ಮಂಗಳೂರು:ಇಬ್ಬರು ಗೆಳೆಯರ ಜೀವ ತೆಗೆದ ಗೋಲ್ಡ್ ಸ್ಮಗ್ಲಿಂಗ್ ; ಚಿನ್ನ ಮಾರಿದ ದುಡ್ಡಿನಲ್ಲಿ ಮಜಾ ಮಾಡಿದವರಿಂದ್ಲೇ ಗುನ್ನಾ, ಹತ್ತು ವರ್ಷಗಳ ಹಿಂದೆ ಮುಚ್ಚಿಹೋಗ್ತಿದ್ದ ಕೊಲೆ ಕೃತ್ಯ ಭೇದಿಸಿದ್ದ ಮಂಗಳೂರು ಸಿಸಿಬಿ, ಗೋಲ್ಡ್ ಕಿಲ್ಲರ್ ಅಪರಾಧ ಸಾಬೀತು !

ಮಂಗಳೂರು : ಮನುಷ್ಯರಲ್ಲಿ ಎಷ್ಟೊಂದು ಕ್ರೂರಿಗಳು ಇದ್ದಾರೆ ಎಂಬುದಕ್ಕೆ ಈ ಕತೆಯೇ ಸಾಕ್ಷಿ. ಅವರೆಲ್ಲ ಒಂದೇ ಪ್ರಾಯದ ಹುಡುಗರು. ಅಜ್ಮೀರ್, ಆಗ್ರಾ, ಹೈದ್ರಾಬಾದ್, ಮುಂಬೈ, ಗೋವಾ ಅಂತ ನಾಲ್ಕು ತಿಂಗಳಲ್ಲಿ ಅವರು ಓಡಾಡಿರದ ಊರು ಇರಲಿಕ್ಕಿಲ್ಲ. ಕೊನೆಗೆ, ಮಂಗಳೂರಿನಲ್ಲಿ ನಾಲ್ಕು ಬೆಡ್ ರೂಮಿನ ದೊಡ್ಡ ಮನೆಯನ್ನು ಬಾಡಿಗೆ ಪಡೆದು ದಿನವೂ ಮಜಾ ಮಾಡುತ್ತ ನಾಲ್ಕೇ ದಿನ ಲೈಫ್ ಅಂತ ಹೈಫೈ ಜೀವನ ಮಾಡ್ಕೊಂಡಿದ್ದರು. ಪುಕ್ಕಟೆ ಸಿಕ್ಕ ದುಡ್ಡಿನಲ್ಲಿ ಮೆರೆದಾಡುತ್ತಿದ್ದ ಐದು ಮಂದಿ ಹುಡುಗರ ಲೈಫ್ ಸ್ಟೈಲ್ ನೋಡಿದ್ದ ಆ ವಿಧಿಗೇ ಹೊಟ್ಟೆಕಿಚ್ಚು ಬಂದಿತ್ತೋ ಏನೋ.. ಜೊತೆಗೇ ತಿಂದುಂಡು ಮಲಗುತ್ತಿದ್ದ ಮೂವರು ಗೆಳೆಯರು, ತಮ್ಮಷ್ಟಕ್ಕೇ ಮಲಗಿದ್ದ ಇಬ್ಬರು ಗೆಳೆಯರನ್ನು ಹಾಡಹಗಲೇ ಚೂರಿಯಿಂದ ಕುತ್ತಿಗೆ ಸೀಳಿ ಅಮಾನುಷವಾಗಿ ಹತ್ಯೆ ಮಾಡಿದ್ದರು.

