ತಮಿಳುನಾಡು:ಇಬ್ಬರು ಹೆಣ್ಮಕ್ಕಳಿಗೆ ಕಿರುಕುಳ ; ಪೋಕ್ಸೋ ಕೇಸಿನಲ್ಲಿ ತಲೆಮರೆಸಿದ್ದ ಪಾಸ್ಟರ್ ಜಾನ್ ಜೇಬರಾಜ್ ಕೇರಳದಲ್ಲಿ ಬಂಧನ.

ಕೊಯಂಬತ್ತೂರು: ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಪ್ರಸಿದ್ಧ ಕ್ರಿಸ್ತಿಯನ್ ಗಾಯಕ ಪಾಸ್ಟರ್ ಜಾನ್ ಜೇಬರಾಜ್ (37) ಕಡೆಗೂ ಕೇರಳದ ಮುನ್ನಾರ್ ನಲ್ಲಿ ಅರೆಸ್ಟ್ ಆಗಿದ್ದಾನೆ. ಕೊಯಂಬತ್ತೂರಿನ ಮಹಿಳಾ ಠಾಣೆ ಪೊಲೀಸರು ತಲೆಮರೆಸಿಕೊಂಡು ಅವಿತಿದ್ದ ಜೇಬರಾಜ್ ನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದು, ಜೈಲಿಗೆ ತಳ್ಳಿದ್ದಾರೆ.
2024ರ ಮೇ ತಿಂಗಳಲ್ಲಿ ಜೇಬರಾಜ್ ತನ್ನ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿ ಸಂದರ್ಭದಲ್ಲಿ 17 ಮತ್ತು 14 ವರ್ಷದ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ದಾಖಲಾಗಿತ್ತು. ದೂರು ದಾಖಲಾದ ಬಳಿಕ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ ಜೇಬರಾಜ್ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದರು. ಇದೀಗ ಕೇರಳದ ಪ್ರಸಿದ್ಧ ಪ್ರವಾಸಿ ತಾಣ ಮುನ್ನಾರ್ ನಲ್ಲಿ ಅವಿತುಕೊಂಡಿದ್ದ ಜೇಬರಾಜ್ ನನ್ನು ಬಂಧನ ಮಾಡಿದ್ದಾರೆ. ಆರೋಪಿಯನ್ನು ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೋಕ್ಸೋ ಕೇಸು ದಾಖಲಾದ ಬಳಿಕ ಕೊಯಂಬತ್ತೂರು ಪೊಲೀಸ್ ಕಮಿಷನರ್ ಸರವಣ ಸುಂದರ್ ಅವರು ಆರೋಪಿ ಜೇಬರಾಜ್ ದೇಶ ಬಿಟ್ಟು ಹೋಗದಂತೆ ಎಲರ್ಟ್ ಮಾಡುವುದಕ್ಕಾಗಿ ಲುಕೌಟ್ ನೋಟೀಸ್ ಜಾರಿ ಮಾಡಿದ್ದು, ಎಲ್ಲ ಏರ್ಪೋರ್ಟ್ ಮತ್ತು ಬಂದರುಗಳಿಗೂ ಮಾಹಿತಿ ರವಾನೆಯಾಗಿತ್ತು.
ಜಾನ್ ಜೇಬರಾಜ್ ಕೊಯಂಬತ್ತೂರಿನ ಕಿಂಗ್ಸ್ ಜನರೇಶನ್ ಚರ್ಚ್ ನಲ್ಲಿ ಪಾಸ್ಟರ್ ಆಗಿದ್ದ. ಅಲ್ಲದೆ, ಕ್ರಿಸ್ತಿಯನ್ನರ ಪ್ರಾರ್ಥನೆ ಹಾಡುಗಳನ್ನ ಹಾಡುವುದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ಅಭಿಮಾನಿಗಳನ್ನ ಪಡೆದುಕೊಂಡಿದ್ದ. ಇತ್ತೀಚೆಗೆ ಕಿರುಕುಳಕ್ಕೀಡಾದ ಇಬ್ಬರು ಹೆಣ್ಮಕ್ಕಳ ಪೈಕಿ ಒಬ್ಬಾಕೆ ತನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಅದರಂತೆ ಪೋಕ್ಸೋ ಕಾಯ್ದೆಯಡಿ ಜಾನ್ ಜೇಬರಾಜ್ ವಿರುದ್ಧ ಕೇಸು ದಾಖಲಾಗಿತ್ತು.
ಇನ್ನು ಇತ್ತೀಚಿಗಷ್ಟೇ ತನ್ನ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಹೆಂಡತಿ ಡಿವೋರ್ಸ್ ಪಡೆದು ಜಾನ್ ನಿಂದ ದೂರ ಸೆರೆದಿದ್ದರು. ಡಿವೋರ್ಸ್ ಬೆನ್ನಲ್ಲೇ ಹೆಂಡತಿ ಹಾಗೂ ಮಾವನ ವಿರುದ್ಧ ಜಾನ್ ಸಾಕಷ್ಟು ಆರೋಪಗಳನ್ನ ಮಾಡಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜಾನ್ ಜೇಬರಾಜ್ ಬಂಧನದ ಹಿಂದೆ ಮಾವನ ಕೈವಾಡ ಇರುವ ಶಂಕೆಯನ್ನ ಚರ್ಚಿನ ಸದಸ್ಯರು ವ್ಯಕ್ತಪಡಿಸಿದ್ದಾರೆ