ಮಂಗಳೂರು :ಸಿಸಿಬಿ ಪೊಲೀಸರ ಕಾರ್ಯಾಚರಣೆ ; ಮುಕ್ಕ ಬೀಚ್ ನಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರ ಸೆರೆ.

ಮಂಗಳೂರು : ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಬೆಂಗಳೂರಿನಿಂದ ಖರೀದಿಸಿ ಸುರತ್ಕಲ್ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ 10 ಗ್ರಾಂ ಎಂಡಿಎಂಎ ಯನ್ನು ವಶಪಡಿಸಿದ್ದಾರೆ.
ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಪಾರ್ಸೆಲ್ ಮೂಲಕ ತಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇನ್ನೋವಾ ಕಾರಿನಲ್ಲಿ ಮುಕ್ಕ- ಮಾಲೆಮಾರ್ ಬೀಚ್ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಎ.10 ರಂದು ದಾಳಿ ನಡೆಸಿದ್ದಾರೆ. ದೇರಳಕಟ್ಟೆ ಕಿನ್ಯಾ ನಿವಾಸಿ, ಕಾಟಿಪಳ್ಳದಲ್ಲಿ ವಾಸವಿದ್ದ ಮೊಹಮ್ಮದ್ ಆಸೀಫ್(24), ಮುಕ್ಕ ಸುರತ್ಕಲ್ ನಿವಾಸಿ ಅಸ್ಗರ್ ಆಲಿ(31), ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಮೊಹಮ್ಮದ್ ರಶೀಮ್(24) ಬಂಧಿತರು.

ರೂ. 1 ಲಕ್ಷ ಮೌಲ್ಯದ 10 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, ನಗದು ಹಣ ರೂ. 4000/-, 4 ಮೊಬೈಲ್ ಫೋನ್ ಗಳು, KA-31-N-6311 ಟೊಯೊಟಾ ಇನ್ನೋವಾ ಕಾರು ಸಹಿತ ಒಟ್ಟು ರೂ. 9,24,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಲಾಗಿದೆ.. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಬೆಂಗಳೂರಿನಿಂದ ಬಸ್ ನಲ್ಲಿ ಪಾರ್ಸೆಲ್ ಮೂಲಕ ಮಾದಕ ವಸ್ತುವಾದ ಎಂಡಿಎಂಎ ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿರುವುದಾಗಿದೆ. ಆರೋಪಿಗಳ ಪೈಕಿ ಮೊಹಮ್ಮದ್ ಅಸೀಫ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟದ ಹಾಗೂ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು 2 ಪ್ರಕರಣ ದಾಖಲಾಗಿರುತ್ತದೆ.