ಹನುಮ ನಗರದ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಹಲ್ಲೆಗೊಳಗಾಗಿದ್ದು, ಭಟ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ಶಿರಸಿಯಲ್ಲಿ ರೌಡಿಶೀಟರ್ ಪೆರೇಡ್ ಮಾಡಿದ್ದ ಎಸ್.ಪಿ ಎಂ.ನಾರಾಯಣ್‌ರವರು 6 ಪ್ರಕರಣದಲ್ಲಿ ಆರೋಪಿಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಡಿಪಾರಾಗಿದ್ದ ಆಟೋ ಚಾಲಕ ಶ್ರೀನಿವಾಸ ನಾಯ್ಕರನ್ನು ಮಂಗಳವಾರ ಬೆಳಗ್ಗೆ ಭಟ್ಕಳ ಪೊಲೀಸರು ಶಿರಸಿಗೆ ಕರೆದೊಯ್ದಿದ್ದರು. ಶಿರಸಿ ನಗರ ಠಾಣೆಯಲ್ಲಿ ಇದ್ದ ಎಸ್.ಪಿ ಎಂ.ನಾರಾಯಣ್‌ರವರು ತನಿಖೆ ನೆಪದಲ್ಲಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.


ಈ ಆರೋಪದ ಬೆನ್ನಲ್ಲೇ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಭಟ್ಕಳ ಶಹರಾ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಮಾಜಿ ಬಿಜೆಪಿ ಶಾಸಕ ಸುನೀಲ್ ನಾಯ್ಕ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಪ್ರತಿಭಟನಾ ಸ್ಥಳಕ್ಕೆ ಎಸ್.ಪಿ ಆಗಮಿಸಿ ಕ್ಷಮೆ ಕೋರುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ ಭಟ್ಕಳದ ಡಿವೈಎಸ್‌ಪಿ ಮಹೇಶ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಸಾಮಾನ್ಯ ಜನರ ರಕ್ಷಣೆ ಯಾರು ಮಾಡುತ್ತಾರೆ?
"ಪೊಲೀಸ್ ಅಧಿಕಾರಿಗಳೇ ಈ ರೀತಿ ಕಾನೂನನ್ನು ಕೈಗೆತ್ತಿಕೊಂಡರೆ, ಸಾಮಾನ್ಯ ಜನರ ರಕ್ಷಣೆ ಯಾರು ಮಾಡುತ್ತಾರೆ?" ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಶ್ರೀನಿವಾಸ್ ನಾಯ್ಕನ ಮೇಲಿನ ಹಲ್ಲೆಯನ್ನು ಖಂಡಿಸಿ, ಎಸ್‌ಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ. ಪ್ರತಿಭಟನೆಯಿಂದಾಗಿ ಭಟ್ಕಳದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವ್ಯಾಪಾರ ವಹಿವಾಟು ಕೂಡ ಸ್ಥಬ್ಧವಾಗಿದೆ.
ಈ ಆರೋಪದ ಬಗ್ಗೆ ಎಸ್‌ಪಿ ಎಂ. ನಾರಾಯಣ್ ಅಥವಾ ಜಿಲ್ಲಾ ಪೊಲೀಸ್ ಇಲಾಖೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಘಟನೆಯ ತನಿಖೆ ನಡೆಯುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.