ಹೌದು.. ಯಾರೂ ಊಹಿಸದ, ಯಾರೂ ನಂಬಲೂ ಆಗದಂತೆ ಆ ಮೂವರು ಗೆಳೆಯರು ಕೃತ್ಯ ಎಸಗಿದ್ದರು. ಇದಕ್ಕೆ ಕಾರಣವಾಗಿದ್ದು ಗೋಲ್ಡ್ ಸ್ಮಗ್ಲಿಂಗ್ ಮತ್ತು ಚಿನ್ನವನ್ನು ಮಾರಿ ಬಂದಿದ್ದ ಪುಕ್ಕಟೆ ದುಡ್ಡಿನಲ್ಲಿ ತಲೆಗೇರಿದ್ದ ಮದ. 2014ರ ಜುಲೈ ತಿಂಗಳ ಮಳೆಗಾಲದಲ್ಲಿ ಕೇರಳ ಮೂಲದ ಯುವಕರು ಮಂಗಳೂರಿನಲ್ಲಿ ಮಾಡಿದ್ದ ಅಮಾನುಷ ಕೊಲೆ ಕೃತ್ಯ ಅದ್ಹೇಗೋ ಸಿಸಿಬಿ ಪೊಲೀಸರಿಗೆ ತಿಳಿದು ಹೊರಗೆ ಬಂದಿತ್ತು. ವೆಲೆಂಟೈನ್ ಡಿಸೋಜ ನೇತೃತ್ವದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಹಿಡಿದು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಿದ್ದರು. ತನಿಖೆ ನಡೆಸಿದ್ದ ಇನ್ಸ್ ಪೆಕ್ಟರ್ ದಿನಕರ ಶೆಟ್ಟಿ ಆರೋಪಿಗಳ ವಿರುದ್ಧ ಸುದೀರ್ಘ ಚಾರ್ಜ್ ಶೀಟ್ ಹಾಕಿದ್ದರು. 11 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಆರೋಪಿಗಳನ್ನು ಅಪರಾಧಿಗಳೆಂದು ಮಂಗಳೂರಿನ ಕೋರ್ಟ್ ಘೋಷಣೆ ಮಾಡಿದೆ.



ಕಾಸರಗೋಡು ಜಿಲ್ಲೆಯ ಚೆಂಗಳ ನಿವಾಸಿ ಮೊಹಮ್ಮದ್ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರ ಬಳಿಯ ಅಣಂಗೂರು ನಿವಾಸಿಗಳಾದ ಮೊಹಮ್ಮದ್ ಇರ್ಶಾದ್ (24) ಮತ್ತು ಮೊಹಮ್ಮದ್ ಸಫ್ವಾನ್ (24) ಆರೋಪಿಗಳಾಗಿದ್ದು, ಕೊಲೆ ಕೃತ್ಯ ನಡೆದು ಹತ್ತು ವರ್ಷಗಳ ಬಳಿಕ ಅಪರಾಧಿಗಳಾಗಿ ಜೈಲು ಸೇರಿದ್ದಾರೆ. ತಲಶ್ಶೇರಿ ನಿವಾಸಿ ನಾಫಿರ್ (24), ಕೋಯಿಕ್ಕೋಡು ನಿವಾಸಿ ಫಾಹೀಮ್ (25) ಕೊಲೆಯಾದವರು
ಕೊಲೆ ಕೃತ್ಯ ಬಯಲಾಗಿದ್ದೇ ರೋಚಕ
2014ರ ಜುಲೈ 1ರಂದು ಕೊಲೆಯಾಗಿದ್ದರೂ, ಎಲ್ಲವೂ ರಹಸ್ಯವಾಗಿಯೇ ನಡೆದಿತ್ತು. ಅದಕ್ಕೂ ಮುನ್ನ ಜೂನ್ 15ರ ವೇಳೆಗೆ ಅತ್ತಾವರದಲ್ಲಿ ನಾಲ್ಕು ಬೆಡ್ಡಿನ ದೊಡ್ಡ ಮನೆಯನ್ನು ತಿಂಗಳಿಗೆ 38 ಸಾವಿರ ಬಾಡಿಗೆ ಗೊತ್ತುಪಡಿಸಿ ಐವರು ಗೆಳೆಯರು ಉಳಿದುಕೊಂಡಿದ್ದರು. ದಿನವೂ ಮಜಾದಲ್ಲೇ ಕಾಲ ಕಳೆಯುತ್ತಿದ್ದಾಗಲೇ ಆರೋಪಿಗಳಾದ ಸನಾಫ್, ಇರ್ಶಾದ್ ಮತ್ತು ಸಫ್ವಾನ್ ಎಂಬವರು ಕೊಲೆಗೆ ತಯಾರಿ ನಡೆಸಿದ್ದರು. ರಾತ್ರಿ ವೇಳೆಗೆ ತಡರಾತ್ರಿ ವರೆಗೂ ಟಿವಿ ನೋಡುತ್ತ ಕಾಲ ಕಳೆದು ಬೆಳಗ್ಗಿನ ಹೊತ್ತು ಲೇಟಾಗಿ ಏಳುತ್ತಿದ್ದರು. ಅಂದು ಬೆಳಗ್ಗೆ 10.30 ಆದರೂ ನಾಫಿರ್ ಮತ್ತು ಫಾಹೀಮ್ ತಮ್ಮ ಕೋಣೆಯಲ್ಲೇ ಮಲಗಿದ್ದರು. ಇದೇ ಸಂದರ್ಭದಲ್ಲಿ ಸನಾಫ್ ಮತ್ತು ಇನ್ನಿಬ್ಬರು ಚೂರಿಯಿಂದ ಮೊದಲಿಗೆ ಫಾಹೀಮ್ ಕುತ್ತಿಗೆ ಸೀಳಿದ್ದರೆ, ಆಬಳಿಕ ನಾಫಿರ್ ಕೋಣೆಗೆ ತೆರಳಿ ಆತನದ್ದೂ ಕತೆ ಮುಗಿಸಿದ್ದಾರೆ.
ಆಬಳಿಕ ರಕ್ತ ಎಲ್ಲವೂ ಬೆಡ್ಡಿಗೆ ಚೆಲ್ಲುವಂತೆ ಮಾಡಿ, ಕೈಕಾಲುಗಳನ್ನು ಮಡಚಿ ಪ್ಲಾಸ್ಟಿಕ್ ನಲ್ಲಿ ಸುತ್ತಿಟ್ಟು ಮೊದಲೇ ತಿರುಗಾಟಕ್ಕೆಂದು ಬಾಡಿಗೆ ಪಡೆದಿದ್ದ ಡಸ್ಟರ್ ಕಾರಿನಲ್ಲಿ ಕಾಸರಗೋಡಿನ ಬೇಡಡ್ಕದಲ್ಲಿ ತಾವು ಖರೀದಿಸಿಟ್ಟಿದ್ದ ಜಾಗಕ್ಕೆ ಒಯ್ದು ಹೂತು ಹಾಕಿದ್ದಾರೆ. ಇದ್ಯಾವುದೂ ಯಾರ ಗಮನಕ್ಕೂ ಬಂದಿರಲಿಲ್ಲ. ಆನಂತರ, ಬೆಡ್ ಶೀಟ್, ಬೆಡ್ಡನ್ನು ತುಂಡು ತುಂಡು ಮಾಡಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಬೇರೆ ಬೇರೆ ಜಾಗಕ್ಕೆ ಒಯ್ದು ಎಸೆದಿದ್ದಾರೆ. ಅದರ ಒಂದು ಬಂಡಲನ್ನು ಕಾಸರಗೋಡಿನ ಚೆಂಗಳ ಬಳಿಯ ಚಂದ್ರಗಿರಿ ನದಿಗೆ ಸೇತುವೆ ಮೇಲಿನಿಂದಲೇ ಎಸೆದು ಬಂದಿದ್ದಾರೆ. ಆದರೆ ಕಾರಿನಲ್ಲಿ ಏನೋ ಬಂಡಲನ್ನು ಪದೇ ಪದೇ ಒಯ್ಯುತ್ತಿರುವುದು, ಆಬಳಿಕ ಮನೆಯನ್ನು ಕ್ಲೀನ್ ಮಾಡುತ್ತಿದ್ದುದನ್ನು ಗಮನಿಸಿದ್ದ ಸ್ಥಳೀಯರು ಅನುಮಾನಾಸ್ಪದ ರೀತಿ ನಡೆದುಕೊಳ್ಳುತ್ತಿದ್ದಾರೆಂದು ಮಂಗಳೂರಿನ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆರೋಪಿಗಳ ಚಲನವಲನ ಗಮನಿಸಿ ಮಹಾಕಾಳಿ ಪಡ್ಪುನಲ್ಲಿ ಕಾರನ್ನು ಅಡ್ಡಹಾಕಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಕೃತ್ಯ ಮತ್ತು ಗೋಲ್ಡ್ ಸ್ಮಗ್ಲಿಂಗ್ ಕತೆ ಹೊರಬಿದ್ದಿದೆ.

ಗೋಲ್ಡ್ ಸ್ಮಗ್ಲಿಂಗ್ ಮಾಡಿ ಕೊಲೆಯಾದರು
ತಲಶ್ಶೇರಿ ನಿವಾಸಿ ನಾಫಿರ್ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕೇರಳದ ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ತೊಡಗಿಸಿಕೊಂಡಿದ್ದ. 2014ರ ಜುಲೈ ತಿಂಗಳಲ್ಲಿ ಕೊಲೆ ಆಗೋದಕ್ಕೂ ಆರು ತಿಂಗಳ ಹಿಂದೆ ಗೋವಾ ಏರ್ಪೋರ್ಟಿಗೆ ಬಂದಿದ್ದ ನಾಫಿರ್, ತನ್ನ ಜೊತೆಗೆ ಕೇಜಿಗಟ್ಟಲೆ ಚಿನ್ನವನ್ನು ತಂದಿದ್ದ ಎನ್ನಲಾಗಿದೆ. ಆದರೆ ಅದನ್ನು ಯಾರಿಗೆ ಒಪ್ಪಿಸಬೇಕಿತ್ತೋ ಅದನ್ನು ಮಾಡದೆ ಮೊಬೈಲನ್ನೂ ಬಳಕೆ ಮಾಡದೆ ಚಿನ್ನವನ್ನು ಲಪಟಾಯಿಸಲು ಪ್ಲಾನ್ ಮಾಡಿದ್ದ. ಅದಾಗಲೇ ಗೋವಾದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಗೆಳೆಯ ಫಾಹೀಮ್ ಜೊತೆಗೂಡಿ ಚಿನ್ನದ ಮಾರಾಟಕ್ಕೆ ಪ್ಲಾನ್ ಮಾಡುತ್ತಿದ್ದರು. ಹೀಗಿರುವಾಗಲೇ ಆರೋಪಿಗಳಲ್ಲಿ ಒಬ್ಬನಾದ ಮಹಮ್ಮದ್ ಸನಾಫ್ ಇವರಿಗೆ ಪರಿಚಯವಾಗಿದ್ದ.
ಆನಂತರ, ಮೂವರು ಜೊತೆಗೂಡಿ ಚಿನ್ನದ ಮಾರಾಟಕ್ಕೆ ಪ್ಲಾನ್ ಹಾಕಿದ್ದರು. ಅಷ್ಟರಲ್ಲೇ ಸನಾಫ್ ತನ್ನ ಊರಿನ ಮತ್ತಿಬ್ಬರು ಗೆಳೆಯರನ್ನು ಜೊತೆಗೆ ಕರೆಸಿಕೊಂಡಿದ್ದನು. ಇವರಿಗೆ ಕಾಸರಗೋಡಿನಲ್ಲಿ ಯೂಸುಫ್ ಎನ್ನುವ ಬ್ರೋಕರ್ ಪರಿಚಯವಾಗಿದ್ದು ಆತನ ಮೂಲಕ ಕಾಸರಗೋಡಿನ ಜುವೆಲ್ಲರಿಗಳಿಗೆ 72 ಲಕ್ಷ ರೂಪಾಯಿ ಮೊತ್ತದ ಚಿನ್ನವನ್ನು ಮಾರಾಟ ಮಾಡುತ್ತಾರೆ. ಆಬಳಿಕ ಇವರೆಲ್ಲ ಸೇರಿಕೊಂಡು ಎಲ್ಲ ಕಡೆ ತಿರುಗಾಡಿದ್ದಾರೆ. ದೆಹಲಿ, ಅಜ್ಮೀರ್, ಹೈದ್ರಾಬಾದ್ ಸುತ್ತಾಟ, ಜೊತೆಗೆ ಬೇಕಾದ ರೀತಿ ಮೋಜು ಮಾಡಿ 35 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಈ ನಡುವೆ, ಚಿನ್ನದ ಮೂಲ ಹಕ್ಕುದಾರ ನಾಫಿರ್ ತನ್ನನ್ನು ಗೋಲ್ಡ್ ಸ್ಮಗ್ಲಿಂಗ್ ವ್ಯವಹಾರಸ್ಥರು ಹುಡುಕುತ್ತಿದ್ದಾರೆಂದು ನಗದು ಹಣವನ್ನು ನೀವೇ ಇಟ್ಟುಕೊಳ್ಳಿ, ಬೇಕಾದಾಗ ಕೇಳುತ್ತೇನೆ ಎಂದು ಹೇಳಿ ಆರೋಪಿಗಳ ಕೈಗೆ ಕೊಟ್ಟಿದ್ದ.
ಇದೇ ಸಂದರ್ಭದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಜಾಲದವರು ವಿಷಯ ತಿಳಿದು ಮಹಮ್ಮದ್ ಸನಾಫ್ ನನ್ನು ಸಂಪರ್ಕ ಮಾಡುತ್ತಾರೆ. ನಾಫಿರ್ ಮತ್ತು ಫಾಹೀಮ್ ಎಲ್ಲಿ ಅಡಗಿದ್ದಾರೆಂದು ತಿಳಿದು ದಾಳಿ ಮಾಡುವುದಕ್ಕೂ ಯತ್ನಿಸುತ್ತಾರೆ. ಆದರೆ ಆರೋಪಿಗಳಿಂದ ಮಾಹಿತಿ ಪಡೆದು ನಾಫಿರ್ ಎಸ್ಕೇಪ್ ಆಗುತ್ತಾನೆ. ಕೆಲವು ಸಮಯ ಅಜ್ಮೀರ್ ನಲ್ಲಿ ಅಡಗಿಕೊಂಡು ಮತ್ತೆ ಮಂಗಳೂರಿಗೆ ಬಂದಿದ್ದ ನಾಫೀರ್, ಆರೋಪಿಗಳ ಕೈಲಿದ್ದ ಹಣವನ್ನು ಕೇಳುತ್ತಾನೆ, ಅಲ್ಲದೆ, ಎಷ್ಟು ಖರ್ಚಾಗಿದೆ ಎಂದು ಹೇಳಿ ಲೆಕ್ಕ ಕೇಳುತ್ತಾನೆ. ಇದರಿಂದ ಸಿಟ್ಟಾದ ಆರೋಪಿಗಳು ಸದ್ದಿಲ್ಲದೇ ನಾಫಿರ್ ಮತ್ತು ಫಾಹೀಮ್ ಕೊಲೆಗೆ ಲೆಕ್ಕ ಹಾಕುತ್ತಾರೆ. ಇದರ ನಡುವಲ್ಲೇ ಕಾಸರಗೋಡಿನ ಬೇಡಡ್ಕದಲ್ಲಿ ಹತ್ತು ಸೆಂಟ್ಸ್ ಜಾಗವನ್ನು ಖರೀದಿಸುತ್ತಾರೆ. ಅದರಲ್ಲಿ ಎರಡು ತೆಂಗಿನ ಗಿಡವನ್ನು ನೆಟ್ಟು ಎರಡು ಗುಂಡಿಯನ್ನೂ ತೋಡಿ ಇಡುತ್ತಾರೆ. ಜುಲೈ 1ರಂದು ನಾಫಿರ್ ಮತ್ತು ಫಾಹೀಮ್ ನನ್ನು ಕೊಲೆ ಮಾಡಿ ಸಂಜೆ ವೇಳೆಗೆ ರಕ್ತ ಎಲ್ಲ ಸುರಿದು ಹೋದ ಬಳಿಕ ಪ್ಲಾಸ್ಟಿಕ್ ನಲ್ಲಿ ಸುತ್ತಿಟ್ಟ ಸ್ಥಿತಿಯಲ್ಲೇ ತಂದು ಅದೇ ಗುಂಡಿಯಲ್ಲಿ ಹೂಳುತ್ತಾರೆ.

2.700 ಕೇಜಿ ಬಂಗಾರ ರಿಕವರಿ ಆಗಿತ್ತು
ಪೊಲೀಸರು ಆರೋಪಿಗಳನ್ನು ಬಾಯಿಬಿಡಿಸಿ ಗೋಲ್ಡ್ ಸ್ಮಗ್ಲಿಂಗ್ ವಿಷಯ, ಚಿನ್ನ ಮಾರಾಟ ಮಾಡಿದ್ದನ್ನೂ ರಿಕವರಿ ಮಾಡುತ್ತಾರೆ. ಕಾಸರಗೋಡಿನ ಜುವೆಲ್ಲರಿಗಳಿಂದ 2 ಕೇಜಿ 700 ಗ್ರಾಮ್ ಚಿನ್ನ ವಶಕ್ಕೆ ಪಡೆಯುತ್ತಾರೆ. ಒಟ್ಟು ಎಷ್ಟು ಚಿನ್ನ ಮಾರಿದ್ದರು ಎನ್ನುವ ಲೆಕ್ಕ ಸಿಕ್ಕಿರಲಿಲ್ಲ. ಮಂಗಳೂರು ಪೊಲೀಸರು ಕೊಲೆ ಪ್ರಕರಣಕ್ಕೆ ಸೀಮಿತಗೊಳಿಸಿ ತನಿಖೆ ಮಾಡಿದ್ದು, ಚಿನ್ನ ಎಲ್ಲಿಂದ ತಂದಿದ್ದರು, ಯಾರಿಗೆ ಕೊಡಬೇಕಾಗಿತ್ತು ಎನ್ನುವ ಬಗ್ಗೆ ತನಿಖೆ ನಡೆಸಿಲ್ಲ. ಹಾಗಾಗಿ, ಗೋಲ್ಡ್ ಸ್ಮಗ್ಲಿಂಗ್ ವಿಚಾರದ ಬಗ್ಗೆ ಮಾಹಿತಿ ಪೊಲೀಸರಿಗೂ ಸಿಕ್ಕಿಲ್ಲ. ಚಿನ್ನವನ್ನು ಮಾರಾಟ ಮಾಡಲು ಸಹಕರಿಸಿದ್ದ ಯೂಸುಫ್ ನನ್ನು ಪ್ರಬಲ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಅಲ್ಲದೆ, ಅತ್ತಾವರದ ಮನೆ ಪರಿಸರದ ವಾಚ್ ಮನ್ ಕೂಡ ಸಾಕ್ಷಿ ಹೇಳಿದ್ದಾನೆ.
ವಾಚ್ಮನ್ ಇದ್ದ ಕಾರಣ ಹಗಲೇ ಕೊಲೆ ಕೃತ್ಯ
ವಿಚಿತ್ರ ಎಂದರೆ, ಇವರು ರಾತ್ರಿ ಕೊಲೆ ಮಾಡದಿರುವುದಕ್ಕೆ ಕಾರಣವೇ ಇದೇ ವಾಚ್ ಮನ್ ಆಗಿದ್ದ. ರಾತ್ರಿ ವೇಳೆ ವಾಚ್ ಮನ್ ಆಗಿ ಮನೆ ಬಳಿಯಲ್ಲೇ ಇರುತ್ತಿದ್ದ ಆತ, ಹಗಲಿನಲ್ಲಿ ಬೇರೆ ಕೆಲಸಕ್ಕೆ ಹೋಗುತ್ತಿದ್ದ. ಹಾಗಾಗಿ ಹಗಲಿನಲ್ಲೇ ಕೊಲೆ ಮಾಡಿ, ಮನೆಯನ್ನು ಕ್ಲೀನ್ ಮಾಡುವ ಕೆಲಸವನ್ನು ಆರೋಪಿಗಳು ಮಾಡಿ ಮುಗಿಸಿದ್ದರು. ಆದರೆ ಇವರ ಚಲನವಲನ ವಾಚ್ ಮನ್ ವ್ಯಕ್ತಿಗೂ ಸಂಶಯ ಮೂಡಿಸಿತ್ತು. ಪ್ರಕರಣದಲ್ಲಿ ಆರೋಪಿಗಳು ವಿಚಾರಣೆಗೆ ಬಾರದೆ ಅಸಹಕಾರ ತೋರಿದ್ದರಿಂದ ಹತ್ತು ವರ್ಷಗಳ ಕಾಲ ಕೋರ್ಟ್ ಪ್ರಕ್ರಿಯೆ ವಿಳಂಬಗೊಂಡಿದೆ ಎಂದು ಸಂತ್ರಸ್ತರ ಪರ ವಾದಿಸಿದ ಸರ್ಕಾರಿ ವಕೀಲೆ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ನಿವೃತ್ತ ಸರಕಾರಿ ವಕೀಲ ರಾಜು ಪೂಜಾರಿ ಸಂತ್ರಸ್ತರ ಪರವಾಗಿ ವಾದಿಸಿದ್ದರು. ಒಟ್ಟಿನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಜಾಲದವರೇ ಕೊಲೆ ಮಾಡಿಸಿದ್ದಾರೆಯೇ, ಇವರಾಗಿಯೇ ಕೊಲೆ ಮಾಡಿದ್ದಾರೆಯೇ ಎನ್ನುವುದು ಖಾತ್ರಿಯಾಗಿಲ್ಲ. ಪೊಲೀಸರ ತನಿಖೆಯಲ್ಲಿ ತಾವಾಗಿಯೇ ಹಣಕಾಸು ವಿಚಾರದಲ್ಲಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾರೆ.
ರಕ್ತ ಹೋಗಿದ್ದರಿಂದ ಕೊಳೆತಿರಲಿಲ್ಲ ಶವ
ನಾಲ್ಕೇ ದಿನದಲ್ಲಿ ಆರೋಪಿಗಳು ಸಿಕ್ಕಿದ್ದರಿಂದ ಮತ್ತು ಆನಂತರ ಹೂತು ಹಾಕಿದ್ದ ಹೆಣವನ್ನೂ ಪೊಲೀಸರು ಅಗೆದು ತೆಗೆದಿದ್ದರಿಂದ ಪ್ರಬಲ ಸಾಕ್ಷ್ಯವಾಗಿತ್ತು. ಹೆಣದಲ್ಲಿ ಹೂಳುವ ಮೊದಲೇ ರಕ್ತ ಬಸಿದು ಹೋಗಿದ್ದರಿಂದ ಹೆಚ್ಚು ಕೊಳೆತಿರಲಿಲ್ಲ. ಶವದಲ್ಲಿ ನೀರಿನಂಶ ಇಲ್ಲದ ಕಾರಣ ಹುಳವೂ ಬಂದಿರಲಿಲ್ಲ. ಹೀಗಾಗಿ ಮತ್ತೆ ಫಾರೆನ್ಸಿಕ್ ರಿಪೋರ್ಟ್ ಮತ್ತು ಪೋಸ್ಟ್ ಮಾರ್ಟಂ ಕೂಡ ನಡೆಸಲಾಗಿತ್ತು. ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ ಕುತ್ತಿಗೆ ಸೀಳಿ ಕೊಲೆಗೈದ ಬಗ್ಗೆ ವರದಿ ನೀಡಿದ್ದರು. ಅಲ್ಲದೆ, ಡಿಎನ್ಎ ವರದಿ ಮತ್ತು 97 ಸಾಕ್ಷಿಗಳು ಕೊಲೆ ಕೃತ್ಯಕ್ಕೆ ಸಾಕ್ಷ್ಯ ಒದಗಿಸಿತ್ತು. ಸದ್ಯಕ್ಕೆ ಎ.7ರಂದು ಕೊಲೆ ಅಪರಾಧ ಸಾಬೀತಾಗಿದ್ದಾಗಿ ಮಂಗಳೂರಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಘೋಷಿಸಿದ್ದು, ಶಿಕ್ಷೆಯ ಪ್ರಮಾಣ ತಿಳಿಸಿಲ್ಲ.