ನವದೆಹಲಿ :ಭಾರತದ ವಿಮಾನಗಳಿಗೆ ಪಾಕ್ ವಾಯುಮಾರ್ಗ ಬಂದ್, ಹೇಗೆಲ್ಲ ಪರಿಣಾಮ ಬೀರಲಿದೆ..!!!

ನವದೆಹಲಿ :ಮೊದಲೇ ಹಳಸಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಇದೀಗ ಮತ್ತಷ್ಟು ಕದಡಿದೆ.
ಪಹಲ್ಗಾಮ್ ನರಮೇಧದ ಬಳಿಕ ಭಾರತವು ಪಾಕ್ ವಿರುದ್ಧ ಕೈಗೊಂಡಿರುವ ರಾಜತಾಂತ್ರಿಕ ಕ್ರಮಗಳಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಪಾಕಿಸ್ತಾನವು ತಮ್ಮ ವಾಯುಮಾರ್ಗವನ್ನು ಬಂದ್ ಮಾಡಿದೆ. ಆ ಮೂಲಕ, ಭಾರತದಿಂದ ಹೊರಡುವ ಅಂತರಾಷ್ಟ್ರೀಯ ವಿಮಾನಗಳಿಗೆ ಇದರ ಬಿಸಿ ತಟ್ಟಲಿದೆ. ಇದು ಪ್ರಯಾಣದ ಅವಧಿಯನ್ನು ಜಾಸ್ತಿ ಮಾಡುವುದು ಒಂದು ಕಡೆಯಾದರೆ, ಟಿಕೆಟ್ ದರ ಏರಿಕೆಯ ಸಾಧ್ಯತೆಯೂ ಇದೆ.
ಭಾರತದಿಂದ ಹೋಗುವ ಹಲವು ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳು ಪಾಕಿಸ್ತಾನದ ವಾಯು ಪ್ರದೇಶದ ಮೇಲೆ ಹೋಗುತ್ತವೆ. ಪಶ್ಚಿಮ ಏಷ್ಯಾ, ಐರೋಪೀಯ ದೇಶಗಳನ್ನು ತಲುಪಲು ಇದು ಹತ್ತಿರದ ಮಾರ್ಗವಾಗುತ್ತದೆ. ಇಲ್ಲದಿದ್ದರೆ ಪರ್ಯಾಯ ಮಾರ್ಗಗಳಲ್ಲಿ ಹೋಗಬೇಕು. ಇಂಥ ಕೆಲ ಮಾರ್ಗಗಳು ಬಳಸು ಮಾರ್ಗಗಳಾಗಿರುತ್ತವೆ. ಇವು ತುಸು ಬಳಸು ಮಾರ್ಗಗಳಾದ್ದರಿಂದ ಸಹಜವಾಗಿ ಇಂಧನ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ವಿಮಾನ ಪ್ರಮಾಣ ದರವನ್ನು ಏರಿಸುವುದು ಅನಿವಾರ್ಯವಾಗುತ್ತದೆ.
ಯಾವುದೇ ವಿಮಾನವು ಒಂದು ದೇಶದ ವಾಯುಪ್ರದೇಶದ ಮೇಲೆ ಹೋದರೆ, ಆ ದೇಶಕ್ಕೆ ಓವರ್ಫ್ಲೈಟ್ ಫೀ ಅಥವಾ ನ್ಯಾವಿಗೇಶನ್ ಚಾರ್ಜ್ ಅನ್ನು ನೀಡುತ್ತದೆ. ಆ ಪ್ರದೇಶದ ಫ್ಲೈಟ್ ಟ್ರಾಫಿಕ್ ನಿರ್ವಹಣೆಗೆ ಆಗುವ ವೆಚ್ಚವನ್ನು ಭರಿಸಲು ಈ ಶುಲ್ಕವನ್ನು ಪಡೆಯಲಾಗುತ್ತದೆ. ಕೋಟಿ ರೂಗಳಷ್ಟು ಶುಲ್ಕವನ್ನು ಈ ವಿಮಾನಗಳು ಪಾಕಿಸ್ತಾನಕ್ಕೆ ಪಾವತಿಸುತ್ತಿದ್ದುವು.
ಫೆಬ್ರವರಿ 2019ರಲ್ಲಿ ಪುಲ್ವಾಮಾ ಉಗ್ರರ ದಾಳಿಯ ನಂತರ, ಭಾರತೀಯ ವಾಯುಸೇನೆ ಬಾಲಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿತ್ತು. ಇದಾದ ನಂತರ, ಹಲವು ತಿಂಗಳು ಪಾಕ್ ವಾಯುಮಾರ್ಗ ಭಾರತಕ್ಕೆ ಬಂದ್ ಆಗಿತ್ತು.ಪಾಕಿಸ್ತಾನವು ವಾಯುಪ್ರದೇಶವನ್ನು ಬಂದ್ ಮಾಡಿದ್ದಾಗ, ಭಾರತದ ವಿಮಾನಯಾನ ಸಂಸ್ಥೆಗಳಿಗೆ ಸುಮಾರು 700 ಕೋಟಿ ನಷ್ಟವಾಗಿತ್ತು.
ಬೇರೆ ಮಾರ್ಗದಲ್ಲಿ ಸಂಚರಿಸಬೇಕಾದ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಮೇಲೆ ನೇರ ಪರಿಣಾಮ ಬೀರಲಿದೆ.