ಮಂಡ್ಯ : ಒಬ್ಬರಲ್ಲ, ಮೂವರು ಯುವಕರ ಮದುವೆ ; ಹಣ, ಬಂಗಾರ ಎಗರಿಸಿಕೊಂಡು ಪರಾರಿ, ಮತ್ತೊಬ್ಬನಿಗೆ ಗಾಳ ಹಾಕುತ್ತಿದ್ದಾಗಲೇ ಮಂಡ್ಯದಲ್ಲಿ ಎಸ್ಕೇಪ್..!! ಸುಂದರಿ ವಿರುದ್ಧ ಎಫ್ಐಆರ್..

ಮಂಡ್ಯ: ಯುವತಿಯೊಬ್ಬಳು ತನ್ನ ಮದುವೆ ವಿಚಾರ ಮುಚ್ಚಿಟ್ಟು ಮತ್ತೊಬ್ಬನ ಜೊತೆ ಪ್ರೀತಿಯ ನಾಟಕವಾಡಿ ಎರಡನೇ ಮದುವೆ ಮಾಡಿಕೊಂಡು ಆತನಿಂದ ಸುಮಾರು 15 ಲಕ್ಷ ರೂ. ಹಣ ಪಡೆದು ಕೈಕೊಟ್ಟಿರುವ ಘಟನೆ ನಡೆದಿದ್ದು, ನೊಂದ ಯುವಕ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದ ವೈಷ್ಣವಿ ಕೆ.ಪಿ. ವಂಚನೆ ಮಾಡಿರುವ ಯುವತಿ. ಮಂಡ್ಯ ತಾಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದ ಯುವಕ ಎಂ.ಬಿ.ಶಶಿಕಾಂತ್ ವಂಚನೆಗೊಳಗಾದ ಯುವಕ.


ಶಿಕಾಂತ್‌ಗೆ ವೈಷ್ಣವಿಯ ಪರಿಚಯವಾಗಿದ್ದು, ನಂತರ ಅದು ಪ್ರೇಮಕ್ಕೆ ತಿರುಗಿದೆ. ಮಾ.24 ರಂದು ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಇದಕ್ಕೂ ಮೊದಲೇ ವೈಷ್ಣವಿಗೆ ಬೆಂಗಳೂರಿನ ಶಿವು ಎಂಬಾತನ ಜೊತೆ ಮದುವೆಯಾಗಿತ್ತು. ಆದರೆ, ಈ ವಿಚಾರ ಮುಚ್ಚಿಟ್ಟು ಶಶಿಕಾಂತ್ ಜೊತೆ ಮದುವೆಯಾಗಿದ್ದಾಳೆ. ಮದುವೆ ಮುಂಚೆ ನಾವು ಆರ್ಥಿಕ ಸದೃಢರಾಗಿಲ್ಲ ಎಂದು ಹೇಳಿ ಶಶಿಕಾಂತ್ ಬಳಿ 100 ಗ್ರಾಂ ಚಿನ್ನಾಭರಣ, 11 ಲಕ್ಷ ರೂ. ನಗದು, ತಂದೆಗೆ ಪ್ಯಾಸೆಂಜರ್ ಆಟೋ, ಬಾಡಿಗೆ ಮನೆಗೆ 50 ಸಾವಿರ ರೂ., ಮನೆಗೆ ಬೇಕಾದ ಫ್ರಿಡ್ಜ್, ವಾಷಿಂಗ್ ಮಷಿನ್, ಮೊಬೈಲ್ ಫೋನ್, 46 ಗ್ರಾಂನ ತಾಳಿ ಎಲ್ಲವನ್ನೂ ಮಾಡಿಸಿಕೊಂಡಿದ್ದಾಳೆ.
ಆದರೆ, ಮದುವೆಯ ಮಾರನೇ ದಿನ ಮಾ.25 ರಂದು ನನಗೆ ಬೇಜಾರಾಗುತ್ತಿದೆ, ಎಲ್ಲಿಯಾದರೂ ಹೊರಗಡೆ ಹೋಗೋಣ ಎಂದು ಶಶಿಕಾಂತ್‌ನನ್ನ ಪುಸಲಾಯಿಸಿದ ವೈಷ್ಣವಿ, ಚನ್ನಪಟ್ಟಣದ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ನನಗೆ ಬಾಯಾರಿಕೆಯಾಗುತ್ತಿದ್ದು, ಕುಡಿಯಲು ನೀರು ತರುವಂತೆ ಹೇಳಿದ್ದಾಳೆ. ಕಾರು ನಿಲ್ಲಿಸಿದ ಶಶಿಕಾಂತ್ ನೀರು ತೆಗೆದುಕೊಂಡು ಬರಲು ಹೋಗಿದ್ದಾಗ ವೈಷ್ಣವಿ ಕಾರಿನಿಂದ ಇಳಿದು ಮತ್ತೊಂದು ಕಾರು ಹತ್ತಿ ಹೊರಟು ಹೋಗಿದ್ದಾಳೆ. ನಡೆದ ವಿಚಾರವನ್ನು ಅವರ ತಂದೆ-ತಾಯಿ ಹಾಗೂ ನನ್ನ ಸಂಬಂಧಿಕರಿಗೆ ತಿಳಿಸಿದ್ದೇನೆ ಎಂದು ದೂರಿನಲ್ಲಿ ವಿವರಿಸಿದ್ದಾನೆ.
ಘಟನೆ ಬಗ್ಗೆ ಮಂಡ್ಯ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಾಗ, ಈಕೆಗೆ ಈ ಹಿಂದೆಯೇ ಎರಡು ಮದುವೆಯಾಗಿರುವ ಬಗ್ಗೆ ವಿಚಾರ ಬಯಲಾಗಿದೆ.
ಆಕೆಗೆ ಮದುವೆಯಾಗಿರುವುದನ್ನು ಅವಳ ತಂದೆ, ತಾಯಿಯೂ ನನಗೆ ತಿಳಿಸಿರಲಿಲ್ಲ. ಹಿಂದೊಮ್ಮೆ ಹಾಸನದ ರಘು ಎಂಬಾತನ ಜೊತೆ ಧರ್ಮಸ್ಥಳದಲ್ಲಿ ವಿವಾಹವಾಗಲು ಸಿದ್ಧತೆ ಮಾಡಿದ್ದಾಗಲೇ ಮದುವೆ ದಿನವೇ ಪ್ರೀತಿಸುತ್ತಿದ್ದ ಶಿವು ಎಂಬಾತನ ಜೊತೆ ಓಡಿ ಹೋಗಿ ಮದುವೆಯಾಗಿದ್ದಾಳೆ ಎಂಬುದು ತಿಳಿದುಬಂತು. ವೈಷ್ಣವಿ ಹಾಗೂ ಆಕೆಯ ತಂದೆ-ತಾಯಿ ಇದೇ ರೀತಿ ಯುವಕರಿಗೆ ಮೋಸ ಮಾಡುವ ಚಾಳಿ ಬೆಳೆಸಿಕೊಂಡಿದ್ದು ಮೋಸ ಮಾಡುವ ಉದ್ದೇಶದಿಂದ ನನಗೆ ಮದುವೆ ಮಾಡಿಸಿದ್ದಾರೆ. ದೂರು ಸ್ವೀಕರಿಸಿದ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ವೈಷ್ಣವಿ ಹಾಗೂ ತಂದೆ, ತಾಯಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